ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಆಯೋಜಕರು ಸೇರಿದಂತೆ 7 ಜನರ ಬಂಧನ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಬಂಗಾಳ ಸರ್ಕಾರ! | Kolkata Stampede

Kolkata Stampede: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪ್ರಸಿದ್ಧ ಚೋರ್‌ಬಾಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಆಯೋಜಕರು ಸೇರಿದಂತೆ 7 ಜನರ ಬಂಧನ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಬಂಗಾಳ ಸರ್ಕಾರ! | Kolkata Stampede
Published on: 

Kolkata Stampede: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪ್ರಸಿದ್ಧ ಚೋರ್‌ಬಾಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ದುರಂತ ಸಂಭವಿಸಿ ಒಂದು ದಿನ ಕಳೆಯುವುದರೊಳಗೆ, ಪೂಜಾ ಸಮಿತಿಯ ಪ್ರಮುಖ ಆಯೋಜಕರು ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಈ ದುರ್ಘಟನೆಯಲ್ಲಿ ಒಟ್ಟು 19 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 105, 110 ಮತ್ತು 3(5) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಪ್ರಮುಖ ಆರೋಪಿಗಳು

ಪೊಲೀಸರ ವಶಕ್ಕೆ ಪಡೆದಿರುವ ಪ್ರಮುಖ ಆರೋಪಿಗಳಲ್ಲಿ ಚೋರ್‌ಬಾಗಾನ್ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಸೀವ್ಡಾ ಅಲಿಯಾಸ್ ರಾಜಾ, ಉಪಾಧ್ಯಕ್ಷ 55 ವರ್ಷದ ಶಂತನು ದುಬೆ ಹಾಗೂ ಬಿದಿರಿನ ರಚನೆ ಮತ್ತು ಪೆಂಡಾಲ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ 48 ವರ್ಷದ ಬಿಪ್ಲಬ್ ಮುಖರ್ಜಿ ಅಲಿಯಾಸ್ ಜಾಯ್ ಸೇರಿದ್ದಾರೆ.

ಇವರೊಂದಿಗೆ, ಜನಸಂದಣಿ ನಿಯಂತ್ರಣ ಹಾಗೂ ವಿಐಪಿ ಪಾಸ್‌ಗಳ ಪರಿಶೀಲನಾ ಕಾರ್ಯದಲ್ಲಿದ್ದ ಕೌಶಿಕ್ ಸಾಹಾ ಮತ್ತು ಪಿಂಟು ಡೇ ಎನ್ನುವವರನ್ನು ಬಂಧಿಸಲಾಗಿದೆ. ಜೊತೆಗೆ, ಸ್ಥಳದಲ್ಲಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಖಾಸಗಿ ಭದ್ರತಾ ಇನ್‌ಚಾರ್ಜ್‌ಗಳಾದ ಸುಮನ್ ಚಕ್ರವರ್ತಿ ಹಾಗೂ ರಾಜೇಶ್ ಪಾಲ್ ಅವರನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟು 14 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇದರಲ್ಲಿ ಏಳು ಜನರ ಬಂಧನವನ್ನು ಅಧಿಕೃತಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಠಿಣ ಕ್ರಮದ ಭರವಸೆ ನೀಡಿದ ಸಿಎಂ ಸುವೇಂದು ಅಧಿಕಾರಿ

ಈ ದುರಂತದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದರು.

ಘಟನೆಯ ಸಮಗ್ರ ತನಿಖೆಗಾಗಿ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದಿರುವ ಸಿಎಂ ಸುವೇಂದು, ಈ ತನಿಖಾ ತಂಡದಲ್ಲಿ ವಿಶೇಷ ಕಾರ್ಯಪಡೆ (STF) ಮತ್ತು ಅಪರಾಧ ತನಿಖಾ ವಿಭಾಗದ (CID) ಅಧಿಕಾರಿಗಳು ಇರಲಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದಾದ್ಯಂತ ಇರುವ ಎಲ್ಲಾ ಪ್ರಮುಖ ದುರ್ಗಾ ಪೂಜಾ ಪೆಂಡಾಲ್‌ಗಳ ಸುರಕ್ಷತಾ ಪರಿಶೀಲನೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗದ ಭರವಸೆ ನೀಡಿರುವ ಮುಖ್ಯಮಂತ್ರಿಗಳು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ನಿರ್ಲಕ್ಷ್ಯ ತೋರಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಪರಿಸ್ಥಿತಿಯನ್ನು ಸೂಕ್ಮವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net