ಎನ್ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್
ಮುಂಬೈ: ವಿಮಾನ ಅಪಘಾತದಲ್ಲಿ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ನಿಧನರಾದ ಬಳಿಕ ಖಾಲಿ ಇರುವ ಮಹಾರಾಷ್ಟ್ರ ಡಿಸಿಎಂ ಹುದ್ದೆಯನ್ನು ಪವಾರ್ ಕುಟುಂಬದ ಜೊತೆ ಚರ್ಚೆ ಮಾಡಿದ ಬಳಿಕ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಎನ್ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಶುಕ್ರವಾರ(ಜ. 30) ಸಿಎಂ ದೇವೇಂಧ್ರ ಫಡ್ನವೀಸ್ ಭೇಟಿಯಾಗಿ ಚರ್ಚಿಸಿದ ಬಳಿಕ ಮಾತನಾಡಿರುವ ಅವರು, ಅಜಿತ್ ದಾದಾ ನಮ್ಮ ನಾಯಕ, ಮಹಾರಾಷ್ಟ್ರದ ಡಿಸಿಎಂ ಆಗಿದ್ದರು. ನಾವು ಶೀಘ್ರದಲ್ಲೇ ಆ ಸ್ಥಾನವನ್ನು ಭರ್ತಿ ಮಾಡಬೇಕಾಗಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗಿದೆ. ಪವಾರ್ ಕುಟುಂಬದೊಂದಿಗೆ ಮಾತನಾಡಿದ ನಂತರ ಮತ್ತು ಸಾರ್ವಜನಿಕರ ಭಾವನೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಜಿತ್ ಪವಾರ್ ಅವರ ಪತ್ನಿ ಮತ್ತು ರಾಜ್ಯಸಭೆ ಸಂಸದೆ ಸುನೇತ್ರಾ ಪವಾರ್ ಅವರು ಡಿಸಿಎಂ ಹುದ್ದೆ ಅಲಂಕರಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಚರ್ಚೆಗಳು ನಡೆಯುತ್ತಿವೆ. ನಾನು ಅವರೊಂದಿಗೆ ಮಾತನಾಡಿ, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.
ಸಿಎಂ ಫಡ್ನವೀಸ್ ಜೊತೆ ನಡೆದ ಒಂದೂವರೆ ಗಂಟೆಯ ಸಭೆಯಲ್ಲಿ ಎನ್ಸಿಪಿ ನಾಯಕರಾದ ಛಗನ್ ಭುಜಬಲ್, ಪ್ರಫುಲ್, ಪಕ್ಷದ ಅಧ್ಯಕ್ಷ ಸುನಿಲ್ ತತ್ಕರೆ ಹಾಗೂ ಮಾಜಿ ಸಚಿವ ಧನಂಜಯ್ ಮುಂಡೆ ಭಾಗವಹಿಸಿದ್ದರು. ಅಜಿತ್ ಪವಾರ್ ಅವರ ಹಠಾತ್ ನಿಧನ, ರಾಜಕೀಯ ಪರಿಸ್ಥಿತಿ ಹಾಗೂ ಪಕ್ಷದ ಭವಿಷ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ನಡುವೆ ಎನ್ಸಿಪಿ(ಎಸ್ಪಿ) ನಾಯಕ ಮತ್ತು ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಮಾತನಾಡಿ, ಅಜಿತ್ ಪವಾರ್ ಅವರು ಎನ್‌ಸಿಪಿಯ ಎರಡೂ ಬಣಗಳ ವಿಲೀನ ಆಗಬೇಕೆಂದು ಬಯಸಿದ್ದರು. ಜಯಂತ್ ಪಾಟೀಲ್ ಕೂಡ ಸಭೆ ನಡೆಸಿದ್ದರು. ನಗರಪಾಲಿಕೆ ಚುನಾವಣೆಯ ನಂತರ ನಾವು ನಿರ್ಧರಿಸುತ್ತೇವೆ. ಅಜಿತ್ ದಾದಾ ಅವರ ಆಶಯದಂತೆ ಎರಡೂ ಬಣಗಳು ಒಟ್ಟಿಗೆ ಸೇರಬೇಕಾಗಿದೆ. ಇದು ಅವರ ಅಂತಿಮ ಆಶಯವಾಗಿತ್ತು, ಆದ್ದರಿಂದ ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಎನ್‌ಸಿಪಿಯೊಳಗಿನ ಗುಂಪು ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರನ್ನು ಪಕ್ಷದ ಮುಂದಿನ ಅಧ್ಯಕ್ಷೆ ಮತ್ತು ಶಾಸಕಾಂಗ ಪಕ್ಷದ ನಾಯಕಿಯಾಗಿ ನೇಮಿಸಲು ಒತ್ತಾಯಿಸುತ್ತಿದೆ. ಇದು ಕಾರ್ಯರೂಪಕ್ಕೆ ಬರದಿದ್ದರೆ, ಎನ್‌ಸಿಪಿಯ ಪ್ರಫುಲ್ ಪಟೇಲ್ ಪಕ್ಷದ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ (ಏಜೆನ್ಸೀಸ್).