ನವದೆಹಲಿ: ದೇಶಾದ್ಯಂತ ಲಸಿಕಾ ಅಭಿಯಾನದ ಅಡಿಯಲ್ಲಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆಯ ಒಂದು ಕೋಟಿಗೂ ಹೆಚ್ಚು ಡೋಸ್ಗಳನ್ನು ನೀಡಲಾಗಿರುವ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ(ನ. 23) ಶ್ಲಾಘಿಸಿದ್ದಾರೆ.
ಪ್ರತಿ ಡೋಸ್ ಕೂಡ ಬಾಲಕಿಯರನ್ನು ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಿಸುವ ದಿಕ್ಕಿನಲ್ಲಿ ಇಟ್ಟ ಒಂದು ಹೆಜ್ಜೆಯಾಗಿದೆ ಎಂದು ಹೇಳಿರುವ ಅವರು, ಈ ಅಭಿಯಾನವು ಬಾಲಕಿಯರಿಗೆ ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಾಧನೆಗೆ ಕಾರಣರಾದ ಎಲ್ಲರನ್ನೂ ಅಭಿನಂದಿಸಿದ್ದಾರೆ.
ಒಂದು ಕೋಟಿಗೂ ಹೆಚ್ಚು ಎಚ್ಪಿವಿ ಲಸಿಕೆ ನೀಡಲಾಗಿದೆ ಎಂಬ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರ ವರದಿ ಪೋಸ್ಟ್ ತಮ್ಮ ಎಕ್ಸ್ ಖಾತೆಯಲ್ಲಿ ರಿಪೋಸ್ಟ್ ಮಾಡಿ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ತಡೆಗಟ್ಟುವ ಆರೋಗ್ಯ ರಕ್ಷಣೆಯತ್ತ ನಮ್ಮ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಪ್ರತಿ ಡೋಸ್ ಹುಡುಗಿಯರನ್ನು ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಿಸುವ ಮತ್ತು ಅವರಿಗೆ ಆರೋಗ್ಯಕರ ಭವಿಷ್ಯವನ್ನು ಖಾತ್ರಿಪಡಿಸುವತ್ತ ಒಂದು ಹೆಜ್ಜೆಯಾಗಿದೆ. ಈ ಗಮನಾರ್ಹ ಸಾಧನೆಯನ್ನು ಸಾಧ್ಯವಾಗಿಸಿದ ಎಲ್ಲಾ ಪಾಲುದಾರರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.
2026 ಫೆಬ್ರವರಿ 28ರಂದು ರಾಷ್ಟ್ರವ್ಯಾಪಿ HPV ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ ನಂತರ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತ ಒಂದು ಕೋಟಿ ಗಡಿ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 14 ವರ್ಷ ವಯಸ್ಸಿನ ಬಾಲಕಿಯರಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾದ ವಾರ್ಷಿಕ ಗುರಿಯು (ಸುಮಾರು 1.15 ಕೋಟಿಯಿಂದ 1.2 ಕೋಟಿ ಬಾಲಕಿಯರು) ಸುಮಾರು ಶೇಕಡಾ 87 ರಷ್ಟು ಪೂರ್ಣಗೊಂಡಿದೆ.
ಉತ್ತರ ಪ್ರದೇಶವು 29.33 ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಲಸಿಕೆ ನೀಡುವ ಮೂಲಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಬಿಹಾರ (13.70 ಲಕ್ಷ) ಮತ್ತು ಗುಜರಾತ್ (7.75 ಲಕ್ಷ) ಇವೆ. ಗುಜರಾತ್, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಿಜೋರಾಂ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳು ಶೇಕಡಾ 100 ರಷ್ಟು ಲಸಿಕೆ ನೀಡುವ ತಮ್ಮ ಗುರಿಯನ್ನು ಸಾಧಿಸಿವೆ ಎಂದು ಸಚಿವಾಲಯ ತಿಳಿಸಿದೆ (ಏಜೆನ್ಸೀಸ್).