ಜೀವಂತ ಹಾವು, ಬೆಕ್ಕು... ಮನುಷ್ಯನನ್ನೇ ನುಂಗಲು ಹೋಗಿದ್ದ ಈತನ ವಿಚಿತ್ರ ಹಸಿವಿನ ಬಗ್ಗೆ ಕೇಳಿದ್ರೆ ಬೆಕ್ಕಸ ಬೆರಗಾಗ್ತೀರಾ | Tarrare

Tarrare
ಜೀವಂತ ಹಾವು, ಬೆಕ್ಕು... ಮನುಷ್ಯನನ್ನೇ ನುಂಗಲು ಹೋಗಿದ್ದ ಈತನ ವಿಚಿತ್ರ ಹಸಿವಿನ ಬಗ್ಗೆ ಕೇಳಿದ್ರೆ ಬೆಕ್ಕಸ ಬೆರಗಾಗ್ತೀರಾ | Tarrare
Published on: 

Tarrare: 18ನೇ ಶತಮಾನದಲ್ಲಿ ಒಂದೇ ಹೊತ್ತಿಗೆ ಎತ್ತಿನ ದೇಹದ ಕಾಲುಭಾಗವನ್ನೇ ತಿನ್ನುತ್ತಿದ್ದ ಈತ, ಕಲ್ಲು, ಮಣ್ಣು, ಜೀವಂತ ಹಾವು, ಬೆಕ್ಕು, ನಾಯಿ, ಹಲ್ಲಿಗಳನ್ನೂ ಬಿಡುತ್ತಿರಲಿಲ್ಲ. ಆ ಪಾಟಿ ವಿಪರೀತ ಹಸಿವನ್ನು ಹೊಂದಿದ್ದ ಈ ವಿಚಿತ್ರ ವ್ಯಕ್ತಿಯ ಬದುಕಿನ ಶೈಲಿ ಬಗ್ಗೆ ಕೇಳಿದ್ರೆ ನಿಜಕ್ಕೂ ಒಂದು ನಿಮಿಷ ನೀವು ಬೆಕ್ಕಸ ಬೆರಗಾಗೋದು ಖಚಿತ.

ಹಸಿವು ಅನ್ನೋದು ಪ್ರತಿಯೊಬ್ಬರಲ್ಲೂ ಕಾಡುವ ಸಹಜವಾದ ಅನುಭವ ಬಿಡಿ. ಅದರಲ್ಲಿ, ಎರಡನೇ ಪ್ರಶ್ನೆಯೇ ಇಲ್ಲ. ಹೊಟ್ಟೆ ಹಸಿದಾಗ, ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಕೆಲವರಿಗಿದ್ದರೆ. ಇನ್ನೂ ಕೆಲವರಿಗೆ ತಾಳಲು ಸಾಧ್ಯವೇ ಇಲ್ಲ ಎನ್ನುವ ಅನುಭವ ಕಾಡುತ್ತದೆ. ಇನ್ನೂ ಕೆಲವರಿಗೆ ಸ್ವಲ್ಪ ತಿಂದರೆ ಸಾಕು ಹೊಟ್ಟೆ ತುಂಬಿತು ಎಂದನಿಸುತ್ತೆ. ಆದರೆ, ಅಪರೂಪದಲ್ಲೇ ಅಪರೂಪದ ಮಂದಿಗೆ ಮಾತ್ರ ಹೊಟ್ಟೆ ಹಸಿವು ಎಷ್ಟೇ ತಿಂದರೂ ತೃಪ್ತಿಯಾಗೋದಿಲ್ಲ. ಅಂಥವರನ್ನೂ ಮೀರಿಸೋ ಈತ ಮೊದಲಿಗ ಹಾಗೂ ಕೊನೇ ಎಂದರೆ ಖಂಡಿತ ತಪ್ಪಾಗಲಾರದು.

ಎಷ್ಟೇ ತಿಂದರೂ ಹಸಿವು ಮಾತ್ರ ಇಂಗದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಹೊಟ್ಟೆ ತುಂಬುವ ಬದಲು ಮತ್ತಷ್ಟು ಆಹಾರ ಬೇಕೆಂದು ಹಂಬಲಿಸುತ್ತಿದ್ದ, ವಿಚಿತ್ರ ಆಹಾರ ಪದ್ಧತಿಯಿಂದಲೇ ಜಗತ್ತಿನ ಗಮನ ಸೆಳೆದಿದ್ದ ವ್ಯಕ್ತಿಯೊಬ್ಬ 18ನೇ ಶತಮಾನದ ಫ್ರಾನ್ಸ್‌ನಲ್ಲಿ ಬದುಕಿದ್ದ. ಆತನ ಹೆಸರೇ ತಾರಾರ್‌ (Tarare). ಈತನ ಜೀವನ ಅಂದಿನ ವೈದ್ಯಕೀಯ ಜಗತ್ತಿಗೆ ದೊಡ್ಡ ಸವಾಲಾಗಿ, ಬೇಧಿಸಲಾಗದ ಪರಿಸ್ಥಿತಿಯಾಗಿ ಕಾಡಿತ್ತು ಎಂಬುದೇ ರೋಚಕ.

ಯಾರು ಈ ತಾರಾರ್‌?

ತಾರಾರ್‌ 1772ರಲ್ಲಿ ಫ್ರಾನ್ಸ್‌ನ ಒಂದು ಹಳ್ಳಿಯಲ್ಲಿ ಜನಿಸಿದ್ದ. ಇದು ಆತನ ನಿಜವಾದ ಹೆಸರೇ ಅಥವಾ ಜನರು ಇಟ್ಟ ಅಡ್ಡಹೆಸರೇ ಎಂಬುದರ ಬಗ್ಗೆ ಸ್ಪಷ್ಟವಿಲ್ಲ. ಬಾಲ್ಯದಿಂದಲೇ ಆತನಿಗೆ ವಿಪರೀತ ಹಸಿವು ಇರುತ್ತಿತ್ತು ಎನ್ನಲಾಗಿದೆ. ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚು ಆಹಾರ ಸೇವಿಸುತ್ತಿದ್ದ ಆತ, ಹದಿಹರೆಯಕ್ಕೆ ಕಾಲಿಡುವಷ್ಟರಲ್ಲಿ ಒಂದೇ ಹೊತ್ತಿನಲ್ಲಿ ಎತ್ತಿನ ಕಾಲುಭಾಗದಷ್ಟು ಮಾಂಸವನ್ನು ತಿನ್ನಬಲ್ಲವನಾಗಿದ್ದ ಎಂದು ಹಲವು ದಾಖಲೆಗಳು ಉಲ್ಲೇಖಿಸಿವೆ.

Also Read
ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಸಾವು ಗೆದ್ದು ವಿಧಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ ಈಕೆ | Violet Jessop
Tarrare

ಈತನ ವಿಚಿತ್ರ ಹಸಿವು ಹೇಗಿರುತ್ತಿತ್ತು ಎಂದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗ್ತಿತ್ತು. ತಾರಾರ್​ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಇದಕ್ಕೆ ತಕ್ಕಂತೆ ಇರಲಿಲ್ಲ. ಅವನ ಆಹಾರದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೆ ಕುಟುಂಬದವರು ಆತನನ್ನು ಮನೆಯಿಂದ ಹೊರಹಾಕಿದರು. ಅಂದಿನಿಂದ ಈ ವ್ಯಕ್ತಿಗೆ ಊಟದ ಪದ್ಧತಿ ಸಂಪೂರ್ಣವಾಗಿ ಬದಲಾಗಿ ಹೋಯಿತು. ಮನುಷ್ಯರು ತಿನ್ನುವ ಆಹಾರ ತಿನ್ನುತ್ತಿದ್ದವನು, ಜೀವಂತ ಬೆಕ್ಕು, ನಾಯಿ, ಹಾವುಗಳನ್ನು ಹಸಿವಿನ ಭರದಲ್ಲಿ ನುಂಗುತ್ತಿದ್ದ ಎನ್ನಲಾಗಿದೆ. ಅದುವೇ, ಇದ್ಯಾವುದನ್ನು ಆತ ಕಚ್ಚಿ ಸೇವಿಸುತ್ತಿರಲಿಲ್ಲ!

ಬೀದಿ ಪ್ರದರ್ಶನಗಳೇ ಜೀವನಾಧಾರ

ಮನೆಯಿಂದ ಹೊರಬಂದ ಬಳಿಕ ತಾರಾರ್‌ ಆಹಾರಕ್ಕಾಗಿ ಅಲೆದಾಡಬೇಕಾಯಿತು. ಸಿಕ್ಕಿದ್ದನ್ನೆಲ್ಲ ತಿನ್ನಲು ಪ್ರಯತ್ನಿಸುತ್ತಿದ್ದ. ಕೊನೆಗೆ ಬೀದಿ ಸರ್ಕಸ್‌ ಪ್ರದರ್ಶನಗಳ ಭಾಗವಾದ. ಕಲ್ಲುಗಳು, ಹಾವುಗಳು ಮತ್ತು ಜೀವಂತ ಪ್ರಾಣಿಗಳನ್ನು ನುಂಗುವಂತಹ ಅಸಾಮಾನ್ಯ ಪ್ರದರ್ಶನಗಳನ್ನು ನೀಡುತ್ತಿದ್ದ. ಇದನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು ಎನ್ನಲಾಗಿದೆ.

ಆಹಾರ ಸಿಗದಿದ್ದಾಗ ಆತನ ವರ್ತನೆ ಮತ್ತಷ್ಟು ವಿಚಿತ್ರವಾಗುತ್ತಿತ್ತು. ಪ್ರಾಣಿಗಳನ್ನೂ ಜೀವಂತ ಸ್ಥಿತಿಯಲ್ಲೇ ತಿನ್ನುತ್ತಿದ್ದ ಎಂದು ಸಾಕಷ್ಟು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ಅಸಾಮಾನ್ಯ ಆಹಾರ ಪದ್ಧತಿಯಿಂದಾಗಿ ಜನರು ಆತನನ್ನು ಸಾಮಾನ್ಯ ಮನುಷ್ಯನಂತೆ ನೋಡದೆ ಅಚ್ಚರಿಯಿಂದ ಗಮನಿಸುತ್ತಿದ್ದರು ಎಂದೂ ವಿವರಿಸಲಾಗಿದೆ.

ಆತನ ದೇಹದಲ್ಲೂ ವಿಚಿತ್ರ ಬದಲಾವಣೆ

ತಾರಾರ್‌ನ ದೇಹದ ರಚನೆಯೂ ಸಾಮಾನ್ಯ ವ್ಯಕ್ತಿಗಳಿಗಿಂತ ಭಿನ್ನವಾಗಿತ್ತು. ಊಟ ಮಾಡುವ ಮೊದಲು ಆತನ ಹೊಟ್ಟೆಯ ಚರ್ಮ ಸಡಿಲವಾಗಿ ನೇತಾಡುತ್ತಿತ್ತು. ಆದರೆ, ಅದೇ ಆಹಾರ ತಿಂದ ಬಳಿಕ ಹೊಟ್ಟೆ ದೊಡ್ಡದಾಗಿ ಉಬ್ಬಿಕೊಳ್ಳುತ್ತಿತ್ತು. ತನ್ನ ಬಾಯಿಯನ್ನು ಅಸಹಜವಾಗಿ ಅಗಲವಾಗಿ ತೆರೆಯುವ ಸಾಮರ್ಥ್ಯವೂ ಆತನಿಗಿತ್ತು. ಅಂದರೆ, ಹಾವುಗಳು ನುಂಗುವಾಗ ಎಷ್ಟು ದೊಡ್ಡದಾಗುತ್ತೋ, ಆ ರೀತಿ ಎಂದು ದಾಖಲೆಗಳು ವಿವರಿಸಿವೆ.

ಸೈನ್ಯಕ್ಕೆ ಸೇರಿದ ಬಳಿಕ ಗೂಢಚರನಾಗಿ ಬಳಕೆ

ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ತಾರಾರ್‌ ಸೈನ್ಯಕ್ಕೆ ಸೇರಿದ್ದ. ಆತನ ಅಸಾಮಾನ್ಯ ಆಹಾರ ಸೇವಿಸುವ ಸಾಮರ್ಥ್ಯವನ್ನು ಗಮನಿಸಿದ ಅಧಿಕಾರಿಗಳು, ಶತ್ರುಗಳ ರಹಸ್ಯ ಮಾಹಿತಿಯನ್ನು ಸಾಗಿಸಲು ಆತನನ್ನು ಬಳಸಿಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.

ಮರದ ಪೆಟ್ಟಿಗೆಯೊಳಗೆ ರಹಸ್ಯ ಸಂದೇಶಗಳನ್ನು ಇರಿಸಿ, ಅದನ್ನು ನುಂಗಿ ಶತ್ರು ಪ್ರದೇಶಕ್ಕೆ ಸಾಗಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಈ ಪ್ರಯತ್ನ ವಿಫಲವಾಯಿತು. ಗೂಢಚರ ಕಾರ್ಯಾಚರಣೆಯ ಸಂದರ್ಭದಲ್ಲಿ ತಾರಾರ್‌ ಸಿಕ್ಕಿಬಿದ್ದಿದ್ದ ಎಂದು ಐತಿಹಾಸಿಕ ವರದಿಗಳು ಹೇಳುತ್ತವೆ. ಇದರಿಂದ ಈ ಪ್ರಯೋಗಕ್ಕೆ ತೆರೆ ಬಿದ್ದಿತು.

Also Read
ಗೆಳೆಯನ ಜೀವ ಉಳಿಸಲು ವಿದ್ಯಾರ್ಥಿಗಳು ಪಡ್ತಿರೋ ಪಾಡು ನೋಡಿದ್ರೆ ಮನಕಲಕುತ್ತೆ! ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ
Tarrare

ಆಸ್ಪತ್ರೆಯಲ್ಲೂ ವಿಚಿತ್ರ ವರ್ತನೆ

ಇದಾದ ಬಳಿಕ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ಪಾಲಾಗಿದ್ದಾಗಲೂ ತಾರಾರ್‌ನ ಆಹಾರದ ಮೇಲಿನ ಹಂಬಲ ಕಡಿಮೆಯಾಗಲಿಲ್ಲ. ಆಸ್ಪತ್ರೆಯಲ್ಲಿ ಸಿಗುವ ಆಹಾರದಿಂದ ಆತನ ಹಸಿವು ತಣಿಯುತ್ತಿರಲಿಲ್ಲ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ, ಆಸ್ಪತ್ರೆಯಲ್ಲಿದ್ದ 14 ತಿಂಗಳ ಮಗು ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ತಾರಾರ್‌ ಮೇಲೆ ಗಂಭೀರ ಆರೋಪಗಳು ಕೇಳಿಬಂದಿತ್ತು. ಆದರೆ, ಈ ಆರೋಪ ಸಾಬೀತಾದ ಬಗ್ಗೆ ಯಾವುದೇ ಸ್ಪಷ್ಟ ದಾಖಲೆಗಳಿಲ್ಲ. ಈ ಘಟನೆಯ ಬಳಿಕ ಆತ ಆಸ್ಪತ್ರೆಯಿಂದ ಪರಾರಿಯಾದ ಎಂದು ಹೇಳಲಾಗಿದೆ.

26ನೇ ವಯಸ್ಸಿಗೆ ಮುಗಿದ ಬದುಕು

ತಾರಾರ್‌ ತನ್ನ 26ನೇ ವಯಸ್ಸಿನಲ್ಲಿ ಕ್ಷಯರೋಗದಿಂದ ಮೃತಪಟ್ಟಿದ್ದ ಎಂದು ವರದಿಗಳು ಹೇಳಿವೆ. ಆತನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೊಟ್ಟೆ ಸಾಮಾನ್ಯಕ್ಕಿಂತ ದೊಡ್ಡದಾಗಿತ್ತು ಮತ್ತು ದೇಹದ ಇತರ ಅಂಗಾಂಗಗಳಲ್ಲಿಯೂ ಅಸಹಜ ಸ್ಥಿತಿಗಳಿದ್ದವು ಎಂದು ದಾಖಲಿಸಿದ್ದಾರೆ. ಬಾಲ್ಯದಿಂದಲೇ ಅತಿಯಾದ ಹಸಿವಿನಿಂದ ಬಳಲುತ್ತಿದ್ದ ತಾರಾರ್‌ನ ಜೀವನ 18ನೇ ಶತಮಾನದ ವೈದ್ಯಕೀಯ ಇತಿಹಾಸದಲ್ಲಿನ ಅತ್ಯಂತ ವಿಚಿತ್ರ ಪ್ರಕರಣಗಳಲ್ಲಿ ಒಂದಾಗಿ ಉಳಿದಿದೆ. ಆತನ ಅತಿಯಾದ ಹಸಿವಿಗೆ ನಿಖರವಾದ ಕಾರಣವೇನು? ದೇಹದಲ್ಲಿ ಇಂತಹ ಬದಲಾವಣೆಗಳು ಏಕೆ ಸಂಭವಿಸಿತು? ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ,(ಏಜೆನ್ಸೀಸ್).