ಸಾಂದರ್ಭಿಕ ಚಿತ್ರ 
ದೇಶ

ದೇಶದಲ್ಲಿ ಚುನಾವಣೆ ಬಂತೆಂದರೆ ಹಿಂಸಾಚಾರ ನಡೆಯುವ ಟಾಪ್​ 10 ರಾಜ್ಯಗಳಿವು...! ಈ ಪಟ್ಟಿಯಲ್ಲಿ ಕರ್ನಾಟಕಕ್ಕೂ ಸ್ಥಾನವಿದೆಯೇ? Election violence India

ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಯುದ್ಧವೇ ಶುರುವಾಗುತ್ತದೆ. ಬೃಹತ್ ರ್‍ಯಾಲಿಗಳು, ಬಹಿರಂಗ ಸಭೆಗಳಿಂದ ರಾಜಕೀಯ ವಾತಾವರಣ ಕಾವೇರುತ್ತದೆ.

ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಚುನಾವಣೆ ಎಂದರೆ ಅದೊಂದು ದೊಡ್ಡ ಉತ್ಸವವಿದ್ದಂತೆ. ಆದರೆ, ನಮ್ಮ ದೇಶದಲ್ಲಿ ಇತರ ರಾಷ್ಟ್ರಗಳಂತೆ ಎಲ್ಲಾ ರಾಜ್ಯಗಳಿಗೂ ಒಂದೇ ಬಾರಿಗೆ ಚುನಾವಣೆಗಳು ನಡೆಯುವುದಿಲ್ಲ. ಹೀಗಾಗಿ, ವರ್ಷವಿಡೀ ದೇಶದ ಯಾವುದಾದರೊಂದು ಮೂಲೆಯಲ್ಲಿ ಕೌಂಟಿಂಗ್, ಪ್ರಚಾರ ಅಥವಾ ಮತದಾನದ ಶಬ್ದ ಕೇಳಿಸುತ್ತಲೇ ಇರುತ್ತದೆ. ಆದರೆ, ಸಂವಿಧಾನ ನೀಡಿರುವ ಅತ್ಯಮೂಲ್ಯ 'ಮತದಾನ'ದ ಹಕ್ಕನ್ನು ಚಲಾಯಿಸುವ ಈ ಪ್ರಕ್ರಿಯೆಯಲ್ಲಿ ಕೆಲವು ರಾಜ್ಯಗಳಲ್ಲಿ ರಾಜಕೀಯ ವೈಷಮ್ಯದ ಕಾರಣಕ್ಕೆ ಹಿಂಸಾಚಾರಗಳು ( Election violence India ) ನಡೆಯುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಯುದ್ಧವೇ ಶುರುವಾಗುತ್ತದೆ. ಬೃಹತ್ ರ್‍ಯಾಲಿಗಳು, ಬಹಿರಂಗ ಸಭೆಗಳಿಂದ ರಾಜಕೀಯ ವಾತಾವರಣ ಕಾವೇರುತ್ತದೆ. ಆದರೆ, ಕೆಲವು ನಿರ್ದಿಷ್ಟ ಪ್ರಾಂತ್ಯಗಳಲ್ಲಿ ಈ ಸ್ಪರ್ಧೆಯು ಕೇವಲ ಮಾತುಗಳಿಗೆ ಸೀಮಿತವಾಗದೆ ಬೂತ್ ವಶಪಡಿಸಿಕೊಳ್ಳುವುದು, ಬಾಂಬ್ ದಾಳಿ, ಕಲ್ಲು ತೂರಾಟ ಮತ್ತು ಕೊಲೆಗಳಂತಹ ರಕ್ತಸಿಕ್ತ ಅಧ್ಯಾಯಕ್ಕೆ ಹಾದಿಮಾಡಿಕೊಡುತ್ತದೆ. ಚುನಾವಣೆಯ ಸಮಯದಲ್ಲಿ ಹಿಂಸಾಚಾರ, ಆಸ್ತಿಪಾಸ್ತಿ ನಷ್ಟ ಹಾಗೂ ಭೀಕರ ಘರ್ಷಣೆಗಳಿಗೆ ಸಾಕ್ಷಿಯಾಗುವ ದೇಶದ ಪ್ರಮುಖ 10 ರಾಜ್ಯಗಳ ಸಮಗ್ರ ವಿವರ ಇಲ್ಲಿದೆ:

ಪಶ್ಚಿಮ ಬಂಗಾಳ

ದೇಶದಲ್ಲಿ 'ಚುನಾವಣಾ ಹಿಂಸಾಚಾರ' ಎಂದ ತಕ್ಷಣ ಮೊದಲು ನೆನಪಿಗೆ ಬರುವುದೇ ಪಶ್ಚಿಮ ಬಂಗಾಳ. ಇಲ್ಲಿ ಪಂಚಾಯತ್ ಚುನಾವಣೆಯಿಂದಿಡಿದು ಲೋಕಸಭಾ ಚುನಾವಣೆಯವರೆಗೆ ಅಧಿಸೂಚನೆ ಹೊರಬಿದ್ದ ಕ್ಷಣದಿಂದಲೇ ಹಿಂಸಾಚಾರ ಭುಗಿಲೇಳುತ್ತದೆ. ಪ್ರಚಾರದ ವೇಳೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಕೊಲೆ, ಬಾಂಬ್ ದಾಳಿ ಹಾಗೂ ಬೂತ್ ವಶಪಡಿಸಿಕೊಳ್ಳುವುದು ಇಲ್ಲಿ ಸರ್ವೇಸಾಮಾನ್ಯ. ಚುನಾವಣಾ ಆಯೋಗಕ್ಕೆ ಇಲ್ಲಿ ಶಾಂತಿಯುತ ಮತದಾನ ನಡೆಸುವುದು ಕತ್ತಿಯ ಮೇಲಿನ ನಡಿಗೆಯಿದ್ದಂತೆ. ಮತದಾನ ಮುಗಿದ ಮೇಲೆಯೂ ಇವಿಎಂ (EVM) ಯಂತ್ರಗಳ ಧ್ವಂಸ ಹಾಗೂ ಎದುರಾಳಿ ಕಾರ್ಯಕರ್ತರ ಮೇಲಿನ ಭೌತಿಕ ದಾಳಿಗಳು ಇಲ್ಲಿ ಮುಂದುವರಿಯುತ್ತವೆ.

ಬಿಹಾರ

ರಾಜಕೀಯ ಹಿಂಸಾಚಾರದಲ್ಲಿ ಬಿಹಾರದ ಹೆಸರು ಮುಂಚೂಣಿಯಲ್ಲಿದೆ. 1980 ಮತ್ತು 90ರ ದಶಕದಲ್ಲಿ ಬಿಹಾರವು 'ಬೂತ್ ಕ್ಯಾಪ್ಚರಿಂಗ್' ಹಬ್ ಎಂದೇ ಗುರುತಿಸಲ್ಪಟ್ಟಿತ್ತು. ರೌಡಿ ಪಡೆಗಳು ಹಾಗೂ ಗ್ಯಾಂಗ್‌ಸ್ಟರ್‌ಗಳು ಬಂದೂಕಿನ ತುದಿಯಲ್ಲಿ ಮತದಾನ ನಡೆಯುವಂತೆ ಮಾಡುತ್ತಿದ್ದರು. ಸದ್ಯ ಕೇಂದ್ರೀಯ ಸಶಸ್ತ್ರ ಪಡೆಗಳ (CRPF) ನಿಯೋಜನೆಯಿಂದ ಪರಿಸ್ಥಿತಿ ತುಸು ಸುಧಾರಿಸಿದೆಯಾದರೂ, ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಜಾತಿ ರಾಜಕಾರಣ, ಹಣ ಮತ್ತು ತೋಳ್ಬಲ ಬಳಸಿ ಮಾಡುವ ದಾಳಿಗಳು ಇಂದಿಗೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ.

ಕೇರಳ

ಸಾಕ್ಷರತೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಕೇರಳದಲ್ಲಿ ರಾಜಕೀಯ ವೈಷಮ್ಯದ ಹಿಂಸಾಚಾರಗಳು ನಡೆಯುವುದು ದುರದೃಷ್ಟಕರ. ದೇವಭೂಮಿ ಎಂದೇ ಕರೆಯಲ್ಪಡುವ ಈ ರಾಜ್ಯದಲ್ಲಿ ರಾಜಕೀಯ ಪೈಪೋಟಿ ಕೊಲೆಯಲ್ಲಿ ಅಂತ್ಯವಾಗುವುದು ಪದ್ಧತಿಯಂತಾಗಿದೆ. ಮುಖ್ಯವಾಗಿ ಕಣ್ಣೂರು ಮತ್ತು ಕೋಳಿಕ್ಕೋಡ್ ಜಿಲ್ಲೆಗಳಲ್ಲಿ ಎಡಪಂಥೀಯ ರಂಗ (CPM) ಹಾಗೂ RSS-BJP ಕಾರ್ಯಕರ್ತರ ನಡುವೆ ದಶಕಗಳಿಂದ ಸೇಡಿನ ರಾಜಕಾರಣ ನಡೆಯುತ್ತಿದೆ. ಚುನಾವಣೆಯ ಸಮಯದಲ್ಲಿ ಈ ಸೈದ್ಧಾಂತಿಕ ಸಂಘರ್ಷಗಳು ತೀವ್ರಗೊಂಡು ಕಲ್ಲು ತೂರಾಟ, ಕಚ್ಚಾ ಬಾಂಬ್ ಎಸೆಯುವುದು ಮತ್ತು ಹತ್ಯೆಗಳಿಗೆ ಕಾರಣವಾಗುತ್ತವೆ.

ಉತ್ತರ ಪ್ರದೇಶ

ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ರಾಜಕೀಯದ ಕಾವು ಯಾವಾಗಲೂ ಹೆಚ್ಚಿರುತ್ತದೆ. ಹಿಂದೆಲ್ಲಾ ಇಲ್ಲಿನ ಮಾಫಿಯಾ ಡಾನ್‌ಗಳು ಮತ್ತು ಗ್ಯಾಂಗ್‌ಸ್ಟರ್‌ಗಳು ಸ್ವತಃ ಚುನಾವಣೆಗೆ ಸ್ಪರ್ಧಿಸಿ, ಬಂದೂಕುಗಳ ನೆರಳಿನಲ್ಲಿ ಮತದಾನ ನಡೆಸುತ್ತಿದ್ದರು. ಪ್ರಸ್ತುತ ಯೋಗಿ ಆದಿತ್ಯನಾಥ್ ಸರ್ಕಾರವು ಕ್ರಿಮಿನಲ್ ಚಟುವಟಿಕೆಗಳನ್ನು ಹತೋಟಿಗೆ ತಂದಿದ್ದರೂ, ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇಂದಿಗೂ ವೈಯಕ್ತಿಕ ವೈಷಮ್ಯ ಹಾಗೂ ಗುಂಡಿನ ಚಕಮಕಿಗಳು ವರದಿಯಾಗುತ್ತಲೇ ಇರುತ್ತವೆ.

ತ್ರಿಪುರಾ

ಗಾತ್ರದಲ್ಲಿ ಚಿಕ್ಕ ರಾಜ್ಯವಾಗಿದ್ದರೂ, ಚುನಾವಣಾ ಹಿಂಸಾಚಾರದ ವಿಚಾರದಲ್ಲಿ ತ್ರಿಪುರಾ ಆಗಾಗ್ಗೆ ಸುದ್ಧಿಯಾಗುತ್ತದೆ. ದಶಕಗಳ ಕಾಲ ಎಡಪಂಥೀಯರ ಆಡಳಿತದಲ್ಲಿದ್ದ ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜಕೀಯ ಪ್ರತಿಸ್ಪರ್ಧಿಗಳ ನಡುವಿನ ಸಂಘರ್ಷ ಹೆಚ್ಚಾಗಿದೆ. ಚುನಾವಣಾ ಪ್ರಚಾರ ವಾಹನಗಳ ಮೇಲೆ ದಾಳಿ ಮಾಡುವುದು, ಎದುರಾಳಿ ಪಕ್ಷದ ಕಚೇರಿಗಳಿಗೆ ಬೆಂಕಿ ಹಚ್ಚುವುದು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದು ಇಲ್ಲಿ ಸಾಮಾನ್ಯವಾಗಿದೆ.

ಆಂಧ್ರ ಪ್ರದೇಶ

ತೆಲುಗು ರಾಜ್ಯಗಳಲ್ಲಿ, ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗಳ ಸಮಯದಲ್ಲಿ ರಕ್ತಪಾತ ಹರಿಯುವುದು ಇಂದಿಗೂ ಮುಂದುವರಿದಿದೆ. ಚುನಾವಣಾ ಅಧಿಸೂಚನೆ ಹೊರಬಿದ್ದ ತಕ್ಷಣವೇ ಪಕ್ಷಗಳ ನಡುವೆ ಬಣಗಳ ಜಗಳ ಮತ್ತು ಸಂಘರ್ಷಗಳು ವ್ಯಾಪಿಸುತ್ತವೆ. ಅದರಲ್ಲೂ ಪಲ್ನಾಡು ಪ್ರದೇಶ (ಗುಂಟೂರು, ಪಲ್ನಾಡು) ಮತ್ತು ರಾಯಲಸೀಮಾ (ಕರ್ನೂಲು, ಅನಂತಪುರ, ಕಡಪ) ಜಿಲ್ಲೆಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವೈಷಮ್ಯವು ಮಾರಕಾಸ್ತ್ರಗಳಿಂದ ದಾಳಿ ಮಾಡುವ ಮಟ್ಟಕ್ಕೆ ಹೋಗುತ್ತದೆ. ವಾಹನಗಳ ಧ್ವಂಸ ಮತ್ತು ಕಚ್ಚಾ ಬಾಂಬ್ ಎಸೆದು ಭಯದ ವಾತಾವರಣ ಸೃಷ್ಟಿಸುವುದು ಇಲ್ಲಿ ಕಂಡುಬರುತ್ತದೆ.

ಜಮ್ಮು ಮತ್ತು ಕಾಶ್ಮೀರ

ದೇಶದ ಇತರ ರಾಜ್ಯಗಳಿಗಿಂತ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಹಿಂಸಾಚಾರ ಭಿನ್ನವಾದದ್ದು. ಇಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳ ನಡುವಿನ ಕಾದಾಟಕ್ಕಿಂತ ಹೆಚ್ಚಾಗಿ, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿಗಳು ನೀಡುವ 'ಚುನಾವಣೆ ಬಹಿಷ್ಕಾರ'ದ ಕರೆಯೇ ದೊಡ್ಡ ಸವಾಲು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಭಂಗ ತರಲು ಭಯೋತ್ಪಾದಕರು ಸ್ಪರ್ಧಾಳುಗಳು, ಚುನಾವಣಾ ಸಿಬ್ಬಂದಿ ಹಾಗೂ ಮತದಾರರ ಮೇಲೆಯೇ ದಾಳಿ ನಡೆಸಿದ ಅನೇಕ ಉದಾಹರಣೆಗಳಿವೆ.

ಮಹಾರಾಷ್ಟ್ರ

ದೇಶದ ಆರ್ಥಿಕ ರಾಜಧಾನಿ ಮಹಾರಾಷ್ಟ್ರದ ರಾಜಕಾರಣ ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಮುಂಬೈ, ಪುಣೆ ಮುಂತಾದ ಮಹಾನಗರಗಳಲ್ಲಿ ಕಾರ್ಪೊರೇಟರ್ ಮಟ್ಟದಿಂದ ಹಿಡಿದು ಶಾಸಕ ಚುನಾವಣೆಯವರೆಗೆ ಕಟು ಪೈಪೋಟಿ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಇಬ್ಬಾಗವಾದ ನಂತರ (ಎರಡು ಬಣಗಳಾದ ಮೇಲೆ), ಕಾರ್ಯಕರ್ತರು ಬೀದಿಗಿಳಿದು ಹೊಡೆದಾಡಿಕೊಳ್ಳುವ ಹಾಗೂ ಕಚೇರಿಗಳನ್ನು ಧ್ವಂಸಗೊಳಿಸುವ ಘಟನೆಗಳು ಗಣನೀಯವಾಗಿ ಹೆಚ್ಚಾಗಿವೆ.

ಪಂಜಾಬ್

ಕಳೆದ ಕೆಲವು ವರ್ಷಗಳಿಂದ ಪಂಜಾಬ್ ದೇಶದ ಪ್ರಮುಖ ರಾಜಕೀಯ ಕೇಂದ್ರಬಿಂದುವಾಗಿದೆ. ಇಲ್ಲಿ ಉಗ್ರಗಾಮಿ ಅಥವಾ ಪ್ರತ್ಯೇಕತಾವಾದಿ ಶಕ್ತಿಗಳು ಪ್ರಭಾವ ಬೀರಲು ಯತ್ನಿಸುತ್ತಿವೆ ಎಂಬ ಆರೋಪಗಳ ನಡುವೆಯೇ, ರಾಜ್ಯದಲ್ಲಿ ಹೆಚ್ಚುತ್ತಿರುವ 'ಗ್ಯಾಂಗ್‌ಸ್ಟರ್ ಸಂಸ್ಕೃತಿ' ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಬಳಕೆ ರಾಜಕೀಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮತದಾರರನ್ನು ಬೆದರಿಸಲು ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಗಳನ್ನು ಹೆದರಿಸಲು ಚುನಾವಣೆಯ ಸಮಯದಲ್ಲಿ ಗುಂಡಿನ ದಾಳಿಗಳು ನಡೆದಿವೆ.

ತಮಿಳುನಾಡು

ದಕ್ಷಿಣ ಭಾರತದಲ್ಲಿ ಚುನಾವಣೆ ವೇಳೆ ಕಾವೇರುವ ಮತ್ತೊಂದು ರಾಜ್ಯ ತಮಿಳುನಾಡು. ಇಲ್ಲಿ ನೇರ ಹಲ್ಲೆಗಳಿಗಿಂತ 'ತಿರುಮಂಗಲಂ ಫಾರ್ಮುಲಾ' ಅಂದರೆ ಮತದಾರರಿಗೆ ಹಣ, ಹೆಂಡ ಮತ್ತು ಭಾರಿ ಉಡುಗೊರೆಗಳನ್ನು ಕೊಟ್ಟು ಓಲೈಸುವ ತಂತ್ರವೇ ಹೆಚ್ಚು ಪ್ರಸಿದ್ಧಿ. ಆದಾಗ್ಯೂ, ದ್ರಾವಿಡ ಮುನ್ನೇತ್ರ ಕಳಗಂ (DMK) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಕಾರ್ಯಕರ್ತರ ನಡುವೆ ಪ್ರಚಾರದ ವೇಳೆ ರಸ್ತೆಗಿಳಿದು ಕಲ್ಲು ತೂರಾಟ ನಡೆಸುವುದು ಮತ್ತು ಉದ್ವಿಗ್ನತೆ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ.

ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕಾದ ಚುನಾವಣೆಗಳು ಹಿಂಸಾಚಾರದಿಂದ ಮುಕ್ತವಾಗಿ, ಶಾಂತಿಯುತವಾಗಿ ನಡೆಯುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಈ ಹಿಂಸಾತ್ಮಕ ಸಂಸ್ಕೃತಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಮತ್ತು ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ, (ಏಜೆನ್ಸೀಸ್​).