ಇಪಿಎಫ್ಒನಿಂದ ಹೊಸ ನಿಯಮ: ಹಣ ವಿತ್ಡ್ರಾ, ಕ್ಲೈಮ್ ಸೆಟ್ಲ್‌ಮೆಂಟ್, ಡಿಜಿಟಲ್ ಸೇವೆ ಸೇರಿ 8 ಮಹತ್ವದ ಬದಲಾವಣೆಗಳು! EPFO New Rules
- ಇಪಿಎಫ್‌ಒ ನೌಕರರ ಅನುಕೂಲಕ್ಕಾಗಿ ಪಿಎಫ್ ಹಿಂಪಡೆಯುವಿಕೆ ಮತ್ತು ಕ್ಲೈಮ್ ಸೆಟ್ಲ್‌ಮೆಂಟ್ ನಿಯಮಗಳಲ್ಲಿ ಮಹತ್ವದ ಸುಧಾರಣೆ
- ಶೇ 75ರಷ್ಟು ಹಣವನ್ನು ಭಾಗಶಃ ಪಡೆಯುವ ಹಾಗೂ ಶೇ 25ರಷ್ಟು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಹೊಸ ವ್ಯವಸ್ಥೆ ಜಾರಿ
- ಸಂಪೂರ್ಣ ಪಿಎಫ್ ಪಡೆಯುವಂತಿಲ್ಲ ಹಾಗೂ ಪೂರ್ಣ ವಿತ್‌ಡ್ರಾವಲ್‌ಗೆ 12 ತಿಂಗಳ ನಿರುದ್ಯೋಗ ಅವಧಿ ಕಡ್ಡಾಯ
- ಇಪಿಎಸ್ ಪಿಂಚಣಿ ಹಣ ಅಂತಿಮವಾಗಿ ಪಡೆಯಲು ಇದ್ದ ಹಿಂದಿನ 2 ತಿಂಗಳ ಕಾಯುವಿಕೆ ಅವಧಿಯನ್ನು 36 ತಿಂಗಳಿಗೆ ಹೆಚ್ಚಿಸಲಾಗಿದೆ
EPFO New Rules : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ನೌಕರರ ಅನುಕೂಲಕ್ಕಾಗಿ ಪ್ರಮುಖ ಸುಧಾರಣೆಗಳನ್ನು ತಂದಿದ್ದು, ಪಿಎಫ್ ಹಣ ಹಿಂಪಡೆಯುವಿಕೆ, ಕ್ಲೈಮ್ ಸೆಟ್ಲ್‌ಮೆಂಟ್ ಮತ್ತು ಡಿಜಿಟಲ್ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ನಿವೃತ್ತಿ ಉಳಿತಾಯಕ್ಕೆ ಭದ್ರತೆ ನೀಡುತ್ತಲೇ, ತುರ್ತು ಸಂದರ್ಭಗಳಲ್ಲಿ ಹಣ ಲಭ್ಯವಾಗುವಂತೆ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಹಾಗಾದರೆ, ಏನೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಪಿಎಫ್ ಕೊಡುಗೆ
ಉದ್ಯೋಗಿ ಮತ್ತು ಉದ್ಯೋಗದಾತರ ಸಾಮಾನ್ಯ ಪಿಎಫ್ ಕೊಡುಗೆಯು ಶೇ. 12ರಷ್ಟೇ ಮುಂದುವರಿಯುತ್ತದೆ. ಆದರೆ, ಭವಿಷ್ಯದಲ್ಲಿ ಪಿಎಫ್ ವೇತನ ಮಿತಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲು ಹೊಸ ನೀತಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಿಂದಿನ ನಿಯಮಗಳಲ್ಲಿ ಇದ್ದ ನಿಗದಿತ 15,000 ರೂ. ಮಿತಿಯ ಬದಲು, ಕೇಂದ್ರ ಸರ್ಕಾರವು ಅಧಿಕೃತವಾಗಿ ಅಧಿಸೂಚಿಸುವ ವೇತನ ಮಿತಿಯನ್ನು ಅನುಸರಿಸುವಂತೆ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ. ಆದಾಗ್ಯೂ, ಪಿಎಫ್ ವೇತನ ಮಿತಿಯನ್ನು 25,000 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಸದ್ಯಕ್ಕೆ ಅಧಿಕೃತ ನಿಯಮವೆಂದು ಪರಿಗಣಿಸುವಂತಿಲ್ಲ. ಈ ಕುರಿತು ಸರ್ಕಾರದ ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
ಭಾಗಶಃ ಹಣ ಹಿಂಪಡೆಯುವಿಕೆಯ ಸರಳ
ಈ ಹಿಂದೆ ಪಿಎಫ್ ಹಣ ಹಿಂಪಡೆಯಲು ಹಲವು ಕಠಿಣ ನಿಯಮಗಳಿದ್ದವು ಮತ್ತು ತುಂಬಾ ಕಾಯಬೇಕಿತ್ತು, ಆದರೆ ಈಗ ಇಪಿಎಫ್‌ಒ (EPFO) ಆ 13 ಸಂಕೀರ್ಣ ನಿಯಮಗಳನ್ನು ಸರಳಗೊಳಿಸಿ ತುರ್ತು ಅಗತ್ಯಗಳು (ಅನಾರೋಗ್ಯ, ಶಿಕ್ಷಣ, ಮದುವೆ), ಕೌಟುಂಬಿಕ ಅಥವಾ ವಸತಿ ಅಗತ್ಯಗಳು ಹಾಗೂ ವಿಶೇಷ ಸಂದರ್ಭಗಳು ಎಂಬ ಮೂರು ಮುಖ್ಯ ವರ್ಗಗಳಾಗಿ ವಿಂಗಡಿಸಿದೆ. ಇದರಿಂದ ನೌಕರರು ತಮ್ಮ ಅಗತ್ಯಕ್ಕೆ ತಕ್ಕಂತೆ ಪಿಎಫ್ ಹಣವನ್ನು ಭಾಗಶಃ ಪಡೆಯುವುದು ಬಹಳ ಸುಲಭವಾಗಿದೆ.
3. 12 ತಿಂಗಳ ಸೇವಾ ಅವಶ್ಯಕತೆ
ಹಿಂಈ ದೆ ಪಿಎಫ್ ಹಣವನ್ನು ಭಾಗಶಃ ಹಿಂಪಡೆಯಲು ವಿಭಿನ್ನ ಪ್ರಕರಣಗಳಲ್ಲಿ ದೀರ್ಘಕಾಲದ ಸೇವೆಯ ಅವಶ್ಯಕತೆ ಇದ್ದರೆ, ಹೊಸ ವ್ಯವಸ್ಥೆಯು ಭಾಗಶಃ ಹಿಂಪಡೆಯುವಿಕೆಗಾಗಿ ಕನಿಷ್ಠ 12 ತಿಂಗಳ ಸದಸ್ಯತ್ವವನ್ನು ಕಡ್ಡಾಯಗೊಳಿಸುವ ಮೂಲಕ ಗೊಂದಲವನ್ನು ನಿವಾರಿಸಿದೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಕಾರಣಗಳನ್ನು ವಿವರಿಸುವ ಅಗತ್ಯತೆಯನ್ನು ಸರ್ಕಾರವು ಕೈಬಿಟ್ಟಿದೆ.
4. ಶೇ. 75ರಷ್ಟು ಪಿಎಫ್ ಮೊತ್ತ ಬಳಸಿಕೊಳ್ಳುವ ಅವಕಾಶ
ಹೊಸ ನೀತಿಯ ಪ್ರಕಾರ ನೌಕರರು ತಮ್ಮ ಪಿಎಫ್ ಖಾತೆಯಲ್ಲಿರುವ ಅರ್ಹ ಮೊತ್ತದ (ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆ ಹಾಗೂ ಬಡ್ಡಿ ಸೇರಿ) ಶೇ. 75ರಷ್ಟು ಹಣವನ್ನು ತುರ್ತು ಅಗತ್ಯಗಳಿಗಾಗಿ ಭಾಗಶಃ ಮುಂಡಾವಾಗಿ ಪಡೆಯಬಹುದು ಮತ್ತು ನಿವೃತ್ತಿ ಭದ್ರತೆಗಾಗಿ ಶೇ. 25ರಷ್ಟು ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ರೂಪದಲ್ಲಿ ಖಾತೆಯಲ್ಲಿ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಇದರೊಂದಿಗೆ ಶಿಕ್ಷಣಕ್ಕೆ ಗರಿಷ್ಠ 10 ಬಾರಿ ಮತ್ತು ಮದುವೆಗೆ 5 ಬಾರಿ ಪಿಎಫ್ ಹಣ ಹಿಂಪಡೆಯುವ ಸೌಲಭ್ಯವನ್ನು ಹೆಚ್ಚಿಸಲಾಗಿದೆ.
5. ಕೆಲಸ ಕಳೆದುಕೊಂಡ ತಕ್ಷಣ ಪೂರ್ತಿ ಪಿಎಫ್ ಸಿಗುವುದಿಲ್ಲ
ಉದ್ಯೋಗ ತೊರೆದ ಅಥವಾ ಕೆಲಸ ಕಳೆದುಕೊಂಡ ತಕ್ಷಣ (ಹಿಂದಿನಂತೆ 2 ತಿಂಗಳ ಒಳಗೆ) ಸಂಪೂರ್ಣ ಪಿಎಫ್ ಹಣವನ್ನು ಪಡೆದುಕೊಳ್ಳುವ ನಿಯಮ ಬದಲಾಗಿದೆ. ಪೂರ್ಣ ಪ್ರಮಾಣದ ಪಿಎಫ್ ಹಣ ಪಡೆಯಲು ಇನ್ನು ಮುಂದೆ 12 ತಿಂಗಳ ನಿರುದ್ಯೋಗ ಅವಧಿ ಪೂರ್ಣಗೊಳ್ಳಬೇಕು. ಆದರೆ ತಕ್ಷಣದ ಆರ್ಥಿಕ ಅಗತ್ಯಗಳಿಗೆ ಮೇಲಿನ ನಿಯಮದಂತೆ ಭಾಗಶಃ ಹಣ ಪಡೆಯಲು ಅವಕಾಶವಿರುತ್ತದೆ.
6. ಇಪಿಎಸ್ ಪಿಂಚಣಿ ಹಿಂಪಡೆಯುವಿಕೆ: 36 ತಿಂಗಳ ಕಾಯುವಿಕೆ ಅವಧಿ
ನೌಕರರ ಪಿಂಚಣಿ ಯೋಜನೆಗೆ (EPS) ಸಂಬಂಧಿಸಿದಂತೆ, ಉದ್ಯೋಗ ಬಿಟ್ಟ ಬಳಿಕ ಅಂತಿಮ ಪಿಂಚಣಿ ಹಣ ಹಿಂಪಡೆಯಲು ಇದ್ದ ಹಿಂದಿನ 2 ತಿಂಗಳ ಅವಧಿಯನ್ನು ಈಗ 36 ತಿಂಗಳಿಗೆ ಹೆಚ್ಚಿಸಲಾಗಿದೆ. ಉದ್ಯೋಗಿಗಳು ತಕ್ಷಣಕ್ಕೆ ಪಿಂಚಣಿ ಹಣ ಪಡೆದು ಮುಗಿಸದೆ, ದೀರ್ಘಕಾಲಿಕ ಪಿಂಚಣಿ ಸೌಲಭ್ಯವನ್ನು ಮುಂದುವರಿಸಲು ಇದು ಉತ್ತೇಜನ ನೀಡುತ್ತದೆ.
7. ಕ್ಲೈಮ್ ಸೆಟ್ಲ್‌ಮೆಂಟ್ ಪ್ರಕ್ರಿಯೆ ಚುರುಕು
ಡಿಜಿಟಲ್ ಸುಧಾರಣೆಗಳ ಭಾಗವಾಗಿ ಇಪಿಎಫ್‌ಒ ಸ್ವಯಂಚಾಲಿತ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಿದೆ. ಕ್ಲೈಮ್‌ಗಳ ವಿಲೇವಾರಿ ವೇಗ ಹೆಚ್ಚಾಗಿದ್ದು, ವಿಳಂಬವಾಗುವ ಅರ್ಜಿಗಳ ಮೇಲೆ ನಿಗಾ ಇಡಲು ಮತ್ತು ಹೊಣೆಗಾರಿಕೆ ನಿಗದಿ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ತರಲಾಗಿದೆ.
8. ಡಿಜಿಟಲ್ ನಾಮಿನೇಷನ್ ಕಡ್ಡಾಯ
ಸಂಪೂರ್ಣ ಡಿಜಿಟಲೀಕರಣದ ಭಾಗವಾಗಿ ಆನ್‌ಲೈನ್ ನಾಮಿನೇಷನ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ನೌಕರರು ಕಾಗದಪತ್ರಗಳ ಹಂಗಿಲ್ಲದೆ ಮನೆಯಲ್ಲೇ ಕುಳಿತು ನಾಮಿನಿ ವಿವರಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಬಹುದು. ಹಳೆಯ ನಾಮಿನೇಷನ್‌ಗಳು ಹೊಸ ನಿಯಮಗಳಿಗೆ ಅನುಗುಣವಾಗಿಲ್ಲದಿದ್ದರೆ, ಮದುವೆ ಅಥವಾ ಇತರೆ ಕೌಟುಂಬಿಕ ಬದಲಾವಣೆಗಳ ಸಂದರ್ಭದಲ್ಲಿ ಹೊಸದಾಗಿ ನಾಮಿನಿ ವಿವರಗಳನ್ನು ಅಪ್‌ಡೇಟ್ ಮಾಡುವುದು ಉತ್ತಮ.
ಹೊಸ ಇಪಿಎಫ್‌ಒ (EPFO) ನಿಯಮಗಳು ನೌಕರರಿಗೆ ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣ ಪಡೆಯುವುದನ್ನು ಸುಲಭಗೊಳಿಸುವುದರ ಜೊತೆಗೆ ನಿವೃತ್ತಿ ಉಳಿತಾಯ ಸಂಪೂರ್ಣ ಖಾಲಿಯಾಗದಂತೆ ಎಚ್ಚರಿಕೆ ವಹಿಸುತ್ತವೆ. ಇದಕ್ಕಾಗಿ ಶೇ. 75ರಷ್ಟು ಹಣವನ್ನು ಭಾಗಶಃ ಬಳಸಿಕೊಳ್ಳಲು ಅವಕಾಶ ನೀಡುತ್ತಲೇ ಶೇ. 25ರಷ್ಟು ಕನಿಷ್ಠ ಬ್ಯಾಲೆನ್ಸ್ ಕಡ್ಡಾಯಗೊಳಿಸಲಾಗಿದ್ದು, ಉದ್ಯೋಗಿಗಳು ಭಾಗಶಃ ಹಿಂಪಡೆಯಲು 12 ತಿಂಗಳ ಸೇವೆ, ಪೂರ್ಣ ಪಿಎಫ್ ಪಡೆಯಲು 12 ತಿಂಗಳ ನಿರುದ್ಯೋಗ ಅವಧಿ ಹಾಗೂ ಇಪಿಎಸ್ ಪಿಂಚಣಿಗೆ 36 ತಿಂಗಳ ಕಾಯುವಿಕೆಯ ನಿಯಮಗಳನ್ನು ನೆನಪಿನಲ್ಲಿಡಬೇಕು. ಒಟ್ಟಾರೆಯಾಗಿ 2026ರ ಈ ಸುಧಾರಣೆಗಳು ಕ್ಲೈಮ್ ಪ್ರಕ್ರಿಯೆ ಸರಳೀಕರಣ, ಡಿಜಿಟಲ್ ಸೇವೆಗಳ ವೃದ್ಧಿ ಮತ್ತು ನಿವೃತ್ತಿ ಭದ್ರತೆಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿವೆ, (ಏಜೆನ್ಸೀಸ್).