ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮತದಾರರಲ್ಲೇ ಶೇ. 53ರಷ್ಟು ಜನರು E20 ಪೆಟ್ರೋಲ್ ಬಳಕೆ ಬಗ್ಗೆ ಅತೃಪ್ತಿ ಹೊಂದಿದ್ದ, ಅದನ್ನು ಬಳಸಲು ಬಯಸುವುದಿಲ್ಲ, ವಾಹನಗಳಿಗೆ ಹಾನಿ ಉಂಟುಮಾಡಬಹುದು ಹಾಗೂ ಮೈಲೇಜ್ ಕಡಿಮೆ ಮಾಡಬಹುದು ಎಂದು ಭಯಪಡುತ್ತಾರೆ ಎಂದು ಇತ್ತೀಚೆಗೆ ಸಿ-ವೋಟರ್(C-Voter survey) ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ದೇಶದಾದ್ಯಂತ ಜುಲೈ 8 ಮತ್ತು 9 ರಂದು ನಡೆಸಿದ ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಶೇ. 52.5 ರಷ್ಟು ಎನ್‌ಡಿಎ ಮತದಾರರು ತಮ್ಮ ವಾಹನಗಳಲ್ಲಿ ಇ20 ಪೆಟ್ರೋಲ್ ಬಳಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಶೇ. 18.1 ರಷ್ಟು ಮಾತ್ರ ಬಳಸಬಹುದು ಎಂದಿದ್ದಾರೆ. ಇನ್ನೂ ಶೇ. 29.5 ರಷ್ಟು ಜನ ಇನ್ನೂ ಬೆಂಬಲಿಸಬೇಕೇ, ಬೇಡವೇ ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ಬೆಂಬಲಿಗರಲ್ಲಿ ಶೇಕಡಾ 57.9ರಷ್ಟು ಜನ E20 ಪೆಟ್ರೋಲ್ ಅನ್ನು ಆಯ್ಕೆ ಮಾಡುವುದಿಲ್ಲ ಎಂದು ಹೇಳಿದ್ರೆ, ಇತರ ರಾಜಕೀಯ ಪಕ್ಷಗಳ ಬೆಂಬಲಿಗ ಮತದಾರರಲ್ಲಿ, ಶೇ. 55ರಷ್ಟು ಜನ E20 ಪೆಟ್ರೋಲ್ ಬೇಡವೇ ಬೇಡ ಎಂದು ತಿರಸ್ಕರಿಸಿದ್ದಾರೆ. ಒಟ್ಟಾರೆಯಾಗಿ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 55.1ರಷ್ಟು ಜನರು E20 ಪೆಟ್ರೋಲ್ ಅನ್ನು ಬಳಸಲು ಇಷ್ಟಪಡುವುದಿಲ್ಲ, ಆದರೆ ಕೇವಲ 17.1ರಷ್ಟು ಜನ ಮಾತ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಸರ್ಕಾರದ ಎಥೆನಾಲ್-ಪೆಟ್ರೋಲ್ ಮಿಶ್ರಣ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದರಿಂದ ಹಿಡಿದು ಅದರ ಹಣಕಾಸು ಮತ್ತು ತೈಲ ನೀತಿಯ ಪರಿಣಾಮಗಳವರೆಗೆ, ಎಥೆನಾಲ್ ಮಿಶ್ರಣವು ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುತ್ತದೆಯೇ ಎಂಬುದನ್ನೂ ಒಳಗೊಂಡಂತೆ 12 ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು.
E20 ಪೆಟ್ರೋಲ್ ಸಮರ್ಥಿಸಿಕೊಂಡ ನಿತಿನ್ ಗಡ್ಕರಿ
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ದೇಶಾದ್ಯಂತ ತೀವ್ರ ಟೀಕೆಗಳ ನಡುವೆಯೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ಎಥೆನಾಲ್ ಮಿಶ್ರಣ ವಿರುದ್ಧದ ಅಭಿಯಾನ ಅಸ್ತಿತ್ವದಲ್ಲಿರುವ ಕಚ್ಚಾತೈಲ ಆಮದು ವ್ಯವಸ್ಥೆಯಿಂದ ಲಾಭ ಪಡೆಯುವ ಲಾಭಿಗಳಿಂದ ಪ್ರಾಯೋಜಿಸಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ.
ಈ ಯಾವ ಟೀಕೆಗಳಿಂದ ನಾವು ಪ್ರಭಾವಿತರಾಗಿಲ್ಲ ಮತ್ತು ಕಚ್ಚಾತೈಲ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ನಿಯಂತ್ರಿಸುವುದು ಮತ್ತು ಇಂಧನ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಮಾತ್ರ ಗಮನಹರಿಸಿದ್ದೇವೆ. ನಾವು ಎಥೆನಾಲ್ ಮತ್ತು ಪರ್ಯಾಯ ಇಂಧನಗಳನ್ನು ಏಕೆ ಉತ್ತೇಜಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ಪ್ರತಿ ವರ್ಷ ಸುಮಾರು 22 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದಿದ್ದಾರೆ (ಏಜೆನ್ಸೀಸ್).