ಮೃತ ವಿದ್ಯಾರ್ಥಿನಿ ಪ್ರಿನ್ಸಿ ಕುಮಾರಿ
ರಾಯ್ಗಢ: ಛತ್ತೀಸ್ಗಢದಲ್ಲಿ ಕ್ಷಮಿಸಿ ಅಪ್ಪ, ಅಮ್ಮ ನಿಮ್ಮ ನಿರೀಕ್ಷೆಗಳನ್ನು ಪೂರೈಸಲಾಗಲ್ಲ ಎಂದು ಡೆತ್ನೋಟ್ ಬರೆದಿದ್ದು 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಸೋಮವಾರ(ಡಿ. 22) ವರದಿಯಾಗಿದೆ.
ಶನಿವಾರ ರಾತ್ರಿ ರಾಯ್ಗಢ್ನ ಖಾಸಗಿ ವಿಶ್ವವಿದ್ಯಾಲಯವೊಂದರ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಜಾರ್ಖಂಡ್‌ನ ಜಮ್ಶೆಡ್‌ಪುರ ನಿವಾಸಿ ಪ್ರಿನ್ಸಿ ಕುಮಾರಿ ಎಂದು ಗುರುತಿಸಲಾಗಿದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಎರಡನೇ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಳು. ಪುಂಜಿಪಾತ್ರ ಬಳಿಯ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ವಿದ್ಯಾರ್ಥಿನಿಯ ಮೊದಲ ವರ್ಷದ ಪರೀಕ್ಷೆಯಲ್ಲಿ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದು, ಅವುಗಳ ಜೊತೆ ಎರಡನೇ ವರ್ಷದ ಪರೀಕ್ಷೆಗಳಿಗೆ ಹಾಜರಾಗಬೇಕಾದ ಶೈಕ್ಷಣಿಕ ಒತ್ತಡದಲ್ಲಿದ್ದಳು ಎನ್ನಲಾಗಿದೆ. ಶನಿವಾರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕುಟುಂಬಸ್ಥರು ಪ್ರಿನ್ಸಿ ಕುಮಾರಿಗೆ ಕಾಲ್ ಮಾಡಿದ್ದು, ಪ್ರತಿಕ್ರಿಯಿಸದಿದ್ದಾಗ ವಾರ್ಡನ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿ ವಾರ್ಡನ್ ಕೊಠಡಿಯ ಬಾಗಿಲು ಬಡಿದಿದ್ದು, ತೆಗೆಯದಿದ್ದಾಗ ಕಿಟಕಿ ಹೊಡೆದು ನೋಡಿದಾಗ ವಿದ್ಯಾರ್ಥಿನಿ ಫ್ಯಾನ್ಗೆ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿ, ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಕೊಠಡಿಯಲ್ಲಿ ಡೆತ್ನೋಟ್ ಪತ್ತೆ
ಮೃತ ವಿದ್ಯಾರ್ಥಿನಿ ಪ್ರಿನ್ಸಿ ಕುಮಾರಿ ಕೊಠಡಿಯಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಅದರ ವಿಷಯಗಳನ್ನು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ವಿದ್ಯಾರ್ಥಿನಿಯು 'ಕ್ಷಮಿಸಿ ಮಮ್ಮಿ ಪಪ್ಪಾ, ನಾನು ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ನಿಮ್ಮ ಉಳಿತಾಯವನ್ನು ನನ್ನ ಶಿಕ್ಷಣಕ್ಕಾಗಿ ಬಳಸಿದ್ದೀರಿ ಆದರೆ, ನನ್ನಿಂದ ಪೂರೈಸಲಾಗಲಲಿಲ್ಲ ಎಂದು ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ (ಏಜೆನ್ಸೀಸ್).