ಆಯೋಗದ ಬೆಂಬಲಕ್ಕೆ ನಿಂತು ವಿಪಕ್ಷಗಳಿಗೆ ತಿರುಗೇಟು ನೀಡಿದ 124 ಮಾಜಿ ಐಎಎಸ್-ಐಎಫ್‌ಎಸ್ ಅಧಿಕಾರಿಗಳು 
ದೇಶ

ಗೆದ್ದಾಗ ಎಲ್ಲಾ ಓಕೆ...ಸೋತಾಗ ಆರೋಪವೇಕೆ..? ಆಯೋಗದ ಬೆಂಬಲಕ್ಕೆ ನಿಂತು ವಿಪಕ್ಷಗಳಿಗೆ ಕುಟುಕಿದ 124 ಮಾಜಿ ಅಧಿಕಾರಿಗಳು!..ವೈರಲ್ ಆಯ್ತು ಪತ್ರ! | 124 Ex-Bureaucrats Letter

124 Ex-Bureaucrats Letter: ಚುನಾವಣಾ ಅಕ್ರಮಗಳ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿರಬೇಕು ಎಂದು ಪ್ರತಿಪಾದಿಸಿರುವ 124 ಮಾಜಿ ಐಎಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ತಂಡ, ಭಾರತೀಯ ಚುನಾವಣಾ ಆಯೋಗ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡು ದೇಶದ ನಾಗರಿಕರಿಗೆ ಪತ್ರ ಬರೆದಿದೆ

124 Ex-Bureaucrats Letter: ಚುನಾವಣಾ ಅಕ್ರಮಗಳ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿರಬೇಕು ಎಂದು ಪ್ರತಿಪಾದಿಸಿರುವ 124 ಮಾಜಿ ಐಎಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ತಂಡ, ಭಾರತೀಯ ಚುನಾವಣಾ ಆಯೋಗ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡು ದೇಶದ ನಾಗರಿಕರಿಗೆ ಪತ್ರ ಬರೆದಿದೆ. ಎಸ್​ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಹಾಗೂ ಕಾಕ್ರೋಚ್​ ಜನತಾ ಪಾರ್ಟಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಪತ್ರ ಹೊರಬಿದ್ದಿದೆ.

ಅಕ್ರಮವಾಗಿದೆ ಎನ್ನುವುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯವಿಲ್ಲದೆ ಮತ ಕಳ್ಳತನ ಆಗಿದೆ ಅಥವಾ ಇವಿಎಂ ಯಂತ್ರವನ್ನು ತಿರುಚಲಾಗಿದೆ ಎಂದು ಸುಳ್ಳು ಆರೋಪ ಮಾಡುವುದು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಈ ತಂಡ ಕಳವಳ ವ್ಯಕ್ತಪಡಿಸಿದೆ.

ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಭಾರತದ ನಾಗರಿಕರಿಗೆ ಈ ಪತ್ರ ಬರೆಯಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಯತ್ನಿಸಿದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಶನಿವಾರ ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಗಳ ನಡುವೆಯೇ ಮಾಜಿ ಅಧಿಕಾರಿಗಳ ಈ ಪತ್ರ ಹೊರಬಿದ್ದಿದೆ.

ಇದನ್ನೂ ಓದಿ:ಅರಾಜಕತೆ ಸೃಷ್ಟಿಸುವವರ ನಾಟಕ ಫ್ಲಾಪ್‌, ಗುಂಪುಗಾರಿಕೆ ವಿರುದ್ಧ ಪ್ರಜಾಪ್ರಭುತ್ವ ವಿಜಯ ಸಾಧಿಸಿದೆ ಎಂದ ಬಿಜೆಪಿ ನಾಯಕ! | Sambit Patra

ಹಿಂಸಾಚಾರ ತಲೆಯೆತ್ತಿದಾಗ ಪ್ರಜಾಪ್ರಭುತ್ವ ಮೌನವಾಗುತ್ತದೆ!

ಚುನಾವಣೆಗಳನ್ನು ನಡೆಸುವುದು, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವುದು ಮತ್ತು ಇವಿಎಂ ಯಂತ್ರಗಳನ್ನು ಭದ್ರಪಡಿಸುವ ಸ್ಟ್ರಾಂಗ್ ರೂಮ್‌ಗಳನ್ನು ಕಾಯುವುದು ಸೇರಿದಂತೆ ತಮ್ಮ ಇಡೀ ವೃತ್ತಿಜೀವನವನ್ನು ಚುನಾವಣೆಗಳಿಗಾಗಿಯೇ ಮೀಸಲಿಟ್ಟಿರುವುದಾಗಿ ಮಾಜಿ ಸಿವಿಲ್ ಸರ್ವೆಂಟ್ಸ್ ತಿಳಿಸಿದ್ದಾರೆ. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ನಮ್ಮ ಚುನಾವಣೆಗಳ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲದೆ ತಿರುಚಲಾಗಿದೆ ಎಂಬ ಪದವನ್ನು ಬಳಸುವುದು ಮತ್ತು ಅದನ್ನು ಪದೇ ಪದೇ ಪುನರಾವರ್ತಿಸುವುದರಿಂದ ನಮ್ಮೆಲ್ಲರ ಪ್ರಜಾಪ್ರಭುತ್ವದ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮಗಳು ನಡೆದ ಚುನಾವಣೆ ಹೇಗಿರುತ್ತದೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನೀವು ಕೇವಲ ಸಿನಿಮಾಗಳಲ್ಲಿ ನೋಡಿರುವಂತಹ ಕಾಲದಲ್ಲಿ ನಾವು ಸೇವೆ ಸಲ್ಲಿಸಿದ್ದೇವೆ. ಆಗ ಬೂತ್‌ಗಳಲ್ಲಿ ನಾಡಬಂದೂಕುಗಳ ಬೆದರಿಕೆ, ಬಾಹುಬಲಿಗಳ ದಬ್ಬಾಳಿಕೆ, ಬ್ಯಾಲಟ್ ಬಾಕ್ಸ್‌ಗಳಿಗೆ ನಕಲಿ ಮತಗಳನ್ನು ತುಂಬುವುದು ಅಥವಾ ಕಳವು ಮಾಡುವುದು ಹಾಗೂ ಮತದಾರರನ್ನು ವಾಪಸ್ ಕಳುಹಿಸುವುದು ಸರ್ವೇ ಸಾಮಾನ್ಯವಾಗಿದ್ದವು. ಬೂತ್ ಕ್ಯಾಪ್ಚರಿಂಗ್ ಎಷ್ಟು ಹೆಚ್ಚಾಗಿತ್ತೆಂದರೆ, ಸಂಸತ್ತು 1989ರಲ್ಲಿ ಇದನ್ನು ಅಪರಾಧವೆಂದು ಘೋಷಿಸಬೇಕಾಯಿತು. ಹಿಂಸಾಚಾರ ತಲೆಯೆತ್ತಿದಾಗ ಪ್ರಜಾಪ್ರಭುತ್ವ ಮೌನವಾಗುತ್ತದೆ ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಚುನಾವಣಾ ವ್ಯವಸ್ಥೆಯಲ್ಲಿನ ಸುಧಾರಣೆಗಳಿಗೆ ಬಿಹಾರವೇ ಸಾಕ್ಷಿಯಲ್ಲವೆ...

ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆಗಳಿಗೆ ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯನ್ನು ಅತ್ಯುತ್ತಮ ಉದಾಹರಣೆಯಾಗಿ ಈ ಮಾಜಿ ಅಧಿಕಾರಿಗಳ ಗುಂಪು ಉಲ್ಲೇಖಿಸಿದ್ದು, ಬಿಹಾರ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಮರುಮತದಾನವಿಲ್ಲದೆ ಯಶಸ್ವಿಯಾಗಿ ಚುನಾವಣೆ ನಡೆಸಿದೆ. ಅಷ್ಟೇ ಅಲ್ಲದೆ, 1951ರ ನಂತರವೇ ಅತ್ಯಧಿಕ ಮತದಾನ ಇಲ್ಲ ದಾಖಲಾಗಿದ್ದು, ಮಹಿಳೆಯರು ಕೂಡ ದಾಖಲೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಅಧಿಕಾರಿಗಳು ಯಾರೂ ದೇವಮಾನವರಾಗಿ ಬದಲಾಗಿದ್ದರಿಂದ ಇದು ಸಾಧ್ಯವಾಗಿಲ್ಲ. ಬದಲಾಗಿ, ಚುನಾವಣಾ ಆಯೋಗವು ಸೃಷ್ಟಿಸಿರುವ ವ್ಯವಸ್ಥೆಯು ಯಾರನ್ನೂ ಕುರುಡಾಗಿ ನಂಬುವುದಿಲ್ಲ ಎಂಬ ಕಾರಣಕ್ಕಾಗಿಯೇ ಇದು ಸಾಧ್ಯವಾಯಿತು ಎಂದು ಮಾಜಿ ಅಧಿಕಾರಿಗಳು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರತಿ ಅಭ್ಯರ್ಥಿಯ ಏಜೆಂಟ್ ಪ್ರತಿ ಬೂತ್‌ನಲ್ಲಿ ನಡೆಯುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಅಂತಿಮವಾಗಿ ಚಲಾಯಿಸಲಾದ ಮತಗಳ ಸಹಿ ಮಾಡಿದ ಎಣಿಕೆಯ ಪ್ರತಿಯನ್ನು ತಮ್ಮೊಂದಿಗೆ ಪಡೆದುಕೊಂಡು ಹೋಗುತ್ತಾರೆ. ಇವಿಎಂ ಯಂತ್ರಗಳನ್ನು ಎಲ್ಲಾ ಏಜೆಂಟ್‌ಗಳ ಸಹಿಯೊಂದಿಗೆ ಭದ್ರವಾಗಿ ಸೀಲ್ ಮಾಡಲಾಗುತ್ತದೆ ಮತ್ತು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ನೇರವಾಗಿ ವೀಕ್ಷಿಸಬಹುದಾದ ಸ್ಟ್ರಾಂಗ್ ರೂಮ್‌ಗಳಲ್ಲಿ ಕಾವಲು ಕಾಯಲಾಗುತ್ತದೆ. ಮತಯಂತ್ರಗಳ ಎಣಿಕೆಯ ಫಲಿತಾಂಶವನ್ನು ವಿವಿಪ್ಯಾಟ್ (VVPAT) ಕಾಗದದ ಚೀಟಿಗಳೊಂದಿಗೆ ತಾಳೆ ನೋಡಲಾಗುತ್ತದೆ.

ಇದು 2024ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಅತ್ಯಂತ ಪ್ರಮುಖ ಸುರಕ್ಷತಾ ಕ್ರಮವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ತಿರುಚುವಿಕೆ ಅಥವಾ ಅಕ್ರಮ ನಡೆಯಬೇಕಾದರೆ, ಎಲ್ಲಾ ರಾಜಕೀಯ ಪಕ್ಷಗಳ ಸರ್ಕಾರಗಳ ಹತ್ತಾರು ಸಾವಿರ ಅಧಿಕಾರಿಗಳು ಮತ್ತು ಸೋತ ಪಕ್ಷಗಳ ಸ್ವಂತ ಏಜೆಂಟ್‌ಗಳೆಲ್ಲರೂ ಒಟ್ಟಾಗಿ ಮೌನವಾಗಿರಬೇಕಾಗುತ್ತದೆ. ಆದರೆ, ಇಂತಹ ಯಾವುದೇ ಬೃಹತ್ ಪಿತೂರಿಯು ಇದುವರೆಗೆ ಎಲ್ಲೂ ಸಾಬೀತಾಗಿಲ್ಲ. ಚುನಾವಣಾ ಪ್ರಕ್ರಿಯೆಯ ಉನ್ನತ ಹಂತಗಳಿಗೂ ಇದೇ ಕಟ್ಟುನಿಟ್ಟಾದ ತತ್ವ ಅನ್ವಯಿಸುತ್ತದೆ.

ಗೆದ್ದಾಗ ಎಲ್ಲಾ ಓಕೆ...ಸೋತಾಗ ಈ ಆರೋಪವೇಕೆ..?

ನೀವು ದೂರುತ್ತಿರುವ ಅಥವಾ ತಿರುಚಲಾಗಿದೆ ಎಂದು ಆರೋಪಿಸುತ್ತಿರುವ ಇದೇ ಚುನಾವಣಾ ವ್ಯವಸ್ಥೆಯು ಹಿಂದೆ ನಿಮಗೆ ಗೆಲುವನ್ನು ತಂದುಕೊಟ್ಟಿದೆ ಎಂಬುದನ್ನು ಮರೆಯಬಾರದು. ಹಾಗಾದರೆ ನೀವು ಈಗ ಅನುಮಾನಿಸುತ್ತಿರುವುದು ಇಡೀ ವ್ಯವಸ್ಥೆಯನ್ನೇ ಅಥವಾ ನಿಮಗೆ ಸಿಗದ ಫಲಿತಾಂಶವನ್ನೇ ಎಂದು ನೀವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ನಮ್ಮ ಮತ ಎಣಿಕೆಯಾಗಿಲ್ಲ ಅಥವಾ ನಮ್ಮ ಮತಕ್ಕೆ ಯಾವುದೇ ಬೆಲೆ ಇಲ್ಲ ಎಂಬುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲದೆ, ಜನರನ್ನು ದಿಕ್ಕುತಪ್ಪಿಸಿ ಪ್ರಚೋದಿಸಲು ದೊಡ್ಡ ರಾಜಕೀಯ ಕಥೆಗಳನ್ನು ಕಟ್ಟುವುದು ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುತ್ತದೆ. ಚುನಾವಣೆಯಲ್ಲಿ ಜನರಿಂದ ಸೋತು ತಿರಸ್ಕೃತಗೊಂಡ ನಂತರ ರಾಜಕೀಯವಾಗಿ ಮತ್ತೆ ಮುನ್ನಲೆಗೆ ಬರಲು ನಡೆಸುತ್ತಿರುವ ಕೇವಲ ಒಂದು ನಾಟಕೀಯ ಪ್ರಯತ್ನವಿದು.

ಚುನಾವಣಾ ಆಯೋಗವನ್ನು ಬಹುಸದಸ್ಯ ಸಂಸ್ಥೆಯಾಗಿ ಮಾಡಲಾಗಿದೆ. 1995ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಈ ವಿನ್ಯಾಸದಿಂದಾಗಿ ಯಾವುದೇ ಒಬ್ಬ ವ್ಯಕ್ತಿಯು ಅಂತಹ ಅಪಾರ ಅಧಿಕಾರವನ್ನು ಏಕಾಂಗಿಯಾಗಿ ಹೊಂದಿರುವುದಿಲ್ಲ ಎಂದು ಅಧಿಕಾರಿಗಳು ಬರೆದಿದ್ದಾರೆ. ಮೂರು ಚುನಾವಣಾ ಆಯುಕ್ತರ ಉಪಸ್ಥಿತಿಯಿಂದಾಗಿ ಪ್ರಮುಖ ಪ್ರಶ್ನೆಗಳನ್ನು ಒಟ್ಟಾಗಿ ಪರಿಗಣಿಸಲು ಸಾಧ್ಯವಾಗುತ್ತದೆ ಮತ್ತು ಇದು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಗೆದ್ದಾಗ ವ್ಯವಸ್ಥೆಯು ಪ್ರಾಮಾಣಿಕವಾಗಿರುತ್ತದೆ ಮತ್ತು ನೀವು ಸೋತಾಗ ಅದೇ ವ್ಯವಸ್ಥೆಯು ತಿರುಚಲ್ಪಟ್ಟಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಅಧಿಕಾರಿಗಳು ಬರೆದಿದ್ದಾರೆ(ಏಜೆನ್ಸೀಸ್​).