ಮಾಜಿ ಸಿಎಂ ಮಮತಾ ಬ್ಯಾನರ್ಜಿ 
ದೇಶ

ಚುನಾವಣೆ ಸೋಲು; ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಲು ಶಪಥ ಮಾಡಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ | Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee), ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಲಾಗುವುದು ಎಂದು ಶಪಥ ಮಾಡಿದ್ದಾರೆ ಎಂದು ಬುಧವಾರ(ಮೇ 20) ವರದಿಯಾಗಿದೆ.
ಕಾಲಿಘಾಟ್‌ನಲ್ಲಿ ನಡೆದ ಪಕ್ಷದ ಶಾಸಕರೊಂದಿಗಿನ ಸಭೆಯಲ್ಲಿ ಮಾತನಾಡಿರುವ ಬ್ಯಾನರ್ಜಿ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ ಎಂದು ಎನ್​ಐಎ ವರದಿ ಮಾಡಿದೆ.
ಇದೇ ವೇಳೆ ಸಭೆಯಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಚುನಾವಣಾ ಹಿನ್ನಡೆಯ ಹೊರತಾಗಿಯೂ ಬಿಜೆಪಿ ವಿರುದ್ಧದ ರಾಜಕೀಯ ಹೋರಾಟವನ್ನು ಪಕ್ಷ ಮುಂದುವರಿಸಲಿದೆ. ಅವರು ಏನು ಬೇಕಾದರೂ ಮಾಡಲಿ... ನನ್ನ ಮನೆಯನ್ನು ಕೆಡವಿ, ನೋಟಿಸ್ ಕಳುಹಿಸಲಿ. ಇವುಗಳಿಗೆ ನಾನು ತಲೆಬಾಗುವುದಿಲ್ಲ ಎಂದಿದ್ದಾರೆ.
ಸಿಎಂ ಸುವೇಂಧು ಅಧಿಕಾರಿಯನ್ನು ಟೀಕಿಸಿದ ಬ್ಯಾನರ್ಜಿ, ನಮ್ಮ ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳಿದ್ದರು, ಆದರೆ ಈಗಿನ ಮುಖ್ಯಮಂತ್ರಿಗಳಂತೆ ಯಾರೂ ಇರಲಿಲ್ಲ. ಕ್ಯಾಮೆರಾದಲ್ಲಿ ಹಣ ತೆಗೆದುಕೊಳ್ಳುವುದನ್ನು ನೋಡಿದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿತು. ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಚುನಾವಣೆಯಲ್ಲಿ ಟಿಎಂಸಿ ಕೇವಲ 80 ಸ್ಥಾನಗಳನ್ನು ಪಡೆದಿದೆ. ಚುನಾವಣೆ ಬಳಿಕ ರಾಜ್ಯಾದ್ಯಂತ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಟಿಎಂಸಿ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ (ಏಜೆನ್ಸೀಸ್).