ಸುಪ್ರೀಂಕೋರ್ಟ್ 
ದೇಶ

ಮದುವೆಗೂ ಮುಂಚೆ ಯಾರನ್ನೂ ನಂಬಬೇಡಿ; ದೈಹಿಕ ಸಂಬಂಧದ ಬಗ್ಗೆ ಎಚ್ಚೆರಿಕೆಯಿಂದ ಇರಬೇಕು: ಸುಪ್ರೀಂಕೋರ್ಟ್​ | Supreme Court

ನವದೆಹಲಿ: ಮದುವೆಗೂ ಮುನ್ನ ಹುಡಗ-ಹುಡುಗಿ ಸಂಪೂರ್ಣ ಅಪರಿಚಿತರು, ಯಾರೂ ಯಾರನ್ನೂ ನಂಬಬೇಡಿ. ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದುವ ಬಗ್ಗೆ ಇಬ್ಬರಲ್ಲಿ ಒಬ್ಬರು ಬಹಳ ಎಚ್ಚರಿಕೆಯಿಂದ ಯೋಚಿಸಬೇಕು ಎಂದು ಸೋಮವಾರ(ಫೆ. 16) ಸುಪ್ರೀಂಕೋರ್ಟ್(Supreme Court) ಹೇಳಿದೆ.
ವಿವಾಹದ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
2024ರಲ್ಲಿ ಮ್ಯಾಟ್ರಿಮೋನಿಯಂ ವೆಬ್​ಸೈಟ್​ನಲ್ಲಿ ಮಹಿಳೆಯೊಬ್ಬರನ್ನು ಪರಿಚಯವಾಗಿದ್ದ ಆರೋಪಿ, ಮದುವೆ ಭರವಸೆ ನೀಡಿ ಆಕೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಮತ್ತು ದುಬೈಗೂ ಅವನ ಜೊತೆ ಮಹಿಳೆ ತೆರಳಿದ್ದಳು. ಅದಾದ ಬಳಿಕ ಆತನಿಗೆ ಮದುವೆಯಾಗಿರುವುದು ತಿಳಿದು ಬಂದಿದೆ. ಈ ಕುರಿತು ಮೊದಲ ಮದುವೆಯನ್ನು ಮುಚ್ಚಿಟ್ಟು, ತನ್ನೊಂದಿಗೆ ದೈಹಿಕ ಸಂಪರ್ಕ ಸಾಧಿಸಿ, ಅದನ್ನು ವಿಡಿಯೋ ಮಾಡಿ ಬ್ಲಾಕ್​​ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದ್ದಾಳೆ.
ಅರ್ಜಿ ವಿಚಾರಣೆ ನಡೆಸಿ ಪ್ರತಿಕ್ರಿಯಿಸಿರುವ ನ್ಯಾ.ನಾಗರತ್ನ, ಈ ಪ್ರಕರಣದಲ್ಲಿ ಇಬ್ಬರ ನಡುವಿನ ದೈಹಿಕ ಸಂಬಂಧವು ಒಪ್ಪಿಗೆಯಿಂದ ಕೂಡಿದ್ದಂತೆ ತೋರುತ್ತದೆ. ನಾವು ಬಹಳ ದಿನಗಳಿಂದ ಸ್ನೇಹಿತರಾಗಿರಬಹುದು. ಆದರೆ ಮದುವೆಗೆ ಮೊದಲು, ಹುಡುಗ ಮತ್ತು ಹುಡುಗಿ ಅಪರಿಚಿತರಾಗಿದ್ದರು. ಆ ಸಂದರ್ಭದಲ್ಲಿ, ಮದುವೆಗೆ ಮೊದಲು ದೈಹಿಕ ಸಂಬಂಧಗಳನ್ನು ಹೊಂದುವ ಬಗ್ಗೆ ಒಬ್ಬರು ಜಾಗರೂಕರಾಗಿರಬೇಕು. ಮದುವೆಗೆ ಮೊದಲು ಅಂತಹ ದೈಹಿಕ ಸಂಬಂಧಗಳನ್ನು ಹೇಗೆ ಹೊಂದಬಹುದು ಎಂದು ನಮಗೆ ಅರ್ಥವಾಗುತ್ತಿಲ್ಲ. ನಾವು ಹಳೆಯ ಕಾಲದವರು. ಇದನ್ನೂ ಹೇಗೆ ನೋಡಬೇಕು? ಎಂದಿದ್ದಾರೆ.
ಮದುವೆಗೂ ಮುನ್ನ ಯಾರೂ ಯಾರನ್ನೂ ನಂಬಬಾರದು. ಯುವತಿ ದುಬೈಗೆ ಏಕೆ ಹೋಗಬೇಕಾಯಿತು?, ಇಬ್ಬರ ನಡುವಿನ ಲೈಂಗಿಕ ಸಂಬಂಧವು ಒಪ್ಪಿಗೆಯಿಂದ ಕೂಡಿದೆ. ಆದ್ದರಿಂದ ಅವರನ್ನು ಮಧ್ಯಸ್ಥಿಕೆಗೆ ಕಳುಹಿಸಲಾಗುವುದು. ಇಬ್ಬರ ನಡುವೆ ಪರಸ್ಪರ ಒಪ್ಪಿಗೆ ಇರುವ ಅಂತಹ ಪ್ರಕರಣಗಳಲ್ಲಿ ತನಿಖೆ ನಡೆಸಬೇಕು ಮತ್ತು ಶಿಕ್ಷೆ ವಿಧಿಸಬಾರದು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸಂತ್ರಸ್ತೆಗೆ ಯಾವುದೇ ಪರಿಹಾರವನ್ನು ಪಾವತಿಸಬಹುದೇ ಎಂದು ನೋಡಲು ಅವರು ಆರೋಪಿಯ ವಕೀಲರಿಗೆ ಸೂಚಿಸಿದ್ದು, ಮಧ್ಯಸ್ಥಿಕೆಯ ಮೂಲಕ ಪ್ರಕರಣವನ್ನು ಪರಿಹರಿಸಲು ಪ್ರಯತ್ನಿಸುವಂತೆ ಅವರು ಸಂತ್ರಸ್ತೆಯ ವಕೀಲರಿಗೆ ಸಲಹೆ ನೀಡಿದ್ದಾರೆ. ಬಳಿಕ ವಿಚಾರಣೆಯನ್ನು ಮುಂದಿನ ಬುಧವಾರಕ್ಕೆ ಮುಂದೂಡಿದ್ದಾರೆ (ಏಜೆನ್ಸೀಸ್).