AIADMK Rebels | ಎಐಎಡಿಎಂಕೆ ಬಂಡಾಯ ನಾಯಕ ಸಿ.ವಿ. ಷಣ್ಮುಗಂ
AIADMK Rebels: ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಬಹುಮತ ಸಾಬೀತುಪಡಿಸಿದ ಬೆನ್ನಲ್ಲೇ, ಎಐಎಡಿಎಂಕೆ ಬಂಡಾಯ ನಾಯಕ ಸಿ.ವಿ. ಷಣ್ಮುಗಂ, ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್ರನ್ನು ತಮಿಳುನಾಡಿನ ಮೊದಲ ದಲಿತ ಮುಖ್ಯಮಂತ್ರಿಯನ್ನಾಗಿ ಮಾಡುವ ಡಿಎಂಕೆಯ ಪ್ರಸ್ತಾವನೆಯನ್ನು ಇಪಿಎಸ್ ತಿರಸ್ಕರಿಸಿದ್ದರು ಎಂದು ಷಣ್ಮುಗಂ ಬುಧವಾರ ಬಹಿರಂಗಪಡಿಸಿದ್ದಾರೆ.
ವಿಧಾನಸಭೆಯ ಬಹುಮತ ಪರೀಕ್ಷೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ವಿ. ಷಣ್ಮುಗಂ, ಪರಿಶಿಷ್ಟ ಜಾತಿ ಸಮುದಾಯದ ಯಾರಾದರೂ ಮುಖ್ಯಮಂತ್ರಿಯಾಗುವುದು ತಮಿಳುನಾಡಿನ ಪಾಲಿಗೆ ಅತ್ಯಂತ ಅಪರೂಪದ ಹಾಗೂ ಊಹಿಸಲೂ ಅಸಾಧ್ಯವಾದ ಅವಕಾಶ. ಡಿಎಂಕೆ ಮತ್ತು ಎಡಪಕ್ಷಗಳು ತಿರುಮಾವಲವನ್ರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಲು ಪ್ರಸ್ತಾಪಿಸಿದ್ದವು.
ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳ ಸಚಿವರು ಆ ಸರ್ಕಾರದಲ್ಲಿ ಇರಲಿ ಎಂಬ ಯೋಜನೆ ಇತ್ತು. ನಾವು ಡಿಎಂಕೆ ಜೊತೆ ಹೋಗಲು ಸಾಧ್ಯವಿಲ್ಲ, ಆದರೆ ತಿರುಮಾಲನ್ ಜೊತೆ ಹೋಗಲು ಸಿದ್ಧವಿದ್ದೇವೆ ಎಂದು ಹೇಳಿದ್ದೆವು. ಆದರೆ ಇಪಿಎಸ್ ಅದು ವಿಸಿಕೆ ಪಕ್ಷದ ಸರ್ಕಾರವಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಮನವಿಗೆ ಸೊಪ್ಪು ಹಾಕಲಿಲ್ಲ, ನಾನು ಸಿಎಂ ಆಗುತ್ತೇನೆ ಅಥವಾ ನಾನು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇನೆ ಎಂಬುದೇ ಅವರ ಹಠವಾಗಿತ್ತು ಎಂದು ಷಣ್ಮುಗಂ ಆರೋಪಿಸಿದ್ದಾರೆ.
ಇದೇ ಕಾರಣಕ್ಕೆ ಟಿವಿಕೆಗೆ ಬೆಂಬಲ ನೀಡಿದೆವು...
ವಿಶ್ವಾಸಮತ ಯಾಚನೆಯ ಸಮಯದಲ್ಲಿ ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಬೆಂಬಲಿಸುವ ತಮ್ಮ ಬಣದ ನಿರ್ಧಾರವನ್ನು ಸಮರ್ಥಿಸಿಕೊಂಡ ಷಣ್ಮುಗಂ, ಸಚಿವ ಸ್ಥಾನಗಳಿಗೆ ಪ್ರತಿಯಾಗಿ ನಾವು ಬೆಂಬಲ ನೀಡಿದ್ದೇವೆ ಎಂಬ ಪಳನಿಸ್ವಾಮಿ ಆರೋಪ ಸಂಪೂರ್ಣ ಸುಳ್ಳು, ಎಐಎಡಿಎಂಕೆ ಮತ್ತು ಟಿವಿಕೆ ಎರಡೂ ಡಿಎಂಕೆಯನ್ನು ವಿರೋಧಿಸುವ ಒಂದೇ ಸಿದ್ಧಾಂತವನ್ನು ಹೊಂದಿರುವುದರಿಂದ ನಾವು ಸರ್ಕಾರವನ್ನು ಬೆಂಬಲಿಸಿದ್ದೇವೆ, ಡಿಎಂಕೆಯನ್ನು ಬೇರುಸಹಿತ ಕಿತ್ತೊಗೆಯುವ ಕಾರಣದಿಂದಲೇ ದಿವಂಗತ ಎಂಜಿಆರ್ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ್ದರು ಎಂದು ಹೇಳಿದರು.
ಬುಧವಾರ ಷಣ್ಮುಗಂ ಮತ್ತು ಎಸ್‌ಪಿ ವೇಲುಮಣಿ ನೇತೃತ್ವದ 25 ಎಐಎಡಿಎಂಕೆ ಶಾಸಕರು ವಿಜಯ್ ಪರ ಮತ ಚಲಾಯಿಸಿದ್ದರಿಂದ ಸರ್ಕಾರದ ಬಲ 144ಕ್ಕೆ ಏರಿಕೆಯಾಗಿತ್ತು. ಇದೇ ವೇಳೆ ಪಳನಿಸ್ವಾಮಿ ನಾಯಕತ್ವವನ್ನು ಪ್ರಶ್ನಿಸಿದ ವಿರೋಧಿ ಬಣ, ಶಾಸಕಾಂಗ ಪಕ್ಷದ ಸಭೆ ನಡೆಸದೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ಕಳೆದ ವಾರ ಟಿವಿಕೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದ್ದಾಗ ಪಳನಿಸ್ವಾಮಿ ಪುದುಚೇರಿ ರೆಸಾರ್ಟ್‌ಗೆ ಭೇಟಿ ನೀಡಿ ಶಾಸಕರಿಂದ ಪ್ರತ್ಯೇಕವಾಗಿ ಸಹಿ ಸಂಗ್ರಹಿಸಿದ್ದರು.
ಡಿಎಂಕೆ ನಮಗೆ ಹೊರಗಿನಿಂದ ಬೆಂಬಲ ನೀಡಲಿದೆ ಮತ್ತು ತಾವು ಮುಖ್ಯಮಂತ್ರಿಯಾಗಿ ಪಕ್ಷಕ್ಕೆ ಸಚಿವ ಸ್ಥಾನಗಳನ್ನು ಕೊಡಿಸುವುದಾಗಿ ಪಳನಿಸ್ವಾಮಿ ನಂಬಿಸಿದ್ದರು, ಡಿಎಂಕೆಯ ಇಬ್ಬರು ಹಿರಿಯ ಸಚಿವರು ಇಪಿಎಸ್ಗೆ ಕರೆ ಮಾಡಿ ಅಭಿನಂದಿಸಿ ಸಚಿವ ಸ್ಥಾನದ ಭರವಸೆ ನೀಡಿದ್ದರು. ಇಂತಹ ಪ್ರಸ್ತಾಪವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಷಣ್ಮುಗಂ ಕಿಡಿಕಾರಿದರು.
ಇಪಿಎಸ್ ನಾಯಕತ್ವದಲ್ಲಿ ಪಕ್ಷವು ಸತತ ನಾಲ್ಕು ಚುನಾವಣೆಗಳಲ್ಲಿ ಸೋತಿದ್ದರೂ ಅವರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಷಣ್ಮುಗಂ, ಹಿರಿಯ ನಾಯಕ ಎಸ್‌ಪಿ ವೇಲುಮಣಿ ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದ್ದು, ಡಿಎಂಕೆಯನ್ನು ಸೋಲಿಸುವುದೇ ನಮ್ಮ ಪ್ರಾಥಮಿಕ ಉದ್ದೇಶ. ಪಕ್ಷದಲ್ಲಿ ಯಾವುದೇ ಒಡಕು ಇಲ್ಲ. ಭವಿಷ್ಯದ ಹಾದಿಯನ್ನು ನಿರ್ಧರಿಸಿದ ತಕ್ಷಣವೇ ಸಾಮಾನ್ಯ ಸಭೆಯನ್ನು ಕರೆಯಬೇಕು ಎಂದು ರೆಬೆಲ್ ನಾಯಕರು ಆಗ್ರಹಿಸಿದರು(ಏಜೆನ್ಸೀಸ್).