ದುಪ್ಪಟ್ಟ ಹಾಕ್ತಿದ್ದ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ಮದುವೆ ಹೆಸರಿನಲ್ಲಿ 10ಕ್ಕೂ ಹೆಚ್ಚು ಯುವತಿಯರನ್ನು ಕೊಂದ ಸೀರಿಯಲ್​ ಕಿಲ್ಲರ್​ | Dupatta Killer

Dupatta Killer
ದುಪ್ಪಟ್ಟ ಹಾಕ್ತಿದ್ದ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ಮದುವೆ ಹೆಸರಿನಲ್ಲಿ 15ಕ್ಕೂ ಹೆಚ್ಚು ಯುವತಿಯರನ್ನು ಕೊಂದ ಸೀರಿಯಲ್​ ಕಿಲ್ಲರ್​ | Dupatta Killer
Published on: 

Dupatta Killer: ಗೋವಾ ಎಂದಾಕ್ಷಣ ಹಲವರಿಗೆ ಮೊದಲಿಗೆ ನೆನಪಾಗುವುದೇ ಗೋವಾ ಬೀಚ್​. ಮತ್ತು ಅಲ್ಲಿನ ಸುಂದರ ಪ್ರವಾಸಿ ತಾಣಗಳು, ಕಡಲತೀರಗಳು. ಆದರೆ, ಇದೇ ಗೋವಾದಲ್ಲಿ ಮಹಿಳೆಯರು ಮನೆಯಿಂದ ಹೊರಬರಲು ಹೆದರುತ್ತಿದ್ದ ಒಂದು ಕಾಲವೂ ಇತ್ತು. ಪ್ರೀತಿಯ ಸೋಗಿನಲ್ಲಿ ಸರಣಿ ಕೊಲೆಗೈಯುತ್ತಿದ್ದ ನರಹಂತಕನ ಭಯ ಯಾವ ಮಟ್ಟಿಗಿತ್ತು ಎಂದರೆ, 16 ಕೊಲೆಗಳು ನಡೆದರೂ ಆತನನ್ನು ಅರೆಸ್ಟ್​ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.

ಮದುವೆಯಾಗುವ ಭರವಸೆ ನೀಡಿ ಮಹಿಳೆಯರನ್ನು ವಂಚಿಸಿ, ಅವರ ಆಭರಣಗಳನ್ನು ದೋಚಿ, ನಂತರ ಅವರು ಹಾಕಿಕೊಂಡಿದ್ದ ದುಪ್ಪಟ್ಟದಿಂದಲೇ ಅವರನ್ನು ಸಾಯಿಸುತ್ತಿದ್ದ ಆರೋಪ ಈತನ ಮೇಲಿದೆ. ಸುಮಾರು 15 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಬೀಳದೆ ತನ್ನ ಪಾಪದ ಕೃತ್ಯಗಳನ್ನು ಮುಂದುವರಿಸಿದ್ದ ಈತನ ಹೆಸರು ಮಹಾನಂದ ನಾಯಕ್. ಮಹಿಳೆಯರ ದುಪಟ್ಟಾವನ್ನೇ ಹತ್ಯೆಗೆ ಬಳಸುತ್ತಿದ್ದ ಎಂಬ ಕಾರಣಕ್ಕೆ ಈತನಿಗೆ ‘ದುಪಟ್ಟಾ ಕಿಲ್ಲರ್‌’ ಎಂಬ ಕುಖ್ಯಾತಿಯು ಇದೆ.

ಆಟೋ ಚಾಲಕ ಮಹಾನಂದ

ಗೋವಾದ ಶಿರೋಡಾ ಗ್ರಾಮದ ಮಹಾನಂದ ನಾಯಕ್‌ ವೃತ್ತಿಯಲ್ಲಿ ಓರ್ವ ಆಟೋ ಚಾಲಕನಾಗಿದ್ದ. ಪತ್ನಿ ಮತ್ತು ಇಬ್ಬರು ಮಕ್ಕಳಿದ್ದ ಕುಟುಂಬ ಜೀವನ ನಡೆಸುತ್ತಿದ್ದ ಈತನ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡುವಂತಹ ಯಾವುದೇ ಸಂಗತಿಗಳು ಆರಂಭದಲ್ಲಿ ಸಿಕ್ಕಿರಲಿಲ್ಲ. ಇದೇ, ಈತ 10ಕ್ಕೂ ಹೆಚ್ಚು ಕೊಲೆಗಳನ್ನು ಮಾಡಲು ಕಾರಣವಾಯಿತು ಎಂಬುದು ಮಾತು. ಆದರೆ, ಆತನ ವೈಯಕ್ತಿಕ ಬದುಕಿನ ಹಿಂದೆ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚಿಸುವ ಕ್ರಿಮಿನಲ್‌ ಜಾಲವೊಂದು ಕಾರ್ಯನಿರ್ವಹಿಸುತ್ತಿತ್ತು ಎಂಬುದು ಬೆಳಕಿಗೆ ಬಂದಿದ್ದು ಮಾತ್ರ ತಡವಾಗಿ.

ವರದಿಗಳ ಪ್ರಕಾರ, 1994ರಲ್ಲಿ ಖಂಡೇಪಾರ್‌ ಪ್ರದೇಶದ 30 ವರ್ಷದ ಮಹಿಳೆಯೊಬ್ಬರು ಈತನ ಮೋಸದಾಟಕ್ಕೆ ಬಲಿಯಾದ ಮೊದಲ ಜೀವ. ಬಳಿಕ ಹಲವು ವರ್ಷಗಳ ಕಾಲ ಯಾವುದೇ ಪ್ರಕರಣದಲ್ಲಿ ಈತನ ಹೆಸರು ಮುನ್ನೆಲೆಗೆ ಬಂದಿರಲಿಲ್ಲ. 2004ರ ನಂತರ ಮತ್ತೆ ಮಹಿಳೆಯರನ್ನು ಟಾರ್ಗೆಟ್​ ಮಾಡಿಕೊಂಡು ತನ್ನ ಕೃತ್ಯಗಳನ್ನು ಮುಂದುವರಿಸಿದ್ದ ಎನ್ನಲಾಗಿದೆ.

ಮದುವೆಯ ಆಮಿಷವೊಡ್ಡಿ ವಂಚನೆ

ಮಹಾನಂದ ನಾಯಕ್‌ ತನ್ನ ಬಲೆಗೆ ಬೀಳಿಸಿಕೊಳ್ಳಲು ಬಳಸುತ್ತಿದ್ದ ಅಸ್ತ್ರವೇ ನಂಬಿಕೆ ಗಿಟ್ಟಿಸಿಕೊಳ್ಳುವುದು. ಸಾಮಾನ್ಯ ಕುಟುಂಬಗಳ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಅವರೊಂದಿಗೆ ಪ್ರೇಮ ಬೆಳೆಸಿ, ನಂತರ ಮದುವೆಯಾಗುವ ಭರವಸೆ ನೀಡುತ್ತಿದ್ದ. ಆರ್ಥಿಕವಾಗಿ ಸಹಾಯ ಮಾಡುವುದಾಗಿಯೂ ಹೇಳಿ ವಿಶ್ವಾಸ ಸಂಪಾದಿಸುತ್ತಿದ್ದ ಎಂದು ವಿವರಿಸಲಾಗಿದೆ.

Also Read
ಎಐ ಕಂಟ್ರೋಲ್​ ತಪ್ಪಿದ್ರೆ ಇಡೀ ಮಾನವ ಕುಲವೇ ಸರ್ವನಾಶ? ಮಾಜಿ ಗೂಗಲ್ ವಿಜ್ಞಾನಿ ಸ್ಫೋಟಕ ಹೇಳಿಕೆ | AI Takeover
Dupatta Killer

ಆಟೋ ಚಾಲಕನಾಗಿದ್ದರೂ ತನ್ನನ್ನು ಶ್ರೀಮಂತ ಉದ್ಯಮಿ ಅಥವಾ ಉತ್ತಮ ಉದ್ಯೋಗದಲ್ಲಿರುವ ವ್ಯಕ್ತಿಯಂತೆ ಪರಿಚಯಿಸಿಕೊಳ್ಳುತ್ತಿದ್ದ ಈತ, ಮನೆಗೆಲಸದವರು, ಟೈಲರ್‌ಗಳು ಸೇರಿದಂತೆ ಆರ್ಥಿಕವಾಗಿ ದುರ್ಬಲ ಹಿನ್ನೆಲೆಯುಳ್ಳ 20ರಿಂದ 35 ವರ್ಷದೊಳಗಿನ ಮಹಿಳೆಯರನ್ನೇ ಟಾರ್ಗೆಟ್​ ಮಾಡಿಕೊಳ್ಳುತ್ತಿದ್ದ ಎಂದು ಹಲವು ವರದಿಗಳು ತಿಳಿಸಿವೆ.

ಚಿನ್ನಾಭರಣ ಜತೆಗೆ ಬರುವಂತೆ ಹೇಳುತ್ತಿದ್ದ...

ಮಹಿಳೆಯರ ವಿಶ್ವಾಸ ಗಳಿಸಿದ ಬಳಿಕ ಮದುವೆಯ ಸಿದ್ಧತೆಯ ನೆಪದಲ್ಲಿ ಒಳ್ಳೆಯ ಬಟ್ಟೆ ಹಾಗೂ ಚಿನ್ನಾಭರಣ ಧರಿಸಿಕೊಂಡು ತಾನು ಹೇಳುವ ಸ್ಥಳಕ್ಕೆ ಬರುವಂತೆ ಹೇಳುತ್ತಿದ್ದ. ಆತನ ಮಾತುಗಳನ್ನು ನಂಬಿ ಮಹಿಳೆಯರು ಅಲ್ಲಿಗೆ ಹೋಗುತ್ತಿದ್ದರು. ಬಳಿಕ ಅವರನ್ನು ಹತ್ಯೆಗೈದು, ಅವರ ಬಳಿಯಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚುತ್ತಿದ್ದ ಎಂಬ ಆರೋಪವೂ ಇದೆ.

ಮಹಿಳೆಯರಿಂದ ಕದ್ದ ಆಭರಣಗಳನ್ನು ಸ್ಥಳೀಯ ಚಿನ್ನದ ಅಂಗಡಿಗಳಲ್ಲಿ ಮಾರಿ, ಹಣ ಪಡೆಯುತ್ತಿದ್ದ. ಆಭರಣಗಳನ್ನು ಮಾರಾಟ ಮಾಡುವಾಗ ಕುಟುಂಬದ ಅನಾರೋಗ್ಯದಂತಹ ಕಾರಣಗಳನ್ನು ಹೇಳಿ ಗಿರವಿ ಇರಿಸಿಕೊಳ್ಳುವ ಅಂಗಡಿಯವರಿಗೆ ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದ ಎಂದು ತನಿಖಾ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

15 ವರ್ಷ ಪೊಲೀಸರ ಕಣ್ಣಿಗೆ ಬೀಳಲಿಲ್ಲ

1994ರಿಂದ 2009ರವರೆಗೆ ಈತನ ಕೃತ್ಯಗಳು ಮುಂದುವರಿದಿದ್ದವು ಎಂದು ವರದಿಗಳು ಹೇಳುತ್ತವೆ. ಸಂತ್ರಸ್ತ ಮಹಿಳೆಯರು ಬಡ ಕುಟುಂಬಗಳಿಗೆ ಸೇರಿದವರಾಗಿದ್ದರಿಂದ ಅವರ ನಾಪತ್ತೆ ಪ್ರಕರಣಗಳಿಗೆ ಆರಂಭದಲ್ಲಿ ಹೆಚ್ಚಿನ ಗಮನ ಕೊಡಲಾಗಲಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು. ಕೆಲವು ಪ್ರಕರಣಗಳನ್ನು ಆತ್ಮಹತ್ಯೆ ಅಥವಾ ಮನೆಯಿಂದ ಓಡಿಹೋದ ಘಟನೆಗಳೆಂದು ಪರಿಗಣಿಸಲಾಗಿತ್ತು ಎನ್ನಲಾಗಿದೆ.

ಮಹಾನಂದ ನಾಯಕ್‌ 16ರಿಂದ 18 ಮಹಿಳೆಯರನ್ನು ಹತ್ಯೆ ಮಾಡಿರಬಹುದು ಎಂದು ಕೆಲವು ವರದಿಗಳು ಉಲ್ಲೇಖಿಸಿವೆ. ಎಲ್ಲಿಯೂ, ಇಷ್ಟೇ ಕೊಲೆಯಾಗಿವೆ ಎಂಬ ನಿರ್ದಿಷ್ಟ ಸಂಖ್ಯೆಗಳಿಲ್ಲ. ಆದರೆ, ಈ ಎಲ್ಲ ಪ್ರಕರಣಗಳಲ್ಲೂ ಆತನ ವಿರುದ್ಧ ಅಪರಾಧ ಸಾಬೀತಾಗಿದೆ ಎಂದೂ ಅಲ್ಲ.

Also Read
ಎಲ್ರರಿಗೂ ಈ ಧೈರ್ಯ ಇರಲ್ಲ... ಟೀಮ್​ನಿಂದ ಸಿರಾಜ್​ನ ಹೊರಗಿಟ್ಟ ಗೌತಿ-ಗಿಲ್​ ನಿರ್ಧಾರ ಕೊಂಡಾಡಿದ ಮಾಜಿ ಕ್ರಿಕೆಟಿಗ | Mohammed Siraj
Dupatta Killer

ಯೋಗಿತಾ ನಾಯಕ್‌ ಮಿಸ್ಸಿಂಗ್​ ಕೇಸ್​ನಿಂದ ಬಯಲಾದ ರಹಸ್ಯ

2009ರ ಜನವರಿಯಲ್ಲಿ ಯೋಗಿತಾ ನಾಯಕ್‌ ಎಂಬ ಯುವತಿ ನಾಪತ್ತೆಯಾದ ಪ್ರಕರಣ ತನಿಖೆಗೆ ಮಹತ್ವದ ತಿರುವು ನೀಡಿತು. ಬಳಿಕ ಆಕೆಯ ಮೃತದೇಹ ಪತ್ತೆಯಾದ ನಂತರ ಪೊಲೀಸರು ಮೊಬೈಲ್‌ ಕರೆಗಳ ವಿವರಗಳನ್ನು ಪರಿಶೀಲಿಸಿದರು. ಇಲ್ಲಿ ತನಿಖೆಯ ಹಾದಿ ಮಹಾನಂದ ನಾಯಕ್‌ನತ್ತ ಮುಖ ಮಾಡಿತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಮಹಿಳೆಯರ ಹತ್ಯೆ ಪ್ರಕರಣಗಳ ಕುರಿತು ಮಾಹಿತಿ ಹೊರಬಂದಿತು ಎಂದು ವರದಿಯಾಗಿದೆ. ಕೆಲವು ಸಂತ್ರಸ್ತರ ಮೃತದೇಹಗಳನ್ನು ಎಲ್ಲಿ ಬಚ್ಚಿಟ್ಟಿದ್ದ ಎಂಬ ಮಾಹಿತಿಯನ್ನೂ ಆತ ಪೊಲೀಸರಿಗೆ ನೀಡಿದ್ದ ಎನ್ನಲಾಗಿದೆ.

ವಿಚಾರಣೆ, ಜೀವಾವಧಿ ಶಿಕ್ಷೆ

ಮಹಾನಂದ ನಾಯಕ್‌ ಹಲವು ಹತ್ಯೆಗಳನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ಹಲವು ಪ್ರಕರಣಗಳಲ್ಲಿ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿತು. ಬಲವಾದ ಸಾಕ್ಷ್ಯಗಳಿದ್ದ ಕೆಲವು ಕೊಲೆ ಪ್ರಕರಣಗಳಲ್ಲಿ ಗೋವಾದ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಪ್ರಸ್ತುತ ಆತ ಗೋವಾದ ಕೋಲ್ವಾಲೆ ಕೇಂದ್ರ ಕಾರಾಗೃಹದಲ್ಲಿದ್ದಾನೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).