ಡಿಸಿಎಂ ಏಕನಾಥ್ ಶಿಂಧೆ & ಸಂಜಯ್ ರಾವತ್ 
ದೇಶ

ಶಿಂಧೆ ಶಿವಸೇನೆಯ ಕಾರ್ಪೊರೇಟರ್​ಗಳಿಗೂ ಬಿಜೆಪಿ ಮೇಯರ್ ಆಗೋದು ಇಷ್ಟವಿಲ್ಲ: ಸಂಜಯ್ ರಾವತ್ | Sanjay Raut

ಮುಂಬೈ: ಬೃಹನ್ಮುಂಬೈ ಪಾಲಿಕೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿರುವ ಬಿಜೆಪಿ ಮತ್ತು ಶಿಂಧೆ ಶಿವಸೇನಾ ನಡುವೆ ಪಾಲಿಕೆ ಮೇಯರ್ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದರ ನಡುವೆ ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವತ್ ಶಿಂಧೆ ಶಿವಸೇನಾ ಕಾರ್ಪೊರೇಟರ್​ಗಳಿಗೂ ಮುಂಬೈನಲ್ಲಿ ಬಿಜೆಪಿ ಮೇಯರ್ ಆಗೋದು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಭಾನುವಾರ(ಜ. 18) ಮಾತನಾಡಿರುವ ಅವರು, ಏಕನಾಥ್ ಶಿಂಧೆ ಅವರ ಶಿವಸೇನೆಯ ಅನೇಕ ಕಾರ್ಪೊರೇಟರ್​ಗಳು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯ ಜೊತೆ ಸಂಪರ್ಕದಲ್ಲಿದ್ದಾರೆ. ತಮ್ಮ ಕಾರ್ಪೋರೇಟರ್​ಗಳನ್ನು ಅಪಹರಿಸುತ್ತಾರೆ ಎಂದು ಏಕನಾಥ್ ಶಿಂಧೆ ಅವರನ್ನು ಹೋಟೆಲ್​ನಲ್ಲಿ ಬಂಧಿಸಿಟ್ಟಿದ್ದಾರೆ. ತಾಜ್​ ಹೋಟೆಲ್​ ಅನ್ನು ಜೈಲಾಗಿ ಪರಿವರ್ತಿಸಿದ್ದಾರೆ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ.
227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಬೇಕು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ 118 ವಾರ್ಡ್​ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳುತ್ತಿರುವ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ. 

ಆದರೆ ಏಕನಾಥ್ ಶಿಂಧೆ ನೇತೃತ್ಬದ ಶಿವಸೇನೆಯ 29 ಕಾರ್ಪೊರೇಟ್​ಗಳಲ್ಲಿ ಕೆಲವರು ಉದ್ದವ್ ಠಾಕ್ರೆ ಸಂಪರ್ಕಕ್ಕೆ ಬಂದು ಹೈಜಾಕ್ ಆಗುವ ಸಾಧ್ಯತೆ ಹಿನ್ನೆಲೆ ಶನಿವಾರವೇ ಎಲ್ಲರನ್ನು ಬಾಂದ್ರಾದಲ್ಲಿರುವ ತಾಜ್​ ಹೋಟೆಲ್​ಗಳಿಗೆ ಸ್ಥಳಾಂತರಿಸಿದ್ದಾರೆ.
ಪಾಲಿಕೆಯಲ್ಲಿ 89 ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಈ ಬಾರಿ ಮೇಯರ್ ಹುದ್ದೆಯನ್ನು ಪಡೆಯಲೇಬೇಕು ಎಂಬ ನಿಲುವಿಗೆ ಬಂದಿದೆ. ಆದರೆ ಶಿಂಧೆ ಸೇನೆಯ ಕೆಲವು ಕಾರ್ಪೊರೇಟರ್​ಗಳು ನಮ್ಮವರನ್ನೇ ಮೇಯರ್ ಮಾಡಲು ಪ್ರಯತ್ನಿಸುವಂತೆ ಏಕನಾಥ್ ಶಿಂಧೆ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).