ತಮಿಳುನಾಡು: ಭಾರತದಲ್ಲಿರುವ ಪ್ರತಿಯೊಬ್ಬರು ಕನಿಷ್ಟ ಒಂದು ದಕ್ಷಿಣ ಭಾರತೀಯ ಭಾಷೆಯನ್ನು ಕಲಿತುಕೊಳ್ಳಬೇಕೆಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಹೇಳಿದರು.
ಇಶಾ ಫೌಂಡೇಶನ್ ಆಶ್ರಯದಲ್ಲಿ ನಡೆದಿದ್ದ ಸುಸ್ಥಿರ ಮರ ಆಧಾರಿತ ಕೃಷಿ ಕುರಿತಾದ ಮೆಗಾ ರೈತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನು ಕನಿಷ್ಠ ಒಂದು ದಕ್ಷಿಣ ಭಾರತೀಯ ಭಾಷೆಯನ್ನು ಕಲಿಯಬೇಕು. ನಾನು ಕೂಡ ಒಂದನ್ನು ಕಲಿಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿ ಸಾಂಸ್ಕೃತಿಕ ಏಕೀಕರಣವನ್ನು ಉಲ್ಲೇಖಿಸುತ್ತಾ, ಪರಸ್ಪರರ ಭಾಷೆಗಳನ್ನು ಕಲಿಯುವುದು ದೇಶಾದ್ಯಂತ ಬಲವಾದ ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದರು. ದೇಶದ ಇತರೆ ಭಾಷೆಯನ್ನು ಕಲಿಯುವುದರಿಂದ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಶಕ್ತಿ ಅಧಿಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈಶಾ ಫೌಂಡೇಶನ್ ರೈತರಲ್ಲಿ ಮರ ಆಧಾರಿತ ಕೃಷಿಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ, ಇದು ಪರಿಸರ ಆರೋಗ್ಯ ಮತ್ತು ರೈತರ ಸಮೃದ್ಧಿಯನ್ನು ಸುಧಾರಿಸುತ್ತದೆ. ಇಂತಹ ಕೃಷಿ ಪದ್ಧತಿಗಳು ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಪರಿಸರವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.
ಸದ್ಗುರುಗಳ ಮಾರ್ಗದರ್ಶನದಲ್ಲಿ, ಪ್ರಕೃತಿ ಸಂರಕ್ಷಣೆಯಲ್ಲಿ ರೈತರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವ ಪ್ರಯತ್ನಗಳು ಮುಂದುವರಿಯುತ್ತಿದ್ದು, ಈಶಾ ಫೌಂಡೇಶನ್‌ನ ಉಪಕ್ರಮಗಳಿಂದ ಸ್ಫೂರ್ತಿ ಪಡೆದು, ಮರ ಆಧಾರಿತ ಕೃಷಿಯ ಕುರಿತು ಹೊಸ ನೀತಿಯನ್ನು ರೂಪಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಕೃಷಿಯನ್ನು ಅನಗತ್ಯ ನಿಯಮಗಳು ಮತ್ತು ನಿಬಂಧನೆಗಳಿಂದ ಮುಕ್ತಗೊಳಿಸಬೇಕು.ರೈತರು ತಮ್ಮ ಭೂಮಿಯಲ್ಲಿ ಏನು ಬೆಳೆಯುತ್ತಾರೋ ಅದರ ಮೇಲೆ ಸಂಪೂರ್ಣ ಹಕ್ಕುಗಳನ್ನು ರೈತನೇ ಹೊಂದಿರಬೇಕು ಎಂದು ಪ್ರತಿಪಾದಿಸಿದರು,(ಏಜನ್ಸೀಸ್).