ಸಾಂದರ್ಭಿಕ ಚಿತ್ರ 
ದೇಶ

ಗುಂಡಿನ ಚಕಮಕಿಯಲ್ಲಿ ಎಂಟು ಸೈನಿಕರಿಗೆ ಗಾಯ; ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಕಾರ್ಯಾಚರಣೆ | soldiers

ಪ್ರಮುಖ ಮುಖ್ಯಾಂಶಗಳು

  • ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ
  • ಕಾರ್ಯಾಚರಣೆ ವೇಳೆ 8 ಸೈನಿಕರಿಗೆ ಗಾಯ
  • ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಉಧಮ್‌ಪುರ ಸೇನಾ ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 8 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಭಾನುವಾರ (ಜ.18) ಮಧ್ಯಾಹ್ನದಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಸೈನಿಕರು ಮೂರು ಜನ ಉಗ್ರಗಾಮಿಗಳನ್ನು ಸುತ್ತುವರೆದ ಸಂದರ್ಭದಲ್ಲಿ ಮುಂದಿನಿಂದ ಏಕಾಏಕಿ ಗ್ರೇನೆಡ್ ದಾಳಿ ನಡೆದ್ದಿದ್ದರಿಂದ ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. ಮೂವರು ಸೈನಿಕರನ್ನು ಚಿಕಿತ್ಸೆಗಾಗಿ ಉಧಮ್‌ಪುರ ಸೇನಾ ನೆಲೆ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಭದ್ರತಾ ಪಡೆಗಳು ಉಗ್ರಗಾಮಿಗಳು ತಪ್ಪಿಸಿಕೊಳ್ಳದಂತೆ ಪ್ರದೇಶವನ್ನು ಸುತ್ತುವರೆದಿದ್ದರು. ಕಿಶ್ತ್ವಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ, ಭಯೋತ್ಪಾದಕರು ಪಡೆಗಳ ಮೇಲೆ ಗುಂಡು ಹಾರಿಸಿದ ತರುವಾಯ ಎನ್‌ಕೌಂಟರ್ ಪ್ರಾರಂಭವಾಯಿತು. ಮಂದ್ರಲ್-ಸಿಂಗುರಾ ಬಳಿಯ ಸೋನ್ನಾರ್ ಗ್ರಾಮದಲ್ಲಿ ಸೋಮವಾರ (ಜ.19) ಮಧ್ಯಾಹ್ನ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರಗಾಮಿಗಳು ಶಸ್ತ್ರಸಜ್ಜಿತರಾಗಿದ್ದಾರೆ

ಈ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿ ಕುಳಿತ್ತಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಉಗ್ರಗಾಮಿಗಳು ಎಕೆ -47 ರೈಫಲ್‌ಗಳು, ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದಾರೆ ಎಂಬ ಮಾಹಿತಿಯಿದೆ. ಡ್ರೋನ್‌ ಮತ್ತು ಹೆಲಿಕಾಪ್ಟರ್​ಗಳ ಮೂಲಕ ಭದ್ರತಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ ಹಾಗೆಯೇ ಹಳ್ಳಿಯಲ್ಲಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).