ಸಾಂದರ್ಭಿಕ ಚಿತ್ರ  
ದೇಶ

ನೀವು ಕೇಳಿದ್ದೆಲ್ಲ ಸುಳ್ಳು... ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್​ಕಾರಕ ಇಲ್ಲ, ತಿನ್ನಲು ಯೋಗ್ಯವೆಂದ FSSAI

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಮೊಟ್ಟೆ ಕೂಡ ಒಂದು
  • ಯೂಟ್ಯೂಬ್​ ವಿಡಿಯೊಂದು ದೇಶಾದ್ಯಂತ ತೀವ್ರ ಸಂಚಲನವನ್ನೇ ಮೂಡಿಸಿದೆ
  • ಕ್ಯಾನ್ಸರ್​ಕಾರಕ ಅಂಶವಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ
  • ವೈರಲ್​ ಸುದ್ದಿಗೆ ಇದೀಗ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟನೆ ನೀಡಿದೆ
ನವದೆಹಲಿ: ಇತ್ತೀಚೆಗೆ ದೇಶಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಮೊಟ್ಟೆ ಮೊದಲ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಏಕೆಂದರೆ, ಯೂಟ್ಯೂಬ್​ ವಿಡಿಯೋವೊಂದು ದೇಶಾದ್ಯಂತ ತೀವ್ರ ಸಂಚಲನವನ್ನೇ ಮೂಡಿಸಿದೆ. ಆರೋಗ್ಯದ ಕಣಜ ಎಂದೇ ಕರೆಯಲ್ಪಡುವ ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಅಂಶವಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಅನೇಕ ಜನರಲ್ಲಿ ಭೀತಿ ಉಂಟುಮಾಡಿದೆ. ಹೇಳಬೇಕೆಂದರೆ, ಕೆಲವರು ಮೊಟ್ಟೆ ತಿನ್ನುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಇನ್ನು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಎಚ್ಚೆತ್ತಿರುವ ಸರ್ಕಾರಗಳು ಮೊಟ್ಟೆಯ ಸ್ಯಾಂಪಲ್​ಗಳನ್ನು ಪರೀಕ್ಷಿಸುತ್ತಿವೆ. ಇದರ ನಡುವೆ ಜನರಿಗೆ ಒಂದು ಸಮಾಧಾನಕರ ಸುದ್ದಿ ಬಂದಿದೆ. ಅದೇನೆಂದರೆ, ಮೊಟ್ಟೆ ತಿನ್ನಲು ಸುರಕ್ಷಿತವಾಗಿದ್ದು, ಯಾವುದೇ ಕ್ಯಾನ್ಸರ್​ಕಾರಕ ಕಂಡುಬಂದಿಲ್ಲ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ( FSSAI ) ತಿಳಿಸಿದೆ. 
ದೇಶಾದ್ಯಂತ ಕಳವಳ ಹೆಚ್ಚಿರುವ ಸಮಯದಲ್ಲೇ ಎಫ್​ಎಸ್​ಎಸ್​ಎಐ ಶನಿವಾರ ಮಹತ್ವದ ಹೇಳಿಕೆ ನೀಡಿದೆ. ದೇಶದಲ್ಲಿ ಲಭ್ಯವಿರುವ ಮೊಟ್ಟೆಗಳು ಮಾನವ ಸೇವನೆಗೆ ಯೋಗ್ಯವಾಗಿವೆ ಮತ್ತು ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಅಂಶವಿದೆ ಎಂದು ಇತ್ತೀಚೆಗೆ ಹರಿದಾಡಿದ ಸುದ್ದಿ ಅಕ್ಷರಶಃ ಸುಳ್ಳು ಮತ್ತು ಅದನ್ನು ಸಾಬೀತುಮಾಡಲು ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ. ಅನಗತ್ಯವಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲಾಗಿದೆ ಎಂದು ಎಫ್​ಎಸ್​ಎಸ್​ಎಐ ಹೇಳಿದೆ. 
ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳು (AOZ)ನಂತಹ ಕ್ಯಾನ್ಸರ್ ಕಾರಕ ಪದಾರ್ಥಗಳು ಇವೆ ಎಂದು ಹೇಳಿ ಇತ್ತೀಚೆಗೆ ಒಂದು ವಿಡಿಯೋ ವೈರಲ್​ ಆಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ FSSAI ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳು-2011 ರ ಅಡಿಯಲ್ಲಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯ ಎಲ್ಲ ಹಂತಗಳಲ್ಲಿ ನೈಟ್ರೋಫ್ಯೂರಾನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಂದಹಾಗೆ, ನಿಯಂತ್ರಕ ಜಾರಿ ಉದ್ದೇಶಗಳಿಗಾಗಿ ಮಾತ್ರ ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳಿಗೆ 1.0 µg/kgಯ ಇಎಂಆರ್​ಎಲ್​ ಮಿತಿಯನ್ನು ಸೂಚಿಸಲಾಗಿದೆ. EMRL ಅಂದರೆ, ಬಾಹ್ಯ ಗರಿಷ್ಠ ಶೇಷ ಮಿತಿ ಎಂದರ್ಥ. ಸರಳವಾಗಿ ಹೇಳಬೇಕೆಂದರೆ, ಯಾವುದೇ ಆಹಾರ ಪದಾರ್ಥಗಳ ಮೇಲೆ ಬಳಸುವ ಕೀಟನಾಶಕಗಳು (ಪೆಸ್ಟಿಸೈಡ್ಸ್), ಆ್ಯಂಟಿಬಯೋಟಿಕ್ಸ್ ಅಥವಾ ಇತರ ರಾಸಾಯನಿಕಗಳ ಅನುಮತಿಸಲಾದ ಮಟ್ಟವಾಗಿದೆ. ಇದನ್ನು ಮಿಲಿಗ್ರಾಂ ಪ್ರತಿ ಕಿಲೋಗ್ರಾಂ (mg/kg) ಎಂಬ ಘಟಕದಲ್ಲಿ ವ್ಯಕ್ತಪಡಿಸಲಾಗುತ್ತದೆ. ಉದಾಹರಣೆಗೆ ಮೊಟ್ಟೆ ಅಥವಾ ತರಕಾರಿಗಳಲ್ಲಿ ನಿಷೇಧಿತ ಆ್ಯಂಟಿಬಯೋಟಿಕ್‌ಗಳಿಗೆ 1 µg/kg (ಅಂದರೆ 0.001 mg/kg) ಎಂಬ ಮಿತಿಯನ್ನು FSSAI ಹೊಂದಿಸಿದೆ. ಇದಕ್ಕಿಂತ ಹೆಚ್ಚಿದ್ದರೆ ಆ ಆಹಾರ ಅಸುರಕ್ಷಿತ ಎಂದರ್ಥ.
ಅಂದಹಾಗೆ, FSSAI ನಿಗದಿ ಮಾಡಿರುವ ಮಿತಿಯು ಸುಧಾರಿತ ಪ್ರಯೋಗಾಲಯ ವಿಧಾನಗಳಿಂದ ವಿಶ್ವಾಸಾರ್ಹವಾಗಿ ಪತ್ತೆಹಚ್ಚಬಹುದಾದ ಕನಿಷ್ಠ ಮಟ್ಟವಾಗಿದೆ. ಹಾಗಂತ ಈ ವಸ್ತುವನ್ನು ಬಳಸಲು ಸಂಪೂರ್ಣವಾಗಿ ಅನುಮತಿ ನೀಡಲಾಗಿದೆ ಎಂದರ್ಥವಲ್ಲ. ಮಿತಿಗಿಂತ ಕಡಿಮೆ ಇದ್ದರೆ ಯಾವುದೇ ಆರೋಗ್ಯ ಅಪಾಯ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳು ಮಿತಿಯ ಒಳಗಿದ್ದರೆ ಮಾನವರಲ್ಲಿ ಕ್ಯಾನ್ಸರ್ ಅಥವಾ ಇತರ ಪ್ರತಿಕೂಲ ಆರೋಗ್ಯ ಪರಿಣಾಮ ಬೀರಬಹುದು ಎನ್ನುವುದಕ್ಕೆ ಯಾವುದೇ ಸೈಂಟಿಫಿಕ್​ ಕಾರಣವಿಲ್ಲ. ಅಲ್ಲದೆ, ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಸಾಮಾನ್ಯ ಮೊಟ್ಟೆ ಸೇವನೆಯನ್ನು ಕ್ಯಾನ್ಸರ್ ಅಪಾಯದೊಂದಿಗೆ ಲಿಂಕ್​ ಮಾಡೇ ಇಲ್ಲ ಎಂದು ಪ್ರಾಧಿಕಾರವು ಸ್ಪಷ್ಟನೆ ನೀಡಿದೆ. 
ನಿರ್ದಿಷ್ಟ ಮೊಟ್ಟೆಯ ಬ್ರಾಂಡ್‌ನ ಪರೀಕ್ಷೆಗೆ ಸಂಬಂಧಿಸಿದ ವರದಿಗಳನ್ನು ಉಲ್ಲೇಖಿಸಿ, ಸ್ಪಷ್ಟನೆ ನೀಡಿರುವ FSSAI  ಅಧಿಕಾರಿಗಳು, ಅಂತಹ ಪತ್ತೆಗಳು ಪ್ರತ್ಯೇಕವಾಗಿವೆ. ಅದನ್ನು ಎಲ್ಲದರ ಜತೆ ಲಿಂಕ್​ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಮಾಲಿನ್ಯ ಅಥವಾ ಕೋಳಿಗಳಿಗೆ ನೀಡುವ ಆಹಾರ ಸಂಬಂಧಿತ ಅಂಶಗಳಿಂದ ಉದ್ಭವಿಸುತ್ತವೆ ಹೊರತು, ದೇಶದ ಒಟ್ಟಾರೆ ಮೊಟ್ಟೆ ಪೂರೈಕೆ ಸರಪಳಿಯನ್ನು ಇದು ಪ್ರತಿನಿಧಿಸುವುದಿಲ್ಲ ಎಂದು ವಿವರಿಸಿದ್ದಾರೆ. ಅಲ್ಲದೆ, ಮೊಟ್ಟೆಗಳನ್ನು ಅಸುರಕ್ಷಿತ ಎಂದು ಲೇಬಲ್ ಮಾಡಲು ಪ್ರತ್ಯೇಕ ಪ್ರಯೋಗಾಲಯದ ಸಂಶೋಧನೆಗಳನ್ನು ಸಾಮಾನ್ಯೀಕರಿಸುವುದೇ ವೈಜ್ಞಾನಿಕವಾಗಿ ತಪ್ಪು ಎಂದು ಎಫ್​ಎಸ್​ಎಸ್​ಎಐ ತಿಳಿಸಿದೆ.
ಆಹಾರ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಮೊಟ್ಟೆಗಳನ್ನು ಉತ್ಪಾದಿಸಿ ಸೇವಿಸಿದರೆ, ಆ ಮೊಟ್ಟೆಗಳು ಸುರಕ್ಷಿತ, ಪೌಷ್ಟಿಕ ಮತ್ತು ಮೌಲ್ಯಯುತ ಅಂಶವಾಗಿ ಉಳಿಯುತ್ತವೆ ಎಂದು ಪುನರುಚ್ಚರಿಸಿರುವ FSSAI, ಯಾವುದೇ ವರದಿಗಳನ್ನು ನಂಬುವ ಮುನ್ನ ಪರಿಶೀಲಿಸಿದ ವೈಜ್ಞಾನಿಕ ಪುರಾವೆಗಳು ಮತ್ತು ಅಧಿಕೃತ ಸಲಹೆಗಳನ್ನು ಅವಲಂಬಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿದೆ. 

ಮೊಟ್ಟೆ ವಿವಾದ ಶುರುವಾಗಿದ್ದು ಹೇಗೆ?

ಅಂದಹಾಗೆ, ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿದೆ ಎಂಬ ಚರ್ಚೆಯು ಇತ್ತೀಚಿನ ಒಂದು ವೈರಲ್ ಲ್ಯಾಬ್ ರಿಪೋರ್ಟ್‌ನಿಂದ ಹುಟ್ಟಿಕೊಂಡಿದೆ. ಟ್ರಸ್ಟಿಫೈಡ್ ನೆಟ್‌ವರ್ಕ್ ಎಂಬ ಸಂಸ್ಥೆಯು ಎಗ್ಗೋಜ್ ನ್ಯೂಟ್ರಿಷನ್ ಬ್ರ್ಯಾಂಡ್‌ನ ಮೊಟ್ಟೆಗಳನ್ನು ಪರೀಕ್ಷಿಸಿ, ಅದರಲ್ಲಿ ನಿಷೇಧಿತ ಆ್ಯಂಟಿಬಯೋಟಿಕ್‌ಗಳಾದ ನೈಟ್ರೋಫ್ಯೂರಾನ್ ಮತ್ತು ನೈಟ್ರೋಇಮಿಡಾಜೋಲ್ ಅಂಶಗಳು ಕಂಡುಬಂದಿವೆ. ಇವು ಕ್ಯಾನ್ಸರ್​ಕಾರಕಗಳು ಎಂದು ಯೂಟ್ಯೂಬ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿತು. ಈ ವಿಡಿಯೋ ವೈರಲ್​ ಆಗಿ, "ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ" ಚರ್ಚೆ ಹುಟ್ಟಿಕೊಂಡಿತು. ಇದು ಕರ್ನಾಟಕದ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು "ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ, ತಿನ್ನಲು ಸುರಕ್ಷಿತ" ಎಂದು ಸ್ಪಷ್ಟಪಡಿಸಿದರು. ಇದರ ನಡುವೆ ಎಗ್ಗೋಜ್ ಕಂಪನಿಯು ತಮ್ಮ ಮೊಟ್ಟೆಗಳು ಆ್ಯಂಟಿಬಯೋಟಿಕ್-ಮುಕ್ತ ಎಂದು ಹೇಳಿ, ಹೊಸ ಪರೀಕ್ಷೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದೆ, (ಏಜೆನ್ಸೀಸ್​).