ಶಸ್ತ್ರ ಪೂಜೆ ವೇಳೆ ಎಕೆ-47 ಬಂದೂಕು ಹಿಡಿದಿರುವ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ 
ದೇಶ

ಸೀರೆಯುಟ್ಟು AK-47 ಸಿಡಿಸಿ ಅಬ್ಬರ: ಎಸ್ಪಿ ಅಂಕಿತಾ ಶರ್ಮಾಗೆ IG ಕಚೇರಿಯಿಂದ ನೋಟಿಸ್​; ಮೂರು ದಿನಗಳ ಡೆಡ್​ಲೈನ್​! Ankita Sharma IPS

ದಸರಾ ಶಸ್ತ್ರ ಪೂಜೆಯಲ್ಲಿ ಸೀರೆ ಧರಿಸಿ ಎಕೆ-47 ಬಂದೂಕಿನಿಂದ ಗುಂಡು ಹಾರಿಸಿ ವಿವಾದಕ್ಕೆ ಸಿಲುಕಿದ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾಗೆ ಐಜಿ ಕಚೇರಿ 3 ದಿನಗಳ ಒಳಗೆ ಉತ್ತರಿಸಲು ನೋಟಿಸ್ ಜಾರಿ ಮಾಡಿದೆ.

ಛತ್ತೀಸಗಢ: ದಸರಾ ಹಬ್ಬದ ಪ್ರಯುಕ್ತ ನಡೆದಿದ್ದ ಆಯುಧ ಪೂಜೆ ದಿನ ಸೀರೆ ಧರಿಸಿ, ಎಕೆ-47 ರೈಫಲ್​ ಹಿಡಿದು ಅಬ್ಬರಿಸಿದ್ದ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಕೈಯಲ್ಲಿ ಗುಂಡು ತುಂಬಿದ ಬಂದೂಕನ್ನು ಹಿಡಿದು ಅವರು ಫೈರಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಛತ್ತೀಸ್‌ಗಢ ಪೊಲೀಸ್ ಆಯುಕ್ತರು, ಎಸ್‌ಪಿ ಅಂಕಿತಾ ಶರ್ಮಾ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿ ಮೂರು ದಿನಗಳಲ್ಲಿ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಕೊಡುವಂತೆ ಗಡುವು ನೀಡಿದ್ದಾರೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಇತ್ತೀಚೆಗೆ ವಿಜಯದಶಮಿ ಪ್ರಯುಕ್ತ ರಾಜನಂದಗಾಂವ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಅಂಕಿತಾ ಶರ್ಮಾ ಸೀರೆಯುಟ್ಟು ಶಸ್ತ್ರ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಪೂಜೆಯ ಬಳಿಕ ಅವರು ಎಕೆ-47 ರೈಫಲ್ ಹಿಡಿದು ಗಾಳಿಯಲ್ಲಿ ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ಈ ಸಮಯದಲ್ಲಿ ಸುತ್ತಲೂ ಪೊಲೀಸ್ ಸಿಬ್ಬಂದಿ ಮತ್ತು ಜನರು ನಿಂತಿರುವಾಗ ಈ ವರ್ತನೆ ತೋರಿದ್ದು ವಿವಾದಕ್ಕೆ ಕಾರಣವಾಗಿದೆ.

ಮಾಜಿ ಸೇನಾಧಿಕಾರಿ ಗರಂ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ಟ್ವಿಟರ್ ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಗುಂಡು ತುಂಬಿದ ಬಂದೂಕನ್ನು ಇಷ್ಟು ಅಜಾಗರೂಕವಾಗಿ ವಿವಿಧ ದಿಕ್ಕುಗಳಿಗೆ ತಿರುಗಿಸುವುದು, ಅಕ್ಕಪಕ್ಕ ನಿಂತಿರುವ ಜನರ ಸುರಕ್ಷತೆಯನ್ನು ಗಾಳಿಗೆ ತೂರುವುದು ಅತ್ಯಂತ ಅಪಾಯಕಾರಿ. ಇಲ್ಲಿ ಶಸ್ತ್ರಾಸ್ತ್ರ ನಿರ್ವಹಣೆಯ ಮೂಲಭೂತ ನಿಯಮಗಳನ್ನೇ ಗಾಳಿಗೆ ತೂರಲಾಗಿದೆ. ಇದು ಸ್ಪಷ್ಟವಾಗಿ ಜವಾಬ್ದಾರಿರಹಿತ ಕೃತ್ಯವಾಗಿದ್ದು, ಇಂತಹ ನಡವಳಿಕೆಯ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು" ಎಂದು ಗುಡುಗಿದ್ದಾರೆ.

ಪೊಲೀಸ್ ಇಲಾಖೆಗೆ ಮುಜುಗರ: 3 ದಿನಗಳ ಡೆಡ್‌ಲೈನ್!

ಜನಸಾಮಾನ್ಯರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ರಾಜನಂದಗಾಂವ್ ರೇಂಜ್ ಐಜಿ ಅಜಯ್ ಯಾದವ್ ಈ ಬಗ್ಗೆ ಮಾತನಾಡುತ್ತಾ, "ಶಸ್ತ್ರ ಪೂಜೆಯ ನಂತರ ಖಾಲಿ ಗುಂಡುಗಳನ್ನು ಹಾರಿಸುವುದು ಬಹಳ ಕಾಲದಿಂದ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ.

ಆದರೆ, ಸಂಭ್ರಮಾಚರಣೆಯ ಹೆಸರಿನಲ್ಲಿ ನಿಯಮಗಳನ್ನು ಕಡೆಗಣಿಸುವುದು ಮತ್ತು ಸಾರ್ವಜನಿಕವಾಗಿ ಇಲಾಖೆಯ ಘನತೆಗೆ ಧಕ್ಕೆ ತರುವುದು ಸರಿಯಲ್ಲ" ಎಂದಿದ್ದಾರೆ. ಪೊಲೀಸ್ ಪ್ರಧಾನ ಕಚೇರಿ ಈಗ ಅವರ ಮೂಲಕವೇ ಎಸ್‌ಪಿಗೆ ನೋಟಿಸ್ ರವಾನಿಸಿದ್ದು, ಮೂರು ದಿನಗಳೊಳಗೆ ಸಮಜಾಯಿಷಿ ನೀಡಲು ಆದೇಶಿಸಿದೆ.

ಮುಂದೇನು?

ಸಂಪ್ರದಾಯದ ಭಾಗವಾಗಿ ಗುಂಡು ಹಾರಿಸಲಾಯಿತೇ ಅಥವಾ ವೈಯಕ್ತಿಕ ಕ್ರೇಜ್‌ಗಾಗಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಯಿತೇ? ಪೊಲೀಸ್ ಮಹಾನಿರ್ದೇಶಕರ ನೋಟಿಸ್‌ಗೆ ಲೇಡಿ ಎಸ್‌ಪಿ ಏನು ಉತ್ತರ ನೀಡಲಿದ್ದಾರೆ? ಇಲಾಖೆ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆಯೇ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ, (ಏಜೆನ್ಸೀಸ್​).