ದೇವರಿಗೆ ಮುಡಿಕೊಡುವ ಪ್ರವೃತ್ತಿ ಶುರುವಾಗಿದ್ದು ಹೇಗೆ ಗೊತ್ತಾ? ತಿಮ್ಮಪ್ಪನಿಗೆ ನೀವು ಅರ್ಪಿಸೋ ಕೂದಲಿಗಿದೆ ಸಖತ್​ ಡಿಮಾಂಡ್​ | Hair Offering 
ದೇಶ

ದೇವರಿಗೆ ಮುಡಿಕೊಡುವ ಪ್ರವೃತ್ತಿ ಶುರುವಾಗಿದ್ದು ಹೇಗೆ ಗೊತ್ತಾ? ತಿಮ್ಮಪ್ಪನಿಗೆ ನೀವು ಅರ್ಪಿಸೋ ಕೂದಲಿಗಿದೆ ಸಖತ್​ ಡಿಮಾಂಡ್​ | Hair Offering

Hair Offering: ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತಾಧಿಗಳು ಹರಿದುಬರುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಲಿ, ಕುಟುಂಬಕ್ಕೆ ಸುಖ-ಶಾಂತಿ ಸಿಗಲಿ ಎಂಬ ನಂಬಿಕೆಯಿಂದ ಭಕ್ತರು ತಮ್ಮ ತಲೆಕೂದಲನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿಕೊಂಡಿರುತ್ತಾರೆ. ಅದು ಈಡೇರಿದಾಗ ಅಥವಾ ತಮಗೆ ಅನಿಸಿದಾಗ ಮುಡಿ ಕೊಡುತ್ತಾರೆ. ಅಸಲಿಗೆ, ಈ ಪ್ರವೃತ್ತಿ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಶುರುವಾಗಿದ್ದೇ ಅಥವಾ ಬೇರೆಯೇ ಕಥೆ ಏನಾದರೂ ಇದೆಯಾ ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ಇಂಟ್ರೆಸ್ಟಿಂಗ್​​ ಸ್ಟೋರಿ.

ತಿರುಪತಿಯಲ್ಲಿ ಕೂದಲು ಹರಕೆ ನೀಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ, ಭಕ್ತರು ಅರ್ಪಿಸುವ ಈ ಕೂದಲು ಕೊನೆಗೆ ಎಲ್ಲಿಗೆ ಹೋಗುತ್ತದೆ? ದೇವಸ್ಥಾನದ ಆಡಳಿತ ಮಂಡಳಿ ಅದನ್ನು ಏನು ಮಾಡುತ್ತೆ? ಈ ಕೂದಲಿನಿಂದ ದೇವಸ್ಥಾನಕ್ಕೆ ಹೇಗೆ ಆದಾಯ ಬರುತ್ತೆ? ಮತ್ತು ಇದರ ಹಿಂದಿರುವ ಪುರಾತನ ಉಲ್ಲೇಖ ಏನು ಎಂಬುದರ ಕುತೂಹಲಕಾರಿ ಮಾಹಿತಿ ಹೀಗಿದೆ ನೋಡಿ.

ಕೂದಲು ಅರ್ಪಿಸುವ ಸಂಪ್ರದಾಯದ ಹಿಂದಿನ ನಂಬಿಕೆಯೇನು?

ತಿರುಪತಿಯಲ್ಲಿ ಮುಡಿ ಕೊಟ್ಟು ದೇವರಿಗೆ ಅರ್ಪಿಸುವುದು ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ಭಕ್ತಿ, ಕೃತಜ್ಞತೆ ಮತ್ತು ದೇವರಿಗೆ ಸಂಪೂರ್ಣ ಶರಣಾಗತಿಯ ಸಂಕೇತ ಎಂದು ಭಕ್ತರು ನಂಬಿದ್ದಾರೆ. ತಮ್ಮ ಇಷ್ಟಾರ್ಥಗಳು ಈಡೇರಿದಾಗ, ಕುಟುಂಬದ ಒಳಿತಿಗಾಗಿ, ಸಂತಾನ ಭಾಗ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಅನೇಕರು ಕೂದಲನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ.

ಕೂದಲು ಅರ್ಪಿಸುವುದರ ಹಿಂದಿದೆ ಪೌರಾಣಿಕ ಕಥೆ

ಮನುಷ್ಯನ ಸೌಂದರ್ಯ ಮತ್ತು ಹೆಮ್ಮೆಯ ಪ್ರತೀಕವೆಂದೇ ಪರಿಗಣಿಸುವ ಕೂದಲನ್ನು ದೇವರಿಗೆ ಸಮರ್ಪಿಸುವ ಮೂಲಕ ಅಹಂಕಾರ ಮತ್ತು ಮೋಹವನ್ನು ತ್ಯಜಿಸಿದಂತಾಗುತ್ತದೆ ಎಂಬುದು ಈ ಸಂಪ್ರದಾಯದ ಹಿಂದಿನ ನಂಬಿಕೆ. ತಿರುಪತಿಯಲ್ಲಿ ಕೂದಲು ಅರ್ಪಿಸುವ ಸಂಪ್ರದಾಯದ ಹಿಂದೆ ಒಂದು ಆಸಕ್ತಿದಾಯಕ ಪೌರಾಣಿಕ ಕಥೆಯಿದೆ. ಮಾಹಿತಿ ಪ್ರಕಾರ, ಒಮ್ಮೆ ಶ್ರೀನಿವಾಸನ ತಲೆಗೆ ಗಾಯವಾಗಿ ಒಂದು ಭಾಗದ ಕೂದಲು ಉದುರಿ ಹೋಗಿತ್ತಂತೆ.

ಇದನ್ನು ಗಮನಿಸಿದ ನೀಲಾದೇವಿ ಎಂಬ ಗಂಧರ್ವ ಕನ್ಯೆ ತನ್ನ ಸುಂದರವಾದ ಕೂದಲಿನ ಒಂದು ಭಾಗವನ್ನು ಕತ್ತರಿಸಿ ಶ್ರೀನಿವಾಸನಿಗೆ ಅರ್ಪಿಸಿದಳು. ಆಕೆಯ ತ್ಯಾಗದಿಂದ ಸಂತುಷ್ಟರಾದ ಭಗವಂತ, ಅದನ್ನು ಸ್ವೀಕರಿಸಿದರೆಂಬ ನಂಬಿಕೆಯಿದೆ. ಅಂದಿನಿಂದ ಭಕ್ತರು ದೇವರಿಗೆ ಕೂದಲನ್ನು ಅರ್ಪಿಸುವ ಸಂಪ್ರದಾಯ ಆರಂಭವಾಯಿತು ಎಂಬುದು ಪೌರಾಣಿಕ ಕಥೆಯ ಸಾರ.

ಭಕ್ತರು ಅರ್ಪಿಸುವ ಕೂದಲಿಗೆ ಸಖತ್ ಡಿಮಾಂಡ್​

ತಿರುಪತಿಯಲ್ಲಿ ಭಕ್ತರು ಅರ್ಪಿಸುವ ಸಾವಿರಾರು ಕೆಜಿ ಕೂದಲು ಕಸಕ್ಕೆ ಹೋಗಲ್ಲ. ತಿರುಮಲ ತಿರುಪತಿ ದೇವಸ್ಥಾನಗಳ ಆಡಳಿತ ಮಂಡಳಿ (TTD) ಈ ಕೂದಲನ್ನು ಸಂಗ್ರಹಿಸುತ್ತದೆ. ನಂತರ, ಕೂದಲಿನ ಉದ್ದ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ಕೂದಲನ್ನು ಟಿಟಿಡಿ ಹರಾಜಿನ ಮೂಲಕ ಮಾರಾಟ ಮಾಡುತ್ತದೆ.

ಈ ಕೂದಲಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಖತ್​ ಬೇಡಿಕೆಯಿದೆ. ವಿಶೇಷವಾಗಿ ವಿಗ್‌ಗಳು (ಕೃತಕ ಕೂದಲು) ಮತ್ತು ಹೇರ್‌ ಎಕ್ಸ್‌ಟೆನ್ಷನ್‌ಗಳ ತಯಾರಿಕೆಯಲ್ಲಿ ನೈಸರ್ಗಿಕ ಕೂದಲನ್ನು ಬಳಸಲಾಗುತ್ತದೆ ಎಂದು ವಿವರಿಸಲಾಗಿದೆ.

ಕೂದಲಿನ ಮಾರಾಟ ದೇವಸ್ಥಾನಕ್ಕೆ ಆದಾಯ

ಭಕ್ತರು ಅರ್ಪಿಸುವ ಕೂದಲನ್ನು ಹರಾಜು ಹಾಕುವ ಮೂಲಕ ಟಿಟಿಡಿಗೆ ಉತ್ತಮ ಆದಾಯ ಲಭಿಸುತ್ತದೆ. ಈ ಹಣವನ್ನು ದೇವಸ್ಥಾನದ ವಿವಿಧ ಧಾರ್ಮಿಕ ಸೇವೆಗಳು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಮೂಲ ವರದಿಯಲ್ಲಿ ತಿಳಿಸಲಾಗಿದೆ. ತಿರುಪತಿಯಲ್ಲಿ ಕೂದಲು ಅರ್ಪಿಸುವುದು ಭಕ್ತರ ಪಾಲಿಗೆ ಕೇವಲ ಹರಕೆಯಲ್ಲ. ಅದು ದೇವರ ಮೇಲಿನ ನಂಬಿಕೆ, ಇಷ್ಟಾರ್ಥ ಈಡೇರಿದ ಕೃತಜ್ಞತೆ ಮತ್ತು ಅಹಂಕಾರವನ್ನು ತ್ಯಜಿಸುವ ಸಂಕೇತವಾಗಿದೆ. ಮತ್ತೊಂದೆಡೆ, ಭಕ್ತರು ಅರ್ಪಿಸುವ ಕೂದಲು ಹರಾಜಿನ ಮೂಲಕ ಮೌಲ್ಯ ಪಡೆದು ದೇವಸ್ಥಾನದ ಆದಾಯದ ಮೂಲವಾಗಿರುವುದು ಇನ್ನೊಂದು ವಿಶೇಷ,(ಏಜೆನ್ಸೀಸ್).