ಒಂದು ವರ್ಷದಲ್ಲಿ ಎಷ್ಟು ಬಾರಿ ಪಿಎಫ್​ ಹಣವನ್ನು ಹಿಂಪಡೆಯಬಹುದು? EPFO ನಿಯಮ ಏನು ಹೇಳುತ್ತೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ... 
ದೇಶ

ಒಂದು ವರ್ಷದಲ್ಲಿ ಎಷ್ಟು ಬಾರಿ ಪಿಎಫ್​ ಹಣವನ್ನು ಹಿಂಪಡೆಯಬಹುದು? EPFO ನಿಯಮ ಏನು ಹೇಳುತ್ತೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ...

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗಿಗಳ ಭವಿಷ್ಯದ ಭದ್ರತೆ ಹಾಗೂ ನಿವೃತ್ತಿ ಜೀವನದ ಆಸರೆಯಾಗಿರುವ ನೌಕರರ ಭವಿಷ್ಯ ನಿಧಿ
  • ತುರ್ತು ಸಂದರ್ಭಗಳಲ್ಲಿ ಹಣ ಹಿಂಪಡೆಯಲು ಬಯಸುವ ಕೋಟ್ಯಂತರ ಉದ್ಯೋಗಿಗಳಿಗೆ ಬಿಗ್​ ಅಪ್​​ಡೇಟ್​
  • 2026ರಲ್ಲಿ ಹೊಸ ಮತ್ತು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿರುವ ಇಪಿಎಫ್​ಒ
  • ಇನ್ಮುಂದೆ ಸಾಮಾನ್ಯ ಅಗತ್ಯಗಳಿಗಾಗಿ ಪದೇ ಪದೆ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶವಿರುವುದಿಲ್ಲ
EPFO : ಉದ್ಯೋಗಿಗಳ ಭವಿಷ್ಯದ ಭದ್ರತೆ ಹಾಗೂ ನಿವೃತ್ತಿ ಜೀವನದ ಆಸರೆಯಾಗಿರುವ ನೌಕರರ ಭವಿಷ್ಯ ನಿಧಿ ಹಣವನ್ನು ತುರ್ತು ಸಂದರ್ಭಗಳಲ್ಲಿ ಹಿಂಪಡೆಯಲು ಬಯಸುವ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಬಿಗ್ ಅಪ್ಡೇಟ್ ನೀಡಿದೆ. ಹೌದು, ನಿವೃತ್ತಿಗೂ ಮುನ್ನವೇ ಪಿಎಫ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಹಾಗೂ ನಿಯಮಗಳನ್ನು ವ್ಯವಸ್ಥಿತಗೊಳಿಸಲು ಇಪಿಎಫ್​ಒ 2026ರಲ್ಲಿ ಹೊಸ ಮತ್ತು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಉದ್ಯೋಗಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಇನ್ಮುಂದೆ ಸಾಮಾನ್ಯ ಅಗತ್ಯಗಳಿಗಾಗಿ ಪದೇ ಪದೆ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶವಿರುವುದಿಲ್ಲ, ಬದಲಿಗೆ ಉದ್ಯೋಗಿಗಳ ನಿವೃತ್ತಿ ನಿಧಿಯನ್ನು ಸಂರಕ್ಷಿಸುವ ಉದ್ದೇಶದಿಂದ ಕೇವಲ ನಿಜವಾದ ತುರ್ತು ಸಂದರ್ಭಗಳಲ್ಲಿ ಮಾತ್ರ ಹಣ ವಿತ್‌ಡ್ರಾ ಮಾಡುವಂತೆ ಇಪಿಎಫ್​ಒ ಸೂಚಿಸಿದೆ. ಆದಾಗ್ಯೂ, ವೈದ್ಯಕೀಯ ತುರ್ತುಸ್ಥಿತಿಯಂತಹ ವಿಶೇಷ ಸಂದರ್ಭಗಳಲ್ಲಿ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆಯನ್ನು ನೀಡಲಾಗಿದ್ದು, ನೌಕರರ ಖಾತೆಯಲ್ಲಿರುವ ಒಟ್ಟು ಬ್ಯಾಲೆನ್ಸ್ ಆಧಾರದ ಮೇಲೆ ಪಿಎಫ್ ಹಣ ಹಿಂಪಡೆಯುವ ಅರ್ಜಿಗೆ ಅನುಮೋದನೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇಪಿಎಫ್‌ಒ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಸಾಮಾನ್ಯ ವರ್ಗದ ಉದ್ಯೋಗಿಗಳು ವರ್ಷಕ್ಕೆ ಕೇವಲ ಒಂದು ಬಾರಿ ಮಾತ್ರ ಪಿಎಫ್ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಈ ನಿಯಮ ಅನ್ವಯಿಸುವುದಿಲ್ಲ, ಆರೋಗ್ಯ ತುರ್ತುಸ್ಥಿತಿ ಎದುರಾದರೆ ತಿಂಗಳಿಗೆ 2 ರಿಂದ 4 ಬಾರಿಯವರೆಗೆ ಪಿಎಫ್ ಕ್ಲೈಮ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ, ಪ್ರತಿ ಅರ್ಜಿಯ ಅನುಮೋದನೆಯು ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಲಭ್ಯವಿರುವ ಒಟ್ಟು ಮೊತ್ತದ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇಪಿಎಫ್‌ಒ ನಿಯಮಗಳ ಪ್ರಕಾರ, ಉದ್ಯೋಗಿಗಳು ತಮ್ಮ ಅಥವಾ ತಮ್ಮ ಮಕ್ಕಳ ಉನ್ನತ ಶಿಕ್ಷಣದ ವೆಚ್ಚಗಳಿಗಾಗಿ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 10 ಬಾರಿ ಪಿಎಫ್ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು. ಅದೇ ರೀತಿ, ಸ್ವಂತ ಮದುವೆ ಅಥವಾ ಮಕ್ಕಳ ಹಾಗೂ ಒಡಹುಟ್ಟಿದವರ ಮದುವೆಯ ಅಗತ್ಯಗಳಿಗಾಗಿ ಒಟ್ಟು ಸೇವಾ ಅವಧಿಯಲ್ಲಿ ಗರಿಷ್ಠ 5 ಬಾರಿ ಪಿಎಫ್ ಮುಂಗಡ ಹಣವನ್ನು ಕ್ಲೈಮ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗ ಬದಲಾಯಿಸಿದ ತಕ್ಷಣವೇ ಪಿಎಫ್ ಹಣವನ್ನು ಹಿಂಪಡೆಯುವುದು ಸರಿಯಾದ ನಿರ್ಧಾರವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಳೆಯ ಕಂಪನಿಯ ಪಿಎಫ್ ಮೊತ್ತವನ್ನು ಹೊಸ ಕಂಪನಿಯ ಪಿಎಫ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವುದರಿಂದ ನಿಮ್ಮ ಒಟ್ಟು ಸೇವಾ ಅವಧಿಯು ನಿರಂತರವಾಗಿ ಮುಂದುವರಿಯುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ನಿವೃತ್ತಿ ವೇತನದ ಪೂರ್ಣ ಲಾಭ ಹಾಗೂ ತೆರಿಗೆ ವಿನಾಯಿತಿಗಳು ಯಾವುದೇ ಅಡೆತಡೆಯಿಲ್ಲದೆ ಸಿಗುತ್ತವೆ. ಆದರೆ, ಉದ್ಯೋಗ ಬದಲಾಯಿಸಿದಾಗ ಹಣವನ್ನು ವಿತ್‌ಡ್ರಾ ಮಾಡಿಕೊಂಡರೆ ನಿಮ್ಮ ಸೇವಾ ಅವಧಿಯಲ್ಲಿ ಕಡಿತ ಉಂಟಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಸಿಗುವ ಪೆನ್ಷನ್ ಲೆಕ್ಕಾಚಾರದ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಐದು ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಉದ್ಯೋಗಿಯು ತನ್ನ ಪಿಎಫ್ ಖಾತೆಯಿಂದ 50,000 ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಹಿಂಪಡೆದರೆ, ಅದಕ್ಕೆ ಮೂಲದಲ್ಲೇ ತೆರಿಗೆ ಕಡಿತ (TDS) ಅನ್ವಯವಾಗುತ್ತದೆ. ಇದರಿಂದಾಗಿ ಉದ್ಯೋಗಿಗೆ ಸಿಗಬೇಕಾದ ಒಟ್ಟು ಮೊತ್ತದಲ್ಲಿ ಒಂದು ಭಾಗವು ತೆರಿಗೆಯ ರೂಪದಲ್ಲಿ ಕಡಿತಗೊಳ್ಳುತ್ತದೆ, ಆದ್ದರಿಂದ ಅನಗತ್ಯವಾಗಿ ಪದೇ ಪದೇ ಪಿಎಫ್ ಹಣವನ್ನು ಹಿಂಪಡೆಯುವುದರಿಂದ ಭವಿಷ್ಯದ ಉಳಿತಾಯ ಕರಗುವುದು ಮಾತ್ರವಲ್ಲದೆ, ಅನಗತ್ಯವಾಗಿ ತೆರಿಗೆಯ ಹೊರೆಯೂ ಹೆಚ್ಚಾಗುತ್ತದೆ ಎಂದು ಹಣಕಾಸು ತಜ್ಞರು ಎಚ್ಚರಿಸಿದ್ದಾರೆ, (ಏಜೆನ್ಸೀಸ್​).