

ನವದೆಹಲಿ: ಆರ್ಥಿಕತೆ ಏರಿಳಿತಗಳ ನಡುವೆಯೂ ಅಮೆರಿಕ ಮತ್ತು ಚೀನಾ ಬಳಿಕ ಭಾರತವು 40.5 ಅಂಕಗಳೊಂದಿಗೆ ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ತನ್ನ ನೆಲೆಯನ್ನು ಭದ್ರ ಪಡಿಸಿಕೊಂಡಿದೆ ಎಂದು ಆಸ್ಟ್ರೇಲಿಯಾ ಮೂಲದ ಲೋವಿ ಇನ್‌ಸ್ಟಿಟ್ಯೂಟ್‌ನ 'ಏಷ್ಯಾ ಪವರ್ ಇಂಡೆಕ್ಸ್' ವರದಿ ಮಾಡಿದೆ.
2026ರ ಏಷ್ಯಾ ಪವರ್ ಇಂಡೆಕ್ಸ್ ವರದಿ ಪ್ರಕಾರ, ರಾಜತಾಂತ್ರಿಕ ಸ್ಥಾನಮಾನ, ರಕ್ಷಣಾ ವಲಯದ ಸಹಭಾಗಿತ್ವ, ಸಾಂಸ್ಕೃತಿಕ ಪ್ರಭಾವ ಮತ್ತು ಭವಿಷ್ಯದ ಸಂಪನ್ಮೂಲಗಳ ವಿಷಯದಲ್ಲಿನ ಸುಧಾರಣೆಗಳಿಂದಾಗಿ, ಈ ವರ್ಷ ಏಷ್ಯಾದಲ್ಲಿ ಭಾರತದ ಪ್ರಭಾವವು ಇನ್ನಷ್ಟು ಹೆಚ್ಚಾಗಿದೆ. ಅಮೆರಿಕ ಮತ್ತು ಚೀನಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಕಾಯ್ದುಕೊಂಡಿವೆ ಎಂದು ತಿಳಿಸಿದೆ.
ಭಾರತದ ಆರ್ಥಿಕ ಸಾಮರ್ಥ್ಯದ ಅಂಕವು 26.4ಕ್ಕೆ ಕುಸಿದರೂ, ಈ ವಿಭಾಗದಲ್ಲಿ ಅದು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ರೂಪಾಯಿಯ ಮೌಲ್ಯ ಕುಸಿದಿರುವುದು ಮತ್ತು ಆರ್ಥಿಕತೆಗಳನ್ನು ಅಳೆಯುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವಿಧಾನದಲ್ಲಿನ ಬದಲಾವಣೆಯು ಈ ಕುಸಿತಕ್ಕೆ ಭಾಗಶಃ ಕಾರಣವೆಂದು ಲೋವಿ ಇನ್‌ಸ್ಟಿಟ್ಯೂಟ್ ಹೇಳಿದೆ.
ಇದಲ್ಲದೆ, ಹೊರಹೋಗುವ ಹೂಡಿಕೆಯಲ್ಲಿಸುಮಾರು 20 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಇಳಿಕೆಯಾಗಿರುವುದು ಕೂಡ ಭಾರತದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಹಿನ್ನಡೆಯ ಹೊರತಾಗಿಯೂ, ಭಾರತದ ಭವಿಷ್ಯದ ಸಂಪನ್ಮೂಲಗಳ ಅಂಕವು 56.2 ಅಂಕಗಳಿಗೆ ಏರಿಕೆಯಾಗಿದೆ ಎಂದು ಅದು ವರದಿ ಮಾಡಿದೆ.
ಇದು ಸುಧಾರಿತ ಆರ್ಥಿಕ ಮುನ್ನೋಟವನ್ನು ಹಾಗೂ ದೇಶದ ಮುಂದಿರುವ ಅವಕಾಶಗಳನ್ನು ಪ್ರತಿಬಿಂಬಿಸುತ್ತದೆ. ಮತ್ತು 2026ರಲ್ಲಿ ಭಾರತದ ಆರ್ಥಿಕತೆ ಮತ್ತು ರಾಜತಾಂತ್ರಿಕತೆಯು ಮಿಶ್ರ ಫಲಿತಾಂಶಗಳನ್ನು ನೀಡಿದ್ದರೂ, ಏಷ್ಯಾದಲ್ಲಿ ಭಾರತದ ಪ್ರಭಾವವು ಹೆಚ್ಚಾಗಿದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೇ ಭಾರತದ ರಾಜತಾಂತ್ರಿಕ ಪ್ರಭಾವವು 70.3 ಅಂಕಗಳೊಂದಿಗೆ ಅತ್ಯಂತ ಪ್ರಬಲ ಮಾನದಂಡವಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾದೇಶಿಕ ನಾಯಕತ್ವದ ಮೌಲ್ಯಮಾಪನದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಅವರು ಮೂರು ಸ್ಥಾನ ಮೇಲೇರಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂತರ ಎರಡನೇ ಅತ್ಯಂತ ಪರಿಣಾಮಕಾರಿ ಪ್ರಾದೇಶಿಕ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತವು ತನ್ನ ಆರ್ಥಿಕ ಸಂಬಂಧಗಳನ್ನು ಬಲಪಡಿಸಿಕೊಂಡು, ಎರಡು ಸ್ಥಾನಗಳ ಏರಿಕೆಯೊಂದಿಗೆ ಏಳನೇ ಸ್ಥಾನಕ್ಕೆ ತಲುಪಿದೆ. ಪ್ರಾದೇಶಿಕ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿನ ಸಾಪೇಕ್ಷ ಸ್ಥಿರತೆಯು, ಇತರ ಹಲವು ದೇಶಗಳಿಗಿಂತ ಉತ್ತಮ ಸಾಧನೆ ಮಾಡಲು ನೆರವಾಗಿದೆ. ಪ್ರಾದೇಶಿಕ ರಕ್ಷಣಾ ಸಹಭಾಗಿತ್ವದಲ್ಲಿನ ಹೆಚ್ಚಳ ಮತ್ತು ಆಗ್ನೇಯ ಏಷ್ಯಾಕ್ಕೆ 'ಬ್ರಹ್ಮೋಸ್' ಕ್ಷಿಪಣಿಗಳ ಮಾರಾಟ ಭಾರತದ 'ರಕ್ಷಣಾ ಜಾಲಗಳ' ಅಂಕವು 18.6 ಕ್ಕೆ ಏರಿದ್ದು, ಅದು ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ.
2026ರ ಏಷ್ಯಾ ಪವರ್ ಇಂಡೆಕ್ಸ್, ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯ, ಸ್ಥಿತಿಸ್ಥಾಪಕತ್ವ, ರಾಜತಾಂತ್ರಿಕ ಪ್ರಭಾವ ಮತ್ತು ಆರ್ಥಿಕ ಸಂಬಂಧಗಳು ಸೇರಿದಂತೆ ಎಂಟು ಶಕ್ತಿಯ ಅಳತೆಗಳಲ್ಲಿ 131 ಸೂಚಕಗಳ ಮೂಲಕ 27 ದೇಶಗಳು ಮತ್ತು ಪ್ರಾಂತ್ಯಗಳನ್ನು ನಿರ್ಣಯಿಸುತ್ತದೆ. ಈ ವರದಿಯಲ್ಲಿ ಚೀನಾದ ಒಟ್ಟಾರೆ ಶಕ್ತಿಯು ಭಾರತಕ್ಕಿಂತ ಶೇ. 80ರಷ್ಟು ಹೆಚ್ಚಿದೆ ಎಂದು ಅಂದಾಜಿಸಿದೆ (ಏಜೆನ್ಸೀಸ್).