ಪಾಕಿಸ್ತಾನಕ್ಕೆ ಹಣ ರವಾನಿಸುತ್ತಿದ್ದ ಮೊಹಮ್ಮದ್ ಜಾಫರ್
- ಮದರಾಸಾ ಹೆಸರಿನಲ್ಲಿ ದೇಣಿಗೆ ವಸೂಲಿ
- ಪಾಕಿಸ್ತಾನಕ್ಕೆ ಹಣ ರವಾನಿಸುತ್ತಿದ್ದ ಮೊಹಮ್ಮದ್ ಜಾಫರ್
- ಜೈಶ್ ಉಗ್ರರ ಸಂಪರ್ಕದಲ್ಲಿದ್ದವನನ್ನು ಬಂಧಿಸಿದ ಉತ್ತರ ಪ್ರದೇಶ್ ಎಟಿಎಸ್
ಉತ್ತರ ಪ್ರದೇಶ: ಮದರಾಸಾಗಳಿಗೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಜನರಿಂದ ಹಣವನ್ನು ಪಡೆದು ಅದನ್ನು ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ಗೆ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂದಿಸಿದೆ ಎಂದು ವರದಿಯಾಗಿದೆ.
ಬಂಧಿತ ಆರೋಪಿ ಬಿಹಾರದ ಪೂರ್ನಿಯಾ ನಿವಾಸಿ ಮೊಹಮ್ಮದ್ ಜಾಫರ್ (Mohammad Jafar), ಎಂದು ಗುರುತಿಸಲಾಗಿದ್ದು, ಇವನನ್ನು ಆಗಸ್ಟ್ 16 ರಂದು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಮದರಾಸಾ ನೆಪದಲ್ಲಿ ಹಣ ಸಂಗ್ರಹ!
ಬಂಧಿತ ಆರೋಪಿ ಮೊಹಮ್ಮದ್ ಜಾಫರ್, ತಾನು ಸಂಗ್ರಹಿಸುವ ಹಣವನ್ನು ಮದರಾಸಾಗಳಿಗೆ ದೇಣಿಗೆ ನೀಡುವುದಾಗಿ ಹೇಳಿಕೊಂಡು ಜನರಿಂದ ಹಣವನ್ನು ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ನಂತರ ಸಂಗ್ರಹಿಸಿದ ಹಣವನ್ನು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ಗೆ ವರ್ಗಾಯಿಸಲು ಮುಂದಾದಾಗ ಸಿಕ್ಕಿಬಿದ್ದಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಜಾಫರ್, ಸೋಷಿಯಲ್ ಮೀಡಿಯಾ ಮೂಲಕ ಜೈಶ್-ಎ-ಮೊಹಮ್ಮದ್ ಸ್ಥಾಪಕ ಮಸೂದ್ ಅಜರ್ ಪ್ರಭಾವಕ್ಕೆ ಒಳಗಾಗಿದ್ದು, ಇವನ ಮೊಬೈಲ್ನಲ್ಲಿ ನೂರಾರು ಭಯೋತ್ಪಾದಕ ಗ್ರೂಪ್ಗಳಿರುವುದು ಪತ್ತೆಯಾಗಿದೆ.
ಈ ಗ್ರೂಪ್ಗಳಲ್ಲಿ ತಾನು ಭಾರತದಿಂದ ಹಣವನ್ನು ಪಾಕಿಸ್ತಾನಕ್ಕೆ ರವಾನಿಸುವುದಾಗಗಿ ಈತ ತಿಳಿಸಿದ್ದು, ಈ ಮೊದಲು ಕೂಡ ಕೆಲ ಹಣವನ್ನು ಯುಪಿಐ ಮೂಲಕ ರವಾನೆಮಾಡಿದ್ದಾಗಿ ತಿಳಿದು ಬಂದಿದೆ.
ಈತನ ಸಂಶಯಾತ್ಮಕ ವರ್ತನೆ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಈ ಜಾಫರ್ನನ್ನು ಈಗ ವಶಕ್ಕೆ ಪಡೆದಿದ್ದಾರೆ.
ತನಿಖೆ ನಡೆಯುತ್ತಿದೆ!
ಈ ಜಾಫರ್ನನ್ನು ಬಂಧಿಸಿದ ನಂತರ ಮಾಹಿತಿ ಹಂಚಿಕೊಂಡಿರುವ ಎಟಿಎಸ್ ಅಧಿಕಾರಿಗಳು ಮೊಹಮ್ಮದ್ ಜಾಫರ್ನನ್ನು ಯುಎಪಿಎ ಕಾಯ್ಕೆಯಡಿಯಲ್ಲಿ ಬಂಧಿಸಲಾಗಿದ್ದು, ಇವನು ಪಾಕಿಸ್ತಾನದವರ ಸಂಪರ್ಕಕ್ಕೆ ಹೇಗೆ ಬಂದ? ಇಲ್ಲಿವರೆಗೆ ಎಷ್ಟು ಹಣವನ್ನು ಶತ್ರುದೇಶಕ್ಕೆ ಕಳುಹಿಸಿದ್ದಾನೆ? ಎಂಬೆಲ್ಲಾ ಸಂಗತಿಗಳನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್).