ಭಾರತ ಹಿಂದೂ ರಾಷ್ಟ್ರ ಎನ್ನುವುದು ಸತ್ಯ; ಅದಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆ ಬೇಕಿಲ್ಲ: ಮೋಹನ್ ಭಾಗವತ್| Mohan Bhagwat

ಆರ್​ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್
ಆರ್​ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್
Published on
ಕೋಲ್ಕತ್ತಾ: ಭಾರತ ಹಿಂದೂ ರಾಷ್ಟ್ರ ಎನ್ನುವುದು ಸತ್ಯ, ಅದಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆಯ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಭಾನುವಾರ(ಡಿ. 21) ಕೋಲ್ಕತ್ತಾದಲ್ಲಿ ಆರ್‌ಎಸ್‌ಎಸ್‌ನ 100 ವರ್ಷಗಳನ್ನು ಆಚರಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಅವರು, ದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರೆಗೆ ಭಾರತ ಹಿಂದೂ ರಾಷ್ಟ್ರವಾಗಿರುತ್ತದೆ ಮತ್ತು ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಸೂರ್ಯ ಪೂರ್ವದಲ್ಲಿಯೇ ಉದಯಿಸುತ್ತಾನೆ. ಇದು ಎಂದಿನಿಂದ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಅದಕ್ಕೆ ಸಾಂವಿಧಾನಿಕ ಅನುಮೋದನೆ ನೀಡಬೇಕೆ? ಹಿಂದೂಸ್ತಾನ್ ಒಂದು ಹಿಂದೂ ರಾಷ್ಟ್ರ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ, ಭಾರತೀಯ ಸಂಸ್ಕೃತಿಯನ್ನು ಗೌರವಿಸುವ, ಪೂರ್ವಜರ ನಂಬಿಕೆಯನ್ನು ಪಾಲಿಸುವ ಹಾಗೂ ನಂಬುವ ಒಬ್ಬ ವ್ಯಕ್ತಿ ಈ ಭೂಮಿ ಮೇಲೆ ಇರುವವರೆಗೂ ಇದು ಹಿಂದೂರಾಷ್ಟ್ರವಾಗಿರುತ್ತದೆ. ಇದು ಸಂಘದ ಸಿದ್ಧಾಂತ. ಭಾರತವು ಹಿಂದೂ ರಾಷ್ಟ್ರ ಎಂದು ತಿಳಿಸಿದ್ದಾರೆ.
ಸಂಸತ್​ ಎಂದಾದರೂ ಸಂವಿಧಾನವನ್ನು ತಿದ್ದುಪಡಿ ಮಾಡಿ ಹಿಂದೂ ರಾಷ್ಟ್ರದ ಪದ ಸೇರಿಸಿದ್ರೂ, ಸೇರಿಸದಿದ್ದರೂ ಏನೂ ಆಗಲ್ಲ. ನಾವು ಆ ಪದದ ಬಗ್ಗೆ ಕಾಳಜಿ ವಹಿಸಲ್ಲ. ಯಾಕಂದರೆ ನಾವು ಹಿಂದೂಗಳು, ನಮ್ಮ ದೇಶ ಹಿಂದೂ ದೇಶ. ಅದು ಸತ್ಯ. ಹುಟ್ಟನ್ನು ಆಧರಿಸಿದ ಜಾತಿ ವ್ಯವಸ್ಥೆಯೂ ಹಿಂದುತ್ವದ ಲಕ್ಷಣವಲ್ಲ. ಆರ್​​ಎಸ್​ಎಸ್​ ಭಾರತವನ್ನು ಯಾವಾಗಲೂ ಹಿಂದೂ ರಾಷ್ಟ್ರ ಎಂದು ವಾದಿಸುತ್ತಾ ಬಂದಿದೆ ಎಂದು ಹೇಳಿದ್ದಾರೆ.
ಜಾತ್ಯತೀತ ಎಂಬ ಪದವು ಮೂಲತಃ ಸಂವಿಧಾನದ ಪೀಠಿಕೆಯ ಭಾಗವಾಗಿರಲಿಲ್ಲ. 1976ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದ 42 ನೇ ತಿದ್ದುಪಡಿಯ ಮೂಲಕ 'ಸಮಾಜವಾದಿ' ಎಂಬ ಪದದೊಂದಿಗೆ ಸೇರಿಸಲಾಯಿತು. ಸಂಘವು ಮುಸ್ಲಿಂ ವಿರೋಧಿ ಅಲ್ಲ. ಆದರೆ ಸಂಘವೂ ಹಿಂದೂಗಳ ರಕ್ಷಣೆಯನ್ನು ಪ್ರತಿಪಾದಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net