ಕೃತಿ ಜಾಹೀರಾತಿಗೆ ಕಂಗನಾ ಕಿಡಿ
- ನಟಿ ಕೃತಿ ಸನೊನ್ ರಕ್ಷಾಬಂಧನ ಜಾಹೀರಾತು ವಿವಾದ
- ನೀವು ಬಿಕಿನಿ, ಒಳ ಉಡುಪಿನಲ್ಲಿ ನಿಮ್ಮ ಸಹೋದರನಿಗೆ ರಾಖಿ ಕಟ್ಟುತ್ತೀರಾ
- ಕೃತಿ ಜಾಹೀರಾತಿಗೆ ಕಂಗನಾ ಕಿಡಿ
- ಅಸಹ್ಯ ಮಾಡಬೇಕೆಂದೇ ಮಾಡಿದ್ದಾರೆಂದು ಸಂಸದೆ ಆರೋಪ
ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಹಬ್ಬವೆಂದೇ ಖ್ಯಾತವಾಗಿರುವ ರಕ್ಷಾಬಂಧನ ಹಬ್ಬವನ್ನು ದೇಶದಾದ್ಯಂತ ಅತ್ಯಂತ ಪ್ರೀತಿ-ಸೌಹಾರ್ದಯುತವಾಗಿ ಆಚರಿಸಲಾಗುತ್ತದೆ.
ಸಹೋದರ/ರಿ ಯರ ಜೊತೆಗೆ ಪ್ರೀತಿ, ವಾತ್ಸಲ್ಯ, ಮಮಕಾರದ ಜೊತೆಗೆ ಯಾವುದೇ ಸಂದರ್ಭದಲ್ಲಿ ನಿನ್ನ ರಕ್ಷಣೆಗೆ ನಿಲ್ಲುವೆನು ಎನ್ನುವುದೇ ಈ ಹಬ್ಬದ ಮೂಲವಾಗಿದೆ.
ಆದರೆ, ಈ ಭಾರಿ ರಕ್ಷಾ ಬಂಧನಕ್ಕೆ ಸಂಬಂಧಿದಂತೆ ಬಿಡುಗಡೆ ಮಾಡಿರುವ ಜಾಹೀರಾತೊಂದು ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್ ನಟಿ ಕೃತಿ ಸನೊನ್ ಕಾಣಿಸಿಕೊಂಡಿರುವ ಈ ಜಾಹೀರಾತಿಯಲ್ಲಿ ನಟಿ ಬಿಕಿನಿ ತೊಟ್ಟು, ರಾಖಿ ಕಟ್ಟಿರುವುದು ಜನರ ಕೋಪಕ್ಕೆ ಕಾರಣವಾಗಿದೆ.
ಈಗ ಈ ಜಾಹೀರಾತಿಗೆ, ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆಯಾಗಿರುವ ಕಂಗನಾ ರಣಾವತ್ ಖಡಕ್ (Kangana Ranaut on Kriti Sanon Raksha Bandhan Ad) ಕೌಂಟರ್ ಕೊಟ್ಟಿದ್ದಾರೆ.
ಬೇಕಂತಲೇ ಮಾಡಿದ್ದಾರೆ!
ಈ ವಿವಾದಾತ್ಮಕ ರಕ್ಷಾ ಬಂಧನದ ಜಾಹೀರಾತಿಗೆ ಪ್ರತಿಕ್ರಿಯಿಸಿರುವ ಕಂಗನಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃತಿ ಸನೊನ್ ಹೆಸರನ್ನು ಉಲ್ಲೇಖಿಸದೆ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವು ಹೆಣ್ಣಾಗಿ ಹುಟ್ಟಿರುವುದಕ್ಕೆ ಬಹಳ ಹೆಮ್ಮೆ ಪಡೆಬೇಕು, ಏಕೆಂದರೆ ನಾವು ಧರಿಸುವ ಬಟ್ಟೆಗಳಲ್ಲಿ ಬಹಳಷ್ಟು ವಿಧಗಳಿವೆ. ಒಂದೊಂದು ಕಾರ್ಯಕ್ರಮಕ್ಕೂ ಒಂದೊಂದು ಬಗೆಯ ಉಡುಪನ್ನು ಧರಿಸಲು ನಮಗೆ ಅವಕಾಶವಿದೆ. ಈ ಕಾಲಮಾನದ ಮಹಿಳೆ ಜಾಗತಿಕ ಮಹಿಳೆಯಾಗಿದ್ದಾಳೆ.
ಕಾಕ್ಟೇಲ್ ಬಟ್ಟೆಯಿಂದ ಹಿಡಿದು, ಲೆಹಂಗಾ, ಚೋಲಿ, ಜೀನ್ಸ್, ಬಿಕಿನಿ, ಸಾರಿ ಸಲ್ವಾರ್ ಕಮೀಜ್ ಇಷ್ಟೆಲ್ಲಾ ಆಯ್ಕೆಗಳಿದ್ದರೂ ನೀವು ಬಿಕಿನಿ ಅಥವಾ ಒಳಉಡುಪನ್ನು ಧರಿಸಿ, ನಿಮ್ಮ ಸಹೋದರನಿಗೆ ಏಕೆ ರಾಖಿ ಕಟ್ಟುತ್ತೀರಿ? ನಿಮ್ಮ ವಸ್ತ್ರದ ಆಯ್ಕೆಗಳು ಎಲ್ಲಿಗೆ ಹೋಗಿವೆ? ನನಗಂತೂ ಈ ಜಾಹೀರಾತೂ ಬೇಕಂತಲೇ ಕೆಟ್ಟದಾಗಿ, ಅಸಹ್ಯವಾಗಿರಲೆಂದೇ ಮಾಡಿದಂತಿದೆ ಎಂದು ಬರೆದುಕೊಂಡಿದ್ದಾರೆ.
ಈ ಬಿಕಿನಿ ರಾಖಿ ವಿವಾದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಆದರೆ, ಇದರ ಬಗ್ಗೆ ನಟಿ ಕೃತಿ ಸನೊನ್ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹೀಗೆ ಒಂದು ಧರ್ಮದ ಆಚರಣೆಯನ್ನು ಅವಹೇಳನ ಅಥವಾ ಅಸಹ್ಯ ಪಡುವಂತೆ ಚಿತ್ರಿಸಿರುವುದು ನೆಟ್ಟಿಗರ ನೆತ್ತಿ ಬಿಸಿ ಮಾಡಿರುವುದಂತೂ ನಿಜವಾಗಿದೆ, (ಏಜನ್ಸೀಸ್).