Nitish Kumar Hijab Row | ಸರ್ಕಾರಿ ಸಮಾರಂಭವೊಂದರಲ್ಲಿ ಯುವ ವೈದ್ಯೆಯ ಹಿಜಾಬ್​ ಎಳೆದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್  
ದೇಶ

ಅವಮಾನಕ್ಕೆ ಬೇಸತ್ತು ಕೆಲಸವನ್ನೇ ಧಿಕ್ಕರಿಸಿದಳಾ ವೈದ್ಯೆ..? ಹಿಜಾಬ್ ವಿವಾದದ ಸಂತ್ರಸ್ತೆ ಡ್ಯೂಟಿ ಸೇರೋದು ಡೌಟ್ | Nitish Kumar Hijab Row

ಪಟನಾ: ಬಿಹಾರದಲ್ಲಿ ನಡೆದ ಸರ್ಕಾರಿ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಯುವ ವೈದ್ಯೆಯ ಹಿಜಾಬ್​ ತೆಗೆದ ಪ್ರಕರಣ ಮುಂದುವರೆದಿದ್ದು, ಈ ಘಟನೆಯ ಬಳಿಕ ಸಂತ್ರಸ್ತೆ, ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಹಿನ್ನಲೆಯಲ್ಲಿ ಆ ಯುವತಿಗೆ ಗಡುವು ನೀಡಿದ್ದು, ಅದು ಇಂದು (ಡಿ.31-ಬುಧವಾರ) ಅಂತ್ಯವಾಗುತ್ತಿದೆ.
ಇತ್ತಿಚೆಗೆ ಪಟನಾದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಪರ್ವೀನ್​ರ ಹಿಜಾಬ್​ ತೆಗೆದಿದ್ದರು. ಈ ಘಟನೆಯಿಂದ ಘಾಸಿಗೊಂಡಿದ್ದ ಯುವತಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದರು, ಸದ್ಯ ಆ ಯುವತಿ ತನ್ನ ಹುದ್ದೆಗೆ ಸೇರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಅಂತಿಮ ದಿನವಾದ ಇಂದು ಕೂಡ ಆಕೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ತಮ್ಮ ನೇಮಕಾತಿಯನ್ನು ಕಳೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಪರ್ವೀನ್ ಮತ್ತು ಅವರ ಕುಟುಂಬ ಸದಸ್ಯರಿಂದ ಈ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಿಜಾಬ್ ಘಟನೆಯ ಬಳಿಕ ಪರ್ವೀನ್ ಮತ್ತು ಆಕೆಯ ಕುಟುಂಬ ಪಾಟ್ನಾದಿಂದ ಕೋಲ್ಕತ್ತಾಗೆ ಸ್ಥಳಾಂತರಗೊಂಡಿದ್ದಾರೆ, ಹೊರಗೆ ಹೋಗುವುದಕ್ಕೆ, ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೆ ಅವರ ಪತಿ ನಿರ್ಬಂಧ ಹೇರಿದ್ದಾರೆ ಎಂದು ವರದಿಯಾಗಿದೆ.
ವೈದ್ಯೆ ಪರ್ವೀನ್ ಪಾಟ್ನಾ, ಸದರ್‌ನ ಸಬಲ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರುವ ನಿರೀಕ್ಷೆಯಿತ್ತು. ಪಿಎಚ್‌ಸಿಯಲ್ಲಿ ( ಪ್ರಾಥಮಿಕ ಆರೋಗ್ಯ ಕೇಂದ್ರ) ನಿಯೋಜಿತ ಶಸ್ತ್ರಚಿಕಿತ್ಸಕ ವಿಜಯ್ ಕುಮಾರ್ ಇನ್ನೂ ವರದಿ ಮಾಡಿಲ್ಲ ಎಂದು ದೃಢಪಡಿಸಿದ್ದು, ಅಭ್ಯರ್ಥಿಗಳು ತಮ್ಮ ನಿಯೋಜಿತ ಕೇಂದ್ರಗಳಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ಸಿವಿಲ್ ಸರ್ಜನ್ ಕಚೇರಿಗೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನಲೆ..

ತಮ್ಮ ಸಚಿವಾಲಯದಲ್ಲಿ ನಡೆದ ಸಂವಾದ್ ಎಂಬ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಮುಖ ಗಂಟಿಕ್ಕಿ ಇದು ಏನು? ಎಂದು ಉದ್ಗರಿಸುತ್ತಾ ಯುವತಿಯ ಹಿಜಾಬ್ ಕೆಳಗೆ ಎಳೆದರು. ಸಿಎಂ ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಅವರ ತೋಳನ್ನು ಎಳೆದು ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಈ ಕಾರ್ಯಕ್ರಮದಲ್ಲಿ 1,000 ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು.
ಕುಟುಂಬವು ಕೋಲ್ಕತ್ತಾಗೆ ಸ್ಥಳಾಂತರಗೊಂಡಿದೆ ಎಂಬ ವರದಿಗಳನ್ನು ಸರ್ಕಾರಿ ಟಿಬ್ಬಿ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಮಹ್ಫೂಜುರ್ ರೆಹಮಾನ್ ತಿರಸ್ಕರಿಸಿದ್ದು, ಇದನ್ನು ಪರ್ವೀನ್ ಪತಿ ಹೇಳಿದ್ದಾಗಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ಕುಟುಂಬ ಮುಖ್ಯಮಂತ್ರಿ ಮತ್ತು ಸರ್ಕಾರದ ಮೇಲೆ ಕೋಪಗೊಂಡಿಲ್ಲ, ಆದರೆ ಮಾಧ್ಯಮಗಳಿಂದ ಸೃಷ್ಟಿಯಾಗಿರುವ ಗಲಾಟೆಯಿಂದ ನಿರಾಶೆಗೊಂಡಿದೆ ಎಂದು ತಿಳಿಸಿದರು(ಏಜೆನ್ಸೀಸ್​).