472 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ರೋಡ್ ರೋಲರ್ ಓಡಿಸಿ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
- ಅಸ್ಸಾಂ ಇತಿಹಾಸದಲ್ಲೇ ಅತಿದೊಡ್ಡ ಬೇಟೆ!
- 472 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ರೋಡ್ ರೋಲರ್ ಓಡಿಸಿ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
- ನಮ್ಮ ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಯಲು ಬಿಡಲ್ಲ ಎಂದ ಸಿಎಂ ಶರ್ಮಾ
ಗುವಾಹಟಿ: ಮಾದಕವಸ್ತು ದಂಧೆಯ ವಿರುದ್ಧ ಅಸ್ಸಾಂ ಸರ್ಕಾರ ಯುದ್ಧ ಸಾರಿದ್ದು, ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಡ್ರಗ್ಸ್ ವಿಲೇವಾರಿ ಅಭಿಯಾನವೊಂದಕ್ಕೆ ಭಾನುವಾರ (ಜು.12) ಅಸ್ಸಾಂ ಸಾಕ್ಷಿಯಾಗಿದೆ.
ಬರೋಬ್ಬರಿ 472.51 ಕೋಟಿ ರೂ. ಮೌಲ್ಯದ ವಶಪಡಿಸಿಕೊಳ್ಳಲಾಗಿದ್ದ ಮಾದಕವಸ್ತುಗಳನ್ನು ಸಾರ್ವಜನಿಕವಾಗಿ ನಾಶಪಡಿಸಲಾಗಿದೆ. ಈ ಮೂಲಕ ಡ್ರಗ್ಸ್ ಮಾಫಿಯಾಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma on Drug Mafia) ನಮ್ಮ ಜಾಗದಲ್ಲಿ ನಿಮ್ಮ ಆಟ ನಡೆಯಲ್ಲ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.
ಗುವಾಹಟಿಯ ಹೊರವಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ, ಅವರ ಸಂಪುಟ ಸಹೋದ್ಯೋಗಿಗಳಾದ ಜಯಂತ ಮಲ್ಲಾ ಬರುವಾ, ನಾರಾಯಣ್ ದೇಕಾ ಮತ್ತು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ರೋಡ್ ರೋಲರ್ ಓಡಿಸಿದ ಸಿಎಂ ಶರ್ಮಾ!
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಿಎಂ ಖುದ್ದಾಗಿ ರೋಡ್ ರೋಲರ್ ಚಲಾಯಿಸಿ ಮಾದಕವಸ್ತುಗಳನ್ನು ನಾಶಪಡಿಸುತ್ತಿರುವುದನ್ನು ವಿಡಿಯೋನಲ್ಲಿ ಕಾಣಬಹುದಾಗಿದೆ.
ಮಾದಕವಸ್ತುಗಳ ವಿರುದ್ಧದ ನಮ್ಮ ಹೋರಾಟವನ್ನು ನಾವು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದೇವೆ. ಲಕ್ಷಾಂತರ ಅಮೂಲ್ಯ ಜೀವಗಳನ್ನು ಬಲಿಪಡೆಯಬಹುದಾಗಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಇಂದು ನಾಶ ಮಾಡಲಾಗಿದೆ. ಡ್ರಗ್ಸ್ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ನೀತಿ, ಎಂದು ಸಿಎಂ ಶರ್ಮಾ ಬರೆದುಕೊಂಡಿದ್ದಾರೆ.
ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕ ವಿಲೇವಾರಿ
ಕೋರ್ಟ್ ಪ್ರಕ್ರಿಯೆಗಳು ಮುಗಿದ ನಂತರ ಈ ಮಾದಕವಸ್ತುಗಳನ್ನು ನಾಶಪಡಿಸಲು ಅನುಮತಿ ಸಿಕ್ಕಿತ್ತು. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ, ಕೇಂದ್ರ ಸರ್ಕಾರ ಒದಗಿಸಿದ ಹೈ-ಟೆಕ್ ಹೆಚ್ಚಿನ-ತಾಪಮಾನದ ದಹನಕಾರಿ ಯಂತ್ರವನ್ನು ಬಳಸಿ ಇವುಗಳನ್ನು ಸುಡಲಾಯಿತು. ಇನ್ನುಳಿದ ದಾಸ್ತಾನನ್ನು ಮುಗಿಸಲು ಮುಂದಿನ 8 ರಿಂದ 9 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಶಪಡಿಸಲಾದ ಡ್ರಗ್ಸ್ ಪಟ್ಟಿ!
ಹೆರಾಯಿನ್ 58.877 ಕೆಜಿ, ಮಾರ್ಫಿನ್ 39.068 ಕೆಜಿ, ಅಫೀಮು 79.770 ಕೆಜಿ, ಗಾಂಜಾ 37,796.34 ಕೆಜಿ, ಯಾಬಾ ಮಾತ್ರೆಗಳು 19.02 ಲಕ್ಷ, ಕೆಮ್ಮಿನ ಸಿರಪ್ 2.29 ಲಕ್ಷ ಬಾಟಲಿಗಳು, ಕೊಕೇನ್ 0.0471 ಕೆಜಿ ಮತ್ತು 9.49 ಕೆಜಿ ಪಾಪಿ ಸ್ಟ್ರಾಗಳನ್ನು ನಾಶಪಡಿಸಲಾಗಿದೆ.
ಡ್ರಗ್ಸ್ ದಂಧೆಗೆ ಜಾತಿ-ಧರ್ಮ ಇಲ್ಲ!
ಮಾದಕವಸ್ತು ಕಳ್ಳಸಾಗಣೆಗೆ ಯಾವುದೇ ಜಾತಿ, ಧರ್ಮ ಅಥವಾ ಸಮುದಾಯ ಇರುವುದಿಲ್ಲ. ಇದೊಂದು ದೊಡ್ಡ ಸಂಘಟಿತ ಅಪರಾಧ ಜಾಲ, ಎಂದು ಸಿಎಂ ಶರ್ಮಾ ಹೇಳಿದ್ದಾರೆ. ಅಸ್ಸಾಂಗೆ ಬರುವ ಬಹುಪಾಲು ಡ್ರಗ್ಸ್ ಮ್ಯಾನ್ಮಾರ್‌ನಿಂದ ಮಿಜೋರಾಂ ಮತ್ತು ಮಣಿಪುರ ಮಾರ್ಗವಾಗಿ ದೇಶದ ಇತರ ಭಾಗಗಳಿಗೆ ಸಾಗಿಸಲ್ಪಡುತ್ತದೆ. ಪೊಲೀಸರು ನೂರಾರು ಪೆಡ್ಲರ್‌ಗಳನ್ನು ಹಿಡಿದಿದ್ದರೂ, ಇದರ ಅಸಲಿ ಕಿಂಗ್‌ಪಿನ್‌ಗಳು ವಿದೇಶಿ ಗಡಿಯ ಆಚೆ ಕುಳಿತು ರಿಮೋಟ್ ಕಂಟ್ರೋಲ್ ಮಾಡುತ್ತಿರುವುದು ಜಾರಿ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ.
ಖದೀಮರ ಐಡಿಯಾ ಕೇಳಿದ್ರೆ ಶಾಕ್ ಆಗ್ತೀರಾ!
ಡ್ರಗ್ಸ್ ಕಳ್ಳಸಾಗಣೆದಾರರು ಪೊಲೀಸರ ಕಣ್ಣಿಗೆ ಮಣ್ಣೆರಚಲು ಏನೆಲ್ಲಾ ಹೈಟೆಕ್ ಪ್ಲಾನ್ ಮಾಡುತ್ತಾರೆ ಎಂಬುದನ್ನು ಸಿಎಂ ಕೆಲವು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ಕಾಲು ಮುರಿದುಕೊಂಡಂತೆ ನಟಿಸಿ, ನಕಲಿ 'ಲೆಗ್ ಕ್ಯಾಸ್ಟ್' ಒಳಗೆ ಡ್ರಗ್ಸ್ ಅಡಗಿಸಿಟ್ಟಿದ್ದ ಕಿಲಾಡಿಗಳನ್ನು ಪೊಲೀಸರು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಸೆಕ್ಯೂರಿಟಿ ಚೆಕಿಂಗ್‌ನಿಂದ ತಪ್ಪಿಸಿಕೊಳ್ಳಲು ಕೊಕೇನ್ ಅನ್ನು ಸಣ್ಣ ಬಾಟಲಿಗಳಲ್ಲಿ ಅಡಗಿಸಿ ಸಾಗಿಸುವ ತಂತ್ರವನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
ಕೇವಲ ಗಡಿಗೆ ಬೇಲಿ ಹಾಕುವುದರಿಂದ ಮಾತ್ರ ಡ್ರಗ್ಸ್ ತಡೆಯಲು ಸಾಧ್ಯವಿಲ್ಲ. ಕಳ್ಳಸಾಗಣೆದಾರರು ಪ್ರತಿದಿನ ಹೊಸ ತಂತ್ರಜ್ಞಾನ ಬಳಸುತ್ತಿದ್ದಾರೆ. ನಮ್ಮ ಏಜೆನ್ಸಿಗಳು ಅವರಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕು ಎಂದು ಶರ್ಮಾ ಎಚ್ಚರಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಅಸ್ಸಾಂ ಪೊಲೀಸರು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಬರೋಬ್ಬರಿ 3,300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ, (ಏಜನ್ಸೀಸ್).