Raghav Chadha | ಬಿಜೆಪಿ ಸಂಸದ ರಾಘವ್ ಚಡ್ಡಾ 
ದೇಶ

ಪ್ರಶ್ನೆ ಕೇಳುವುದು ಮುಗಿಯಿತು, ಈಗ ಪರಿಹಾರ ಕೊಡುವುದಷ್ಟೇ...ನೀಟ್ ಪೇಪರ್ ಲೀಕ್ ವಿಚಾರದಲ್ಲಿ ಮೌನದ ರಹಸ್ಯ ಬಿಚ್ಚಿಟ್ಟ ಚಡ್ಡಾ! | Raghav Chadha

ನವದೆಹಲಿ: ದೇಶ್ಯಾದ್ಯಂತ ಭಾರಿ ಸದ್ದು ಮಾಡಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ತಾವು ಏತಕ್ಕಾಗಿ ಮೌನವಹಿಸಿದ್ದರು ಎಂಬುದಕ್ಕೆ ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಗುರುವಾರ ವಿವರಣೆ ನೀಡಿದ್ದಾರೆ. ಪೇಪರ್ ಲೀಕ್ ವಿರೋಧಿ ವಿಧೇಯಕದ ಮೇಲಿನ ಚರ್ಚೆಯ ವೇಳೆ ಭಾಷಣ ಮಾಡಿದ ಚಡ್ಡಾ, ಇಂತಹ ಪ್ರಕರಣಗಳನ್ನು ಮಾಧ್ಯಮಗಳ ಸೌಂಡ್‌ಬೈಟ್‌ಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ, ಬದಲಿಗೆ ಸಾಂಸ್ಥಿಕ ಪರಿಹಾರದ ಅಗತ್ಯವಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ತಮ್ಮ ಹಳೆಯ ಪಕ್ಷವಾದ ಆಪ್​ ಕಾಲೆಳೆದ ಸಂಸದ ಚಡ್ಡಾ, ವಿರೋಧ ಪಕ್ಷದಿಂದ ಆಡಳಿತ ಪಕ್ಷದ ಸಾಲಿಗೆ ಬಂದ ನಂತರ ತಮ್ಮ ಪಾತ್ರ ಬದಲಾಗಿದ್ದು, ಈಗ ಪರಿಹಾರ ಕಂಡುಕೊಳ್ಳುವುದರ ಮೇಲಷ್ಟೇ ತಮ್ಮ ಗಮನವಿದೆ ಎಂದು ಹೇಳಿದರು.
ನೀಟ್ ಪೇಪರ್ ಲೀಕ್ ಕುರಿತು ತಾವೇಕೆ ಮಾತನಾಡಲಿಲ್ಲ ಎಂದು ಹಲವರು ಪ್ರಶ್ನಿಸಿದ್ದರು ಎಂದ ಚಡ್ಡಾ, ಹಿಂದೆ ನಾನು ವಿರೋಧ ಪಕ್ಷದಲ್ಲಿದ್ದಾಗ ಪ್ರಶ್ನೆಗಳನ್ನು ಎತ್ತುವುದು ನನ್ನ ಕೆಲಸವಾಗಿತ್ತು, ಅದನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಈಗ ನಾನು ಆಡಳಿತ ಪಕ್ಷದಲ್ಲಿದ್ದೇನೆ, ಹೀಗಾಗಿ ನನ್ನ ಪಾತ್ರ ಬದಲಾಗಿದೆ. ಇನ್ಮುಂದೆ ಪ್ರಶ್ನೆ ಕೇಳುವುದು ನನ್ನ ಜವಾಬ್ದಾರಿಯಲ್ಲ, ಬದಲಿಗೆ ಪರಿಹಾರ ಒದಗಿಸುವುದು ನನ್ನ ಜವಾಬ್ದಾರಿ" ಎಂದು ಅವರು ಹೇಳಿದರು.

ಇಂದು ಆ ದಿನ ಬಂದಿದೆ!...

ಎನ್‌ಡಿಎ ನೇತೃತ್ವದ ಸರ್ಕಾರವು ಖಚಿತವಾದ ಪರಿಹಾರವನ್ನು ಮುನ್ನೆಲೆಗೆ ತಂದ ನಂತರವೇ ಮಾತನಾಡಲು ಉದ್ದೇಶಪೂರ್ವಕವಾಗಿ ನಿರ್ಧರಿಸಿತ್ತು ಎಂದು ಚಡ್ಡಾ ಹೇಳಿದರು. ಈ ಸಮಸ್ಯೆಗೆ ನಮ್ಮ ಬಳಿ ಪರಿಹಾರ ಸಿಕ್ಕಾಗ ಮಾತ್ರ ಮಾತನಾಡಬೇಕು ಎಂದು ನಾನು ನಿರ್ಧರಿಸಿದ್ದೆ, ಇಂದು ಆ ದಿನ ಬಂದಿದೆ. ನಮ್ಮ ಸರ್ಕಾರ ಈ ಕಾಯಿಲೆಗೆ ಚಿಕಿತ್ಸೆ ತಂದಿದೆ. ನಾನು ಕೂಡ ಟಿವಿ ಕ್ಯಾಮೆರಾಗಳ ಮುಂದೆ ಮಾತನಾಡಬಹುದಿತ್ತು, ಆದರೆ ಅದರ ಬದಲು ನಾವು ಶಾಶ್ವತ ಪರಿಹಾರವನ್ನು ಕಂಡುಕೊಂಡಿದ್ದೇವೆ ಎಂದು ಚಡ್ಡಾ ತಿಳಿಸಿದರು.
ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗಲೆಲ್ಲಾ ಕೇಂದ್ರ ಸರ್ಕಾರವು ಆಲಿಸಿದೆ, ತಕ್ಷಣ ಸ್ಪಂದಿಸಿದೆ ಮತ್ತು ಸೂಕ್ತ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದ ರಾಜ್ಯಸಭಾ ಸಂಸದ, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳನ್ನು ಈ ವೇಳೆ ಉಲ್ಲೇಖಿಸಿದರು. ಇದರಲ್ಲಿ ಗಣಕೀಕೃತ (Computerized) ಪರೀಕ್ಷೆಗಳಿಗೆ ಆದ್ಯತೆ ನೀಡುವುದು ಮತ್ತು ಸಂಘಟಿತ ಸಿಂಡಿಕೇಟ್‌ಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ತಂದಿರುವ ಕಠಿಣ ಶಾಸನಬದ್ಧ ಶಿಕ್ಷೆಗಳು ಸೇರಿವೆ.

ರಾಜ್ಯದ ಪೇಪರ್ ಲೀಕ್ ಬಗ್ಗೆಯೂ ಉಲ್ಲೇಖ!

ಇದೇ ವೇಳೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಪೇಪರ್ ಲೀಕ್ ಘಟನೆಗಳನ್ನು ನೆನಪಿಸಿದ ಚಡ್ಡಾ, ಕರ್ನಾಟಕದಲ್ಲಿ ಈ ವರ್ಷ ನಡೆದಿದೆ ಎನ್ನಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೇಪರ್ ಲೀಕ್ ಮತ್ತು 2016 ರ ದ್ವಿತೀಯ ಪಿಯುಸಿ ಕೆಮಿಸ್ಟ್ರಿ ಪೇಪರ್ ಲೀಕ್ ಪ್ರಕರಣಗಳನ್ನು ಉಲ್ಲೇಖಿಸಿದರು. ಜೊತೆಗೆ ವಿದ್ಯಾರ್ಥಿ ಚಳವಳಿಗಳನ್ನು ರಾಜಕೀಯಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಧ್ವನಿ ಅತ್ಯಂತ ಪ್ರಮುಖವಾದದ್ದು. ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಪ್ರತಿಭಟನೆ ಮಾಡುವುದು, ಪ್ರಶ್ನೆ ಕೇಳುವುದು, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದು ಹಾಗೂ ಶಾಂತಿಯುತ ಮೆರವಣಿಗೆ ನಡೆಸುವುದು ಅವರ ಸಾಂವಿಧಾನಿಕ ಹಕ್ಕು. ಆದರೆ ವಿದ್ಯಾರ್ಥಿಗಳ ಪ್ರತಿಭಟನೆ ಎಂದಿಗೂ ವಿದ್ಯಾರ್ಥಿ ಪ್ರತಿಭಟನೆಯಾಗಿಯೇ ಇರಬೇಕು. ಅದು ಯಾವುದೇ ರಾಜಕೀಯ ಪಕ್ಷದ ರ‍್ಯಾಲಿಯಾಗಬಾರದು ಎಂದು ಹೇಳಿದರು. ಇದೇ ವೇಳೆ ಅವರು ಪಂಜಾಬ್‌ನಲ್ಲಿ ನಡೆದ ಪರೀಕ್ಷಾ ಅಕ್ರಮಗಳ ಕುರಿತು ಅಲ್ಲಿನ ಸರ್ಕಾರವನ್ನೂ ಟೀಕಿಸಿದರು(ಏಜೆನ್ಸೀಸ್​​).