ಗೆಳೆಯನ ಜೀವ ಉಳಿಸಲು ವಿದ್ಯಾರ್ಥಿಗಳು ಪಡ್ತಿರೋ ಪಾಡು ನೋಡಿದ್ರೆ ಮನಕಲಕುತ್ತೆ! ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ

Kollam College Students
ಗೆಳೆಯನ ಜೀವ ಉಳಿಸಲು ವಿದ್ಯಾರ್ಥಿಗಳು ಪಡ್ತಿರೋ ಪಾಡು ನೋಡಿದ್ರೆ ಎಂಥವರ ಮನಕಲಕುತ್ತೆ! ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ
Published on: 

ಕೇರಳ: ಆರು ಇಂಚಿನ ಸ್ಮಾರ್ಟ್​ಫೋನ್​ ಯುಗದಲ್ಲಿ ಯಾರಿಗೂ ತಾಳ್ಮೆಯಿಲ್ಲ, ಅವರಾಯಿತು ಅವರ ಪಾಡಾಯಿತು. ತಮಗೂ ಈ ಸಮಾಜಕ್ಕೂ ಏನು ಸಂಬಂಧವಿಲ್ಲ ಎಂದು ವರ್ತಿಸುವವರೇ ಹೆಚ್ಚಾಗಿರುವ ಈ ಕಾಲದಲ್ಲಿ, ಮಾನವೀಯತೆ, ಮನುಷ್ಯತ್ವ ಸತ್ತು ಹೋಗಿದೆ. ಇದಕ್ಕೆಲ್ಲ ಈಗ ಬೆಲೆಯಿಲ್ಲ ಎನ್ನುವ ಹಲವರಿಗೆ ಇದೊಂದು ಘಟನೆ ನಿಜಕ್ಕೂ ಅದೆಲ್ಲವನ್ನೂ ಒಂದು ನಿಮಿಷ ಸುಳ್ಳಾಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ.

61 ದಿನಗಳಿಂದ ವೆಂಟಿಲೇಟರ್‌

ಗೆಳೆತನ ಅಂದರೆ ಕೇವಲ ಒಟ್ಟಿಗೆ ನಗುವುದು, ಹರಟೆ ಹೊಡೆಯುವುದಷ್ಟೇ ಅಲ್ಲ. ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುವುದು, ಸ್ನೇಹಕ್ಕೆ ಸ್ನೇಹ, ಜೀವಕ್ಕೆ ಜೀವ ಎಂಬುದು ಕೇವಲ ಮಾತಿಗಷ್ಟೇ ಅಲ್ಲ. ನಿಜ ಜೀವನದಲ್ಲೂ ನಾವು ಹಾಗೆಯೇ ಇರೋದು ಎಂಬುದಕ್ಕೆ ಕೇರಳದ ಕೊಲ್ಲಂನ ಕಾಲೇಜು ವಿದ್ಯಾರ್ಥಿಗಳೇ ಜ್ವಲಂತ ಸಾಕ್ಷಿ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಳೆದ 61 ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಗೆಳೆಯನ ಪ್ರಾಣ ಉಳಿಸಲು ಇದೀಗ ಇಡೀ ಕಾಲೇಜಿಗೆ ಕಾಲೇಜೇ ಪಣತೊಟ್ಟಿದೆ.

ಬಿರಿಯಾನಿ ಚಾಲೆಂಜ್​

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕ, ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್​ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯದ ಮಟ್ಟಿಗೆ ಈತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಬದುಕಿಸಲು ಹೆಚ್ಚಿನ ಹಣದ ಅಗತ್ಯವಿದೆ ಎಂದು ಹೇಳಿದ್ದೇ ತಡ, ಆತನ ಗೆಳೆಯರು, ಸಹಪಾಠಿಗಳು, ಶಿಕ್ಷಕರು ಸೇರಿದಂತೆ ಇಡೀ ಕಾಲೇಜು ಮತ್ತು ಪೋಷಕರ ದಂಡೇ ದುಬಾರಿ ಚಿಕಿತ್ಸೆಯ ವೆಚ್ಚ ಭರಿಸಲು ಮುಂದಾಗಿದೆ.

ಕಳೆದ 61 ದಿನಗಳಿಂದ ವೆಂಟಿಲೇಟರ್​ನಲ್ಲೇ ಸಾವು-ಬದುಕಿನ ಮಧ್ಯೆ ಬದುಕಿಗಾಗಿ ಹೋರಾಡುತ್ತಿರುವ ಗೆಳೆಯ ಸಂಜು ಕುಟುಂಬ ಸಂಕಷ್ಟದಲ್ಲಿರುವುದನ್ನು ಕಂಡು, ಸಹಪಾಠಿಗಳು ಮತ್ತು ಉಪನ್ಯಾಸಕರು ಸೇರಿ 'ಬಿರಿಯಾನಿ ಚಾಲೆಂಜ್‌' ಮೂಲಕ ಫಂಡಿಂಗ್ ಶುರು ಮಾಡಿದ್ದಾರೆ. ಚಿಕಿತ್ಸೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಬಿರಿಯಾನಿ ಚಾಲೆಂಜ್‌ ಆಯೋಜಿಸಿದ್ದು, ಬಿರಿಯಾನಿ ಮಾಡಿ, ಮಾರುತ್ತಾ ಹಣ ಸಂಗ್ರಹಿಸಿ, ಅದನ್ನು ಗೆಳೆಯನ ಚಿಕಿತ್ಸೆಗೆ ನೀಡುವುದು ಅವರ ಉದ್ದೇಶ ಎನ್ನಲಾಗಿದೆ.

ಗೆಳೆಯನ ಸಂಕಷ್ಟದಲ್ಲಿ ಕೈಬಿಡದೆ, ಆತನ ಚಿಕಿತ್ಸೆಗೆ ನೆರವಾಗಲು ವಿದ್ಯಾರ್ಥಿಗಳು ತೋರಿರುವ ಈ ಒಗ್ಗಟ್ಟು ಇಡೀ ಕೇರಳಂನ ಮೆಚ್ಚುಗೆ, ಶ್ಲಾಘನೆಗೆ ಪಾತ್ರವಾಗಿದೆ. ಒಬ್ಬ ಸ್ನೇಹಿತನ ಬದುಕಿನಲ್ಲಿ ಮತ್ತೆ ಬೆಳಕು ಮೂಡಲಿ ಎಂಬ ಆಶಯದೊಂದಿಗೆ ಇಡೀ ಕಾಲೇಜು ಕುಟುಂಬ ಒಂದಾಗಿ ನಿಂತಿರುವುದು ಎಂಥವರ ಮನಕಲಕುತ್ತಿದೆ. ಅನೇಕರು ಇದಪ್ಪ ಗೆಳೆತನ, ಒಳ್ಳೆತನ, ಮಾನವೀಯತೆ, ಮನುಷ್ಯತ್ವ ಅಂದ್ರೆ ಎಂದು ವಿದ್ಯಾರ್ಥಿಗಳನ್ನು ಗುಣಗಾನ ಮಾಡುತ್ತಿದ್ದಾರೆ.

Also Read
ದುಪ್ಪಟ್ಟ ಹಾಕ್ತಿದ್ದ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ಮದುವೆ ಹೆಸರಿನಲ್ಲಿ 10ಕ್ಕೂ ಹೆಚ್ಚು ಯುವತಿಯರನ್ನು ಕೊಂದ ಸೀರಿಯಲ್​ ಕಿಲ್ಲರ್​ | Dupatta Killer
Kollam College Students

ಏನದು ಅಪಘಾತ?

ಕೇರಳದ ಕೊಲ್ಲಂ ಜಿಲ್ಲೆಯ ವೆಟ್ಟಿಲತಳಂನ ಡಿಸೆಂಟ್ ಜಂಕ್ಷನ್ ನಿವಾಸಿ ಸಂಜು (18), ಕೊಟ್ಟಿಯಂನ ಡಾನ್ ಬಾಸ್ಕೋ ಕಾಲೇಜಿನಲ್ಲಿ ಪ್ರಥಮ ವರ್ಷದ ಸೈಕಾಲಜಿ ವಿದ್ಯಾರ್ಥಿ. ಎರಡು ತಿಂಗಳ ಹಿಂದೆ ಕಣ್ಣನಲ್ಲೂರು ರಸ್ತೆಯ ಕೊಡಾಲಿ ಮುಕ್ಕು ಬಳಿ ಸಂಜು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿತ್ತು.

ಈ ಅಪಘಾತದಲ್ಲಿ ಸಂಜು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಪಘಾತವಾಗಿ ಎರಡು ತಿಂಗಳು ಕಳೆದಿದರೂ ಸಂಜು ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ. ಕಳೆದ 61 ದಿನಗಳಿಂದ ಅವರು ವೆಂಟಿಲೇಟರ್‌ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಕುಟುಂಬ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದೆ. ಮುಂದಿನ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ,(ಏಜೆನ್ಸೀಸ್).