ಸಿಲೆಂಡರ್ನ್ನು ಹೊತ್ತೊಯ್ಯುತ್ತಿರುವ ಜನ
ಉತ್ತರ ಪ್ರದೇಶ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ ಎಂಬ ಮಾತು ಕೇಳಿಬರುತ್ತಿದ್ದಂತೆಯೇ, ಭಾರತದ ಸಾಮಾನ್ಯ ಜನರ ಜೀವನದಲ್ಲಿ ಆತಂಕ ಹೆಚ್ಚಿದೆ. ಅದರಲ್ಲೂ ವಿಶೇಷವಾಗಿ ಗ್ಯಾಸ್ ಸಿಲಿಂಡರ್ (Gas Cylinder) ಪೂರೈಕೆ ಸ್ಥಗಿತಗೊಳ್ಳಲಿದೆ ಅಥವಾ ಬೆಲೆ ಗಗನಕ್ಕೇರಲಿದೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡಿದ್ದು, ಉತ್ತರ ಪ್ರದೇಶದ ಬಸ್ತಿಯಲ್ಲಿ ಬುಧವಾರ (ಮಾ.11) ಬೆಳಿಗ್ಗೆ ನಡೆದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಏನಿದು ಘಟನೆ?
ಬಸ್ತಿ ಜಿಲ್ಲೆಯ ಬಂಕತಿ ಬ್ಲಾಕ್‌ನ ಮಹಾದೇವ ಛೇದಕದಲ್ಲಿರುವ ಮಹಾಗೌರಿ ಗ್ಯಾಸ್ ಏಜೆನ್ಸಿಯ ದೃಶ್ಯ ಇದು. ಗ್ಯಾಸ್ ಸಿಲಿಂಡರ್ ಸಿಗುವುದಿಲ್ಲವೋ ಏನೋ ಎಂಬ ಆತಂಕದಲ್ಲಿ ಜನರು ಬೆಳಿಗ್ಗೆ 4 ಗಂಟೆಗೆಲ್ಲಾ ಏಜೆನ್ಸಿ ಬಾಗಿಲ ಮುಂದೆ ಕ್ಯೂ ನಿಲ್ಲಲು ಶುರು ಮಾಡಿದರು. ಬೆಳಗ್ಗೆ 7 ಗಂಟೆಗೆ ಗೇಟ್ ತೆರೆಯುತ್ತಿದ್ದಂತೆ, ಜನರು ಸಿಲಿಂಡರ್‌ಗಾಗಿ ಮುಗಿಬಿದ್ದರು.
ಅಲ್ಲಿನ ದೃಶ್ಯ ಹೇಗಿತ್ತೆಂದರೆ, ಗ್ಯಾಸ್ ಸಿಲಿಂಡರ್‌ಗಳನ್ನು ತಲೆ ಮತ್ತು ಭುಜಗಳ ಮೇಲೆ ಹೊತ್ತುಕೊಂಡು ಜನರು ಓಡುವುದನ್ನು ನೋಡುತ್ತಿದ್ದರೆ ಯುದ್ಧ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದೆಯೋ? ಇಲ್ಲ ಭಾರತದಲ್ಲಿಯೇ ನಡೆಯುತ್ತಿದೆಯೋ ಎಂದು ಅನುಮಾನ ಹುಟ್ಟುವಂತಿತ್ತು. ಸಿಲಿಂಡರ್‌ಗಳಿಗಾಗಿ ಜನರು ತೋರಿಸಿದ ಈ ಆತುರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹೆಚ್ಚಿನ ವೀಕ್ಷಣೆಯನ್ನು ಪಡೆಯುತ್ತಿದೆ.
ವದಂತಿಗಳೇ ಈ ಅನಾಹುತಕ್ಕೆ ಕಾರಣ!
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ದಿಢೀರ್ ಏರಿಕೆಯಾಗುತ್ತದೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವುದೇ ಇದಕ್ಕೆ ಕಾರಣ ಎನ್ನಬಹುದು.
ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಸುಳ್ಳು ಸುದ್ದಿಗಳೇ ಜನರನ್ನು ಭಯಭೀತಗೊಳಿಸಿವೆ. ಸರ್ಕಾರವು ಈಗಾಗಲೇ ಇಂತಹ ಯಾವುದೇ ಪೂರೈಕೆ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರೂ, ಜನರಲ್ಲಿನ ಭಯ ಇನ್ನೂ ಕಡಿಮೆಯಾಗಿಲ್ಲ.
ನೆಟ್ಟಿಗರ ಆಕ್ರೋಶದ ಮಳೆ!
ಈ ವೈರಲ್ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು, ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆಯೇ? ಎಂದು ಒಬ್ಬರು ಕೇಳಿದರೆ, ಇನ್ನೊಬ್ಬರು ನನ್ನ ಏರಿಯಾದಲ್ಲಿ ಸಿಲಿಂಡರ್‌ಗೆ ಬ್ಲ್ಯಾಕ್‌ನಲ್ಲಿ 200 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇನ್ನು ಕೆಲವರು, ಗ್ಯಾಸ್ ಸಿಗಲಿಲ್ಲ ಅಂದರೆ ಇಂಡಕ್ಷನ್ ಕುಕ್ಕರ್ ಬಳಸಲಿ, ಇಷ್ಟೊಂದು ಅವಸರ ಯಾಕೆ? ಎಂದು ಅಣಕಿಸಿದ್ದಾರೆ.
ಒಟ್ಟಾರೆಯಾಗಿ, ಸುಳ್ಳು ವದಂತಿಗಳು ಸಾಮಾನ್ಯ ಜನರ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತವೆ ಮತ್ತು ಭಯದ ವಾತಾವರಣದಲ್ಲಿ ಜನರು ಹೇಗೆ ವರ್ತಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಇಂತಹ ತಪ್ಪಾದ ಮಾಹಿತಿ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಮತ್ತಷ್ಟು ಹೆಚ್ಚಾದರೆ ಆಶ್ಚರ್ಯ ಪಡಬೇಕಿಲ್ಲ,(ಏಜನ್ಸೀಸ್).