ನವದೆಹಲಿ: ಭೂಮಿಯ ವಾತಾವರಣ ಮತ್ತು ಹವಾಮಾನ ವೈಪರೀತ್ಯದ ಮೇಲೆ ತೀವ್ರ ಪರಿಣಾಮ ಬೀರುವ ನೈಸರ್ಗಿಕ ಪ್ರಕ್ರಿಯೆಗಳಲ್ಲಿ 'ಎಲ್ ನಿನೋ' ( El Nino ) ಅತ್ಯಂತ ಅಪಾಯಕಾರಿ. ಈ ವರ್ಷ ಎಲ್ ನಿನೋ ಹಿಂದೆಂದೂ ಕಾಣದ ರೀತಿಯಲ್ಲಿ ದಾಖಲೆ ಮಟ್ಟದ ತಾಪಮಾನವನ್ನು ಹೆಚ್ಚಿಸುತ್ತಿದ್ದು, ಮಹಾಸಾಗರಗಳಿಂದ ಅಗಾಧ ಪ್ರಮಾಣದ ಶಾಖ ಹೊರಹೊಮ್ಮುತ್ತಿದೆ. ಸೆಪ್ಟೆಂಬರ್ ವೇಳೆಗೆ ಮಧ್ಯ ಮತ್ತು ಪೂರ್ವ ಈಕ್ವಟೋರಿಯಲ್ ಪೆಸಿಫಿಕ್ ಮಹಾಸಾಗರದ ತಾಪಮಾನವು ಬರೋಬ್ಬರಿ 3.08 ಡಿಗ್ರಿಯಷ್ಟು ಹೆಚ್ಚಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ತೀವ್ರವಾದ ಎಲ್ ನಿನೋ ಎಂದು ದಾಖಲಾಗಿದೆ. ಹವಾಮಾನ ತಜ್ಞರು ಇದನ್ನು "ಸೂಪರ್ ಎಲ್ ನಿನೋ" ಎಂದು ಕರೆಯುತ್ತಿದ್ದು, ಇದರಿಂದ ಉಂಟಾಗುವ ತೀವ್ರ ಉಷ್ಣಾಂಶ ಹಾಗೂ ಸಾವು-ನೋವುಗಳ ಮುನ್ಸೂಚನೆಯನ್ನು 'ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್' (Climate Impact Lab) ಪ್ರಕಟಿಸಿರುವ ಹೊಸ ಭೂಪಟವು ಹೊರಹಾಕಿದೆ.
'ಎಲ್ ನಿನೋ ಹೀಟ್ ಮಾರ್ಟಾಲಿಟಿ ಟ್ರ್ಯಾಕರ್' (El Nino Heat Mortality Tracker) ಬಿಡುಗಡೆ ಮಾಡಿರುವ ಆಘಾತಕಾರಿ ಮುನ್ಸೂಚನೆ ಪ್ರಕಾರ, ಮುಂದಿನ ಆರು ತಿಂಗಳಲ್ಲಿ ಜಗತ್ತಿನಾದ್ಯಂತ ತೀವ್ರ ಶಾಖದ ಅಲೆಯಿಂದಾಗಿ ಬರೋಬ್ಬರಿ 3.73 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ. ಈ ಮಾರಣಾಂತಿಕ ತಾಪಮಾನದ ತಾಪವು ಹೆಚ್ಚಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಅಂದಹಾಗೆ, ಅತಿಯಾದ ಶಾಖದಿಂದ ಉಂಟಾಗುವ ಪ್ರಾಣಾಪಾಯವನ್ನು ಮೊದಲೇ ಅಂದಾಜಿಸುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಏಕೆಂದರೆ, ಇದರಿಂದ ಜನರು ಎಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಗುರುತಿಸಿ, ಜೀವಗಳು ಬಲಿಯಾಗುವ ಮುನ್ನವೇ ಎಚ್ಚರಿಕೆ ವಹಿಸಲು ಒಂದು ಅವಕಾಶ ಸಿಕ್ಕಂತಾಗುತ್ತದೆ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ನ ಸಹ-ಸಂಸ್ಥಾಪಕ ಮೈಕೆಲ್ ಗ್ರೀನ್ಸ್ಟೋನ್ ಹೇಳಿದ್ದಾರೆ.
ಈ ಭೀಕರ ಮುನ್ಸೂಚನೆಯಲ್ಲಿ ಭಾರತಕ್ಕೆ ಅತ್ಯಂತ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಲಾಗಿದೆ. ಅಕ್ಟೋಬರ್ನಿಂದ ಮಾರ್ಚ್ ಅವಧಿಯಲ್ಲಿ ಭಾರತದಲ್ಲಿ ಎಲ್ ನಿನೋ ಪ್ರೇರಿತ ತೀವ್ರ ಶಾಖದಿಂದಾಗಿ ಸುಮಾರು 55,000 ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಈ ವರದಿ ಹೇಳಿದೆ. ಇದರಲ್ಲಿ ಹೆಚ್ಚಿನ ಸಾವುಗಳು ಮಾರ್ಚ್ ತಿಂಗಳಲ್ಲೇ ಸಂಭವಿಸಲಿವೆ ಅನ್ನೋದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ನೈಜೀರಿಯಾ ದೇಶದಲ್ಲೂ 56,000 ಸಾವುಗಳನ್ನು ಅಂದಾಜಿಸಲಾಗಿದ್ದು, ಈ ಸಂಖ್ಯೆಗೆ ಭಾರತದ ಸಾವುಗಳ ಸಂಖ್ಯೆ ತೀರಾ ಹತ್ತಿರದಲ್ಲಿದೆ. ಇದಲ್ಲದೆ ಆಗ್ನೇಯ ಏಷ್ಯಾದ ಇಂಡೋನೇಷ್ಯಾದಲ್ಲಿ 29,000 ಹಾಗೂ ಬ್ರೆಜಿಲ್ನಲ್ಲಿ 19,000 ಜನರು ಪ್ರಾಣ ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ವರದಿಗಳ ಪ್ರಕಾರ, ಎಲ್ ನಿನೋದ ತೀವ್ರ ಪರಿಣಾಮದಿಂದಾಗಿ ಮುಂಬೈನಂತಹ ಕರಾವಳಿ ನಗರಗಳಲ್ಲಿ ವಾಯು ಮಾಲಿನ್ಯವೂ ಮತ್ತಷ್ಟು ಭೀಕರವಾಗಲಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (NIAS) ಚೇರ್ ಪ್ರೊಫೆಸರ್ ಹಾಗೂ ಸಫಾರ್ (SAFAR) ಯೋಜನೆಯ ಸಂಸ್ಥಾಪಕ ನಿರ್ದೇಶಕ ಡಾ. ಗುಫ್ರಾನ್ ಬೇಗ್ ಮಾತನಾಡಿ, ಮುಂಬೈನಂತಹ ನಗರಗಳಲ್ಲಿ ಬೃಹತ್ ಪ್ರಮಾಣದ ಗಾಳಿಯ ಚಲನೆ ನಿಧಾನವಾಗಲಿದೆ. ಇದರಿಂದಾಗಿ ಬಲವಾದ ಗಾಳಿ ಬೀಸಿದಾಗ ನಗರಕ್ಕೆ ಸಿಗುತ್ತಿದ್ದ ನೈಸರ್ಗಿಕ ಮಾಲಿನ್ಯ ನಿಯಂತ್ರಣ ರಕ್ಷಣೆ ಇಲ್ಲದಂತಾಗಿ ಮಾಲಿನ್ಯ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (WMO) ಈಗಾಗಲೇ ಎಚ್ಚರಿಸಿರುವಂತೆ, 1950ರ ನಂತರ ದಾಖಲಾದ ಅತ್ಯಂತ ಪ್ರಬಲ ಎಲ್ ನಿನೋ ಇದಾಗಿದ್ದು, ಇದರ ತೀವ್ರತೆಯ ಸೀಸನ್ ಇನ್ನೂ ಗರಿಷ್ಠ ಮಟ್ಟವನ್ನು ತಲುಪಿಲ್ಲ. ಮುಂಬರುವ ದಿನಗಳಲ್ಲಿ ಇದು ಜಾಗತಿಕವಾಗಿ ತಾಪಮಾನವನ್ನು ತೀವ್ರವಾಗಿ ಹೆಚ್ಚಿಸಲಿದ್ದು, ಮಳೆಯ ವಿನ್ಯಾಸವನ್ನೇ ಬದಲಾಯಿಸಿ ವಿವಿಧ ಪ್ರದೇಶಗಳಲ್ಲಿ ಬರ ಮತ್ತು ಭೀಕರ ಪ್ರವಾಹದ ಅಪಾಯವನ್ನು ತಂದೊಡ್ಡಲಿದೆ. ಜಾಗತಿಕ ತಾಪಮಾನವನ್ನು ಏರುಪೇರು ಮಾಡುವ ಈ ಎಲ್ ನಿನೋದ ಪರಿಣಾಮವು ಮುಂದಿನ ವರ್ಷಗಳವರೆಗೂ ಮುಂದುವರಿಯಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಪ್ರಕಾರ, ಪೆಸಿಫಿಕ್ ಸಾಗರದಲ್ಲಿ ಉಂಟಾಗುವ ಎಲ್ ನಿನೋ-ಸದರ್ನ್ ಆಸಿಲೇಷನ್ (ENSO) ಚಕ್ರವು ಮೂರು ಹಂತಗಳನ್ನು ಹೊಂದಿದೆ. ಅವುಗಳೆಂದರೆ, ಎಲ್ ನಿನೋ (ಬಿಸಿ ಹಂತ), ಲಾ ನಿನಾ (ತಂಪು ಹಂತ) ಮತ್ತು ತಟಸ್ಥ (Neutral) ಹಂತ. ಈ ಹಂತಗಳು ಸಾಗರದ ಮೇಲ್ಮೈ ತಾಪಮಾನ ಮತ್ತು ಮಾರುತಗಳ ದಿಕ್ಕಿನಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ. ಇವು ಕೇವಲ ಸಮುದ್ರಕ್ಕೆ ಮಾತ್ರ ಸೀಮಿತವಾಗದೆ, ಜಾಗತಿಕ ಹವಾಮಾನ, ಮಳೆ-ಬೆಳೆ, ಸಾಗರ ತಾಪಮಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿವೆ.
ಅಂದಹಾಗೆ, ಎಲ್ ನಿನೋ ಅನ್ನೋದು ಒಂದು ಸಹಜ ಹವಾಮಾನ ಘಟನೆಯಾಗಿದೆ. ಪೆಸಿಫಿಕ್ ಸಾಗರದಲ್ಲಿ ಮೇಲ್ಮೈ ನೀರಿನ ಉಷ್ಣಾಂಶ ಸಾಮಾನ್ಯಗಿಂತ ಹೆಚ್ಚಿದ್ದಾಗ ಇದು ಸಂಭವಿಸುತ್ತದೆ. ಇದು ಜಗತ್ತಿನಾದ್ಯಂತ ಗಾಳಿಯ ಮಾದರಿಗಳು ಮತ್ತು ವಾತಾವರಣದ ಪರಿಚಲನೆಯ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ. ಈ ಎಲ್ ನಿನೋ, ನೈಋತ್ಯ ಮಾನ್ಸೂನ್ ಋತುವಿನಲ್ಲಿ ಮಳೆಯ ಮಟ್ಟವನ್ನು ಗಮನಾರ್ಹವಾಗಿ ನಿಗ್ರಹಿಸುತ್ತದೆ.
'ಎಲ್ ನಿನೋ' (El Niño) ಎಂಬುದು ಸ್ಪ್ಯಾನಿಷ್ ಪದ. ಅಂದರೆ, 'ಗಂಡು ಮಗು' ಎಂದರ್ಥ. ದಕ್ಷಿಣ ಅಮೆರಿಕದ ಮೀನುಗಾರರು ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ಸಮುದ್ರದ ಉಷ್ಣ ಪ್ರವಾಹಗಳಲ್ಲಿನ ಬದಲಾವಣೆಯನ್ನು ಮೊದಲು ಗುರುತಿಸಿ ಈ ಹೆಸರನ್ನು ಇಟ್ಟರು. ಅಂದಿನಿಂದ ಇಂದಿನವರೆಗೆ ಈ ಪದವು ಕೇವಲ ಮೀನುಗಾರರಿಗೆ ಸೀಮಿತವಾಗದೆ, ಜಗತ್ತಿನಾದ್ಯಂತ ಸಂಭವಿಸುವ ಪ್ರಬಲ ಹವಾಮಾನ ವೈಪರೀತ್ಯಗಳನ್ನು ವಿವರಿಸುವ ಪ್ರಮುಖ ವೈಜ್ಞಾನಿಕ ಪದವಾಗಿ ಬಳಕೆಯಾಗುತ್ತಿದೆ, (ಏಜೆನ್ಸೀಸ್).