ನಂದಿಗ್ರಾಮ: ಬಂಗಾಳ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ, ಈ ಹೊತ್ತಲ್ಲೇ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ನಂದಿಗ್ರಾಮದ ಮುಸ್ಲಿಂ ವಲಸೆ ಕಾರ್ಮಿಕರಿಗೆ ನೀಡಿರುವ ಎಚ್ಚರಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ನಂದಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, 'ನೀವು ಕೆಲಸಕ್ಕಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೇ ಮರಳಬೇಕು ನೆನಪಿನಲ್ಲಿಡಿ. ಸರಿಯಾದ ನಿರ್ಧಾರ ಕೈಗೊಂಡು ವೋಟ್ ಮಾಡಿ ಎಂದು ಮಾತನಾಡಿರುವುದು ಟಿಎಂಸಿ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಜನ ಮತ ಹಾಕುವ ಮೂಲಕ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸುವೇಂದು ಹೇಳಿದ್ದೇನು?
'ನಂದಿಗ್ರಾಮದಲ್ಲಿ ಸುಮಾರು 30,000 ವಲಸೆ ಕಾರ್ಮಿಕರಿದ್ದಾರೆ. ಗುಜರಾತ್‌ನಲ್ಲಿ 1,100, ಒಡಿಶಾದಲ್ಲಿ 800 ಮತ್ತು ಮಹಾರಾಷ್ಟ್ರದಲ್ಲಿ 3,300 ಮುಸ್ಲಿಂ ಯುವಕರು ಕೆಲಸ ಮಾಡುತ್ತಿದ್ದಾರೆ. ಈ ರಾಜ್ಯಗಳಲ್ಲಿ ಯಾರ ಸರ್ಕಾರವಿದೆ? ಅಲ್ಲಿರುವುದು ಬಿಜೆಪಿ ಸರ್ಕಾರ. ಹಾಗಾಗಿ ಯಾವುದೇ ತಪ್ಪು ಮಾಡಬೇಡಿ. ಮೇ 4ರ ಫಲಿತಾಂಶದ ನಂತರ ನಿಮಗೆ ಯಾವುದೇ ತೊಂದರೆಯಾಗದಂತೆ ಈಗಲೇ ಸರಿಯಾದ ಹಾದಿಯಲ್ಲಿ ನಡೆಯಿರಿ' ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ಸುವೇಂಧು ಹೇಳಿಕೆ ವಿರುದ್ಧ ಟಿಎಂಸಿ ಹೇಳಿದ್ದೇನು?
ಸುವೇಂದು ಅಧಿಕಾರಿ ಅವರ ಈ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಟಿಎಂಸಿ ಅಭ್ಯರ್ಥಿ ಪವಿತ್ರ ಕರ್ ಪ್ರತಿಕ್ರಿಯಿಸಿ, ಸುವೇಂಧು ಅಧಿಕಾರಿ ಅವರ ರಾಜಕೀಯವು ಕೇವಲ ಬೆದರಿಕೆ ಮತ್ತು ದೌರ್ಜನ್ಯದ ಮೇಲೆ ನಿಂತಿದೆ. ಶಾಂತಿ ಕಾಪಾಡಬೇಕಾದ ಜನಪ್ರತಿನಿಧಿಯೇ ಈ ರೀತಿ ಜನರನ್ನು ಹೆದರಿಸುತ್ತಿದ್ದಾರೆ. ಇದಕ್ಕೆ ನಂದಿಗ್ರಾಮದ ಜನತೆ ಇವಿಎಂ ಮೂಲಕ ಉತ್ತರ ನೀಡಲಿದ್ದಾರೆ' ಎಂದು ಗುಡುಗಿದ್ದಾರೆ.
ಮತ್ತೊಂದೆಡೆ, ನಂದಿಗ್ರಾಮದ ಮತದಾರರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳಲ್ಲಿ ಶೇ. 95.5 ರಷ್ಟು ಮುಸ್ಲಿಮರ ಹೆಸರುಗಳಿವೆ ಎಂಬ ವರದಿಯ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ, (ಏಜೆನ್ಸೀಸ್).