ಗುಲಾಬ್​ ಜಾಮೂನ್​ಗೆ ಫೇಮಸ್​ ಈ ಹಳ್ಳಿ! ಅಷ್ಟಕ್ಕೂ ಅಂಥ ವಿಶೇಷತೆ ಏನಿದೆ ಇದೊಂದು ಸ್ವೀಟ್​ನಲ್ಲಿ? | Gulab Jamun 
ದೇಶ

ಗುಲಾಬ್​ ಜಾಮೂನ್​ಗೆ ಫೇಮಸ್​ ಈ ಹಳ್ಳಿ! ಅಷ್ಟಕ್ಕೂ ಅಂಥ ವಿಶೇಷತೆ ಏನಿದೆ ಇದೊಂದು ಸ್ವೀಟ್​ನಲ್ಲಿ? | Gulab Jamun

Gulab Jamun: ದೀಪಾವಳಿ ಸೇರಿದಂತೆ ಅನೇಕ ಹಬ್ಬ-ಹರಿದಿನಗಳು ಬಂತೆಂದೆರೆ ಅನೇಕರ ಮನೆಯಲ್ಲಿ ಮೊದಲು ಹಾಗೂ ಹೆಚ್ಚಾಗಿ ಮಾಡುವ ಸಿಹಿ ತಿಂಡಿಯೇ ಈ ಗುಲಾಬ್​ ಜಾಮೂನ್​. ಉಂಡೆ ಉಂಡೆಗಳು ಸಕ್ಕರೆ ಪಾಕದಲ್ಲಿ ಮುಳುಗಿ ಎದ್ದರೆ ಸಾಕು ಅದನ್ನು ಸವಿಯಲು ಹಲವರ ಬಾಯಲ್ಲಿ ನೀರೂರುತ್ತೆ. ಸಿಹಿ ತಿನಿಸುಗಳ ಸಮಯದಲ್ಲಿ ಗುಲಾಬ್​ ಜಾಮೂನ್​ಗೆ ಹೆಸರಾದ ಒಂದು ಹಳ್ಳಿ ಹಾಗೂ ಅದರ ವಿಶೇಷತೆ ಬಗ್ಗೆ ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

ಗುಲಾಬ್ ಜಾಮೂನ್ ಅನ್ನು ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಕಾರಣ, ಅದರ ಆಕಾರ, ಬಣ್ಣ ಮತ್ತು ಸಕ್ಕರೆ ಪಾಕದ ಸವಿ. ಗುಲಾಬ್ ಜಾಮೂನ್ ಕೂಡ ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಮನೆಗಳಲ್ಲಿ ಮಾಡುವ ಪ್ರಮುಖ ಸಿಹಿ ತಿಂಡಿ ಎಂಬುದರಲ್ಲಿ ಅನುಮಾನವೇ ಬೇಡ. ಅಸಲಿಗೆ, ಇಂದು ಬೇಕರಿಗಳಲ್ಲಿ 10ರಿಂದ 20 ರೂ. ಬೆಲೆಗೆ ಸಿಗುವ ಈ ಗುಲಾಬ್​ ಜಾಮೂನ್​ ಹಿಂದೆ ಒಂದು ಹಳ್ಳಿಯ ಕಥೆಯಿದೆ. ಅಲ್ಲಿಂದಲೇ ಈ ಸಿಹಿಯ ಮೂಲ ಆರಂಭ ಎಂಬುದು ಕುತೂಹಲಕಾರಿ ಸಂಗತಿ.

ಗುಲಾಬ್ ಜಾಮೂನ್ ಗ್ರಾಮ

ಭಾರತದ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದ ಲಖಿಪುರ್ ಖೇರಿ ಜಿಲ್ಲೆಯ ಮೈಕಲ್‌ಗಂಜ್ ಗ್ರಾಮವು ಗುಲಾಬ್ ಜಾಮೂನ್‌ಗೆ ಸಿಕ್ಕಾಪಟ್ಟೆ ಹೆಸರುವಾಸಿ. ದೆಹಲಿ ಮತ್ತು ಲಖನೌ ಪ್ರದೇಶಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಒಂದಲ್ಲ, ಎರಡಲ್ಲ ಸಾಲು ಸಾಲು ಗುಲಾಬ್ ಜಾಮೂನ್ ಲಭ್ಯವಿರುವ ಅಂಗಡಿಗಳು ನಿಮಗೆ ಕಾಣಸಿಗಲಿವೆ. ಇಲ್ಲಿ, ಆಗ ತಾನೇ ಅಂದರೆ ಫ್ರೆಶ್​ ಆಗಿ ಜಾಮೂನ್​ ಅನ್ನು ಮಾಡಿಕೊಡಲಾಗುತ್ತದೆ.

ದಿನನಿತ್ಯ ಗುಲಾಬ್ ಜಾಮೂನ್ ಮಾಡುವ ಈ ಅಂಗಡಿಗಳಿಗೆ ಹೋದರೆ ಆಗಷ್ಟೇ ಬೇಯಿಸಿದ ಗುಲಾಬ್ ಜಾಮೂನ್ ಅನ್ನು ಅಲ್ಲಿಯೇ ಚಪ್ಪರಿಸಿಕೊಂಡು ತಿನ್ನಬಹುದು. ಈ ಮಾರ್ಗದಲ್ಲಿ ಸಾಗುವ ಅದೆಷ್ಟೋ ಮಂದಿ, ತಮ್ಮ ತಮ್ಮ ವಾಹನಗಳನ್ನು ಬದಿಗೆ ಹಾಕಿ, ತಾವು ತಿಂದು ಕುಟುಂಬಗಳಿಗೆ ಪಾರ್ಸೆಲ್‌ಗಳನ್ನು ಸಹ ಖರೀದಿ ಮಾಡುತ್ತಾರೆ. ಯಾರೋ ಒಬ್ಬರು ಕಂಡುಕೊಂಡ ಉಪಾಯ ಇದೀಗ ಊರಿನ 25ಕ್ಕೂ ಹೆಚ್ಚು ಮಂದಿಗೆ ಆದಾಯದ ಮೂಲವಾಗಿದೆ.

ಅಷ್ಟಕ್ಕೂ ಈ ಹೆಸರು ಬಂದಿದ್ದೇಗೆ?

ಗುಲಾಬ್ ಜಾಮೂನ್ ಕಥೆ ಹಲವು ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. 1941ರಲ್ಲಿ, ಕೈಲ್‌ಗಂಜ್ ಗ್ರಾಮದಲ್ಲಿ ಧನಬಾಲ್ ಮಿಠಾಯಿ ಭಂಡಾರ್ ಎಂಬ ಅಂಗಡಿಯೊಂದನ್ನು ತೆರೆಯಲಾಯಿತು. ಈ ಮಳಿಗೆಯಲ್ಲಿ ವಿಶೇಷವಾಗಿ ನೀಡಲಾದ ಬಿಸಿ ಬಿಸಿ ಆಗಿ ತಯಾರಿಸಿದ ಗುಲಾಬ್ ಜಾಮೂನ್ ಅನ್ನು ಪ್ರಯಾಣಿಕರು ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದರು. ದಿನ ಕಳೆದಂತೆ ಸ್ವೀಟ್​ನ ಬೇಡಿಕೆಯೂ ಹೆಚ್ಚಾಗಿದ್ದರಿಂದ, ಇನ್ನುಳಿದ ಅಂಗಡಿಯವರು ಕೂಡ ಗುಲಾಬ್ ಜಾಮೂನ್ ಅನ್ನು ಮಾರಾಟ ಮಾಡಲು ಶುರು ಮಾಡಿದರು.

1970ರ ದಶಕದಲ್ಲಿ, ಈ ಸ್ಥಳವು ತನ್ನ ಗುಲಾಬ್ ಜಾಮೂನ್‌ಗೆ ಬಹಳ ಜನಪ್ರಿಯವಾಯಿತು. ಇವು ಕೇವಲ ಸಾಮಾನ್ಯ ಸಿಹಿತಿಂಡಿಗಳಲ್ಲ, ಸ್ಥಳೀಯ ವ್ಯಾಪಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಹಳ್ಳಿಯಲ್ಲಿ ವಾಸಿಸುವ ಕುಟುಂಬಗಳಿಗೆ ಜೀವನಾಧಾರವಾಗಿದೆ. ಈ ಹೆದ್ದಾರಿಯಲ್ಲಿ ಪ್ರಸ್ತುತ ಸುಮಾರು 25 ಅಂಗಡಿಗಳಿದ್ದು, ವರ್ಷವಿಡೀ ಇಲ್ಲಿ ಗುಲಾಬ್ ಜಾಮೂನ್ ಮಾರಾಟವಾಗುತ್ತದೆ ಎನ್ನಲಾಗಿದೆ.

ಗುಲಾಬ್ ಜಾಮೂನಿನ ವಿಶೇಷತೆ ಏನು?

ಮೈಕಲಗಂಜ್ ಗ್ರಾಮದಲ್ಲಿ ಗುಲಾಬ್ ಜಾಮೂನ್ ತಯಾರಿಸಿ ಬಡಿಸುವ ರೀತಿ ವಿಶೇಷವಾಗಿದೆ. ಅದೇನೆಂದರೆ, ಮಣ್ಣಿನ ಪಾತ್ರೆಯಲ್ಲಿ ಬಿಸಿ ಬಿಸಿ ಗುಲಾಬ್ ಜಾಮೂನ್ ಅನ್ನು ನೀಡುತ್ತಾರೆ. ಈ ಅನುಭವ ಜನರಿಗೆ ತುಂಬಾ ಹೊಸತು. ಮತ್ತು ಅದನ್ನು ತಯಾರಿಸಲು, ಹಾಲಿನ ಪುಡಿ, ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟು ಮುಂತಾದ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಮೃದುಗೊಳಿಸಲಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ಬೇಯಿಸುವುದು ರುಚಿಯನ್ನು ಹೆಚ್ಚಿಸುತ್ತದೆ ಎಂದು ವಿವರಿಸಲಾಗಿದೆ,(ಏಜೆನ್ಸೀಸ್).