

ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿವೆ. ಇದರ ಬೆನ್ನಲ್ಲೇ, 42 ಮಂದಿ ಮಾಜಿ ನ್ಯಾಯಾಧೀಶರು (42 Ex-Judges) ಹಾಗೂ ಸಾಂವಿಧಾನಿಕ ಹುದ್ದೆಗಳ ನಿವೃತ್ತ ಹಿರಿಯ ಅಧಿಕಾರಿಗಳು ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ಬೆಂಬಲಕ್ಕೆ ನಿಂತಿದ್ದಾರೆ.
ಅಕ್ಟೋಬರ್ 7 ರಂದು ಬಿಡುಗಡೆಯಾದ ಬಹಿರಂಗ ಪತ್ರದಲ್ಲಿ, ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಶಾಸನಬದ್ಧ ಸಂಸ್ಥೆಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಮಾಜಿ ನ್ಯಾಯಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾವಿಧಾನಿಕ ಸಂಸ್ಥೆಗಳ ಟೀಕೆಗಳು ಸಮರ್ಥನೀಯ ಪ್ರಜಾಸತ್ತಾತ್ಮಕ ಹಕ್ಕು, ಆದರೆ ಅದನ್ನು ಮೀರಿ ವೈಯಕ್ತಿಕ ದಾಳಿ ನಡೆಸುವುದು ಮತ್ತು ಅವುಗಳ ಅಸ್ತಿತ್ವವನ್ನೇ ಅನುಮಾನಿಸುವುದು ಸರಿಯಲ್ಲ ಎಂದು ಮಾಜಿ ನ್ಯಾಯಾಧೀಶರ ಒಕ್ಕೂಟ ಅಸಮಾಧಾನ ಹೊರಹಾಕಿದೆ.
ಸಂಸ್ಥೆಗಳನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕು, ಆದರೆ ಅವುಗಳ ಗೌರವಕ್ಕೆ ಕುಂದು ತರುವುದು ಸರಿಯಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಸಾಂವಿಧಾನಿಕ ಅಧಿಕಾರಿಗಳನ್ನು ಕಳ್ಳರು, ಗೊಂಬೆಗಳು ಮತ್ತು ರಾಜಿ ಮಾಡಿಕೊಂಡವರು ಎಂದು ಕರೆಯಲಾಗುತ್ತಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಮತ ಕಳ್ಳತನ ಎಂಬ ಗಂಭೀರ ಆರೋಪಗಳ ಹಿಂದಿನ ಆಧಾರವನ್ನು ಮಾಜಿ ನ್ಯಾಯಾಧೀಶರು ಪ್ರಶ್ನಿಸಿದ್ದು, ಇಂತಹ ಆರೋಪಗಳನ್ನು ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಗಳ ಮುಂದೆ ಸಾಬೀತುಪಡಿಸುವ ಬದಲು ಕೇವಲ ಪತ್ರಿಕಾಗೋಷ್ಠಿಗಳಲ್ಲಿ ಮಾತ್ರ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಮತ ಕಳ್ಳತನದ ಬಗ್ಗೆ ಚುನಾವಣಾ ಆಯೋಗ ಪ್ರಮಾಣಪತ್ರವನ್ನು ಕೇಳಿದರೆ ಯಾರೂ ಅದನ್ನು ಸಲ್ಲಿಸುವುದಿಲ್ಲ. ಅಲ್ಲದೆ, ಚುನಾವಣೆಯಲ್ಲಿ ಸೋತಾಗ ಇವಿಎಂಗಳ ಬಗ್ಗೆ ಪದೇ ಪದೇ ಅಪಸ್ವರ ಎತ್ತುವ ವಿಪಕ್ಷಗಳು, ಅದೇ ಯಂತ್ರಗಳನ್ನು ಬಳಸಿ ತಾವು ಗೆದ್ದಾಗ ಮಾತ್ರ ಯಾವುದೇ ಪ್ರಶ್ನೆಗಳನ್ನು ಎತ್ತುವುದಿಲ್ಲ ಎಂಬುದನ್ನು ಮಾಜಿ ನ್ಯಾಯಾಧೀಶರು ಬರೆದಿದ್ದಾರೆ. ಜೊತೆಗೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು ಚುನಾವಣಾ ಪಟ್ಟಿಯನ್ನು ನಿಯಂತ್ರಿಸುವ ಕಾನೂನು ಚೌಕಟ್ಟಿನ ಒಂದು ಭಾಗವಾಗಿದೆ ಎಂದಿದ್ದು, ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ 1950ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 21(3) ಅನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕ್ರಿಯೆಯು ಮೃತ ಮತದಾರರ ಹೆಸರುಗಳು, ನಕಲಿ ನಮೂದುಗಳು ಮತ್ತು ವಾಸಸ್ಥಳ ಬದಲಾಯಿಸಿದವರನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ, ಅದೇ ಸಮಯದಲ್ಲಿ ಅರ್ಹ ನಾಗರಿಕರನ್ನು ಸೇರಿಸುವುದನ್ನು ಖಚಿತಪಡಿಸುತ್ತದೆ. ಸೂಚನೆ, ವಿಚಾರಣೆ, ಆಕ್ಷೇಪಣೆ ಮತ್ತು ಮೇಲ್ಮನವಿ ಸೇರಿದಂತೆ ಭದ್ರತಾ ಕ್ರಮಗಳೊಂದಿಗೆ ಎಸ್‌ಐಆರ್ ಕಾನೂನುಬದ್ಧವಾಗಿದೆ ಮತ್ತು ಆಯೋಗದ ಅಧಿಕಾರದಲ್ಲಿದೆ ಎಂದು ಸುಪ್ರೀಂ ಕೋಚ್ ತೀರ್ಪು ನೀಡಿದೆ ಎಂದು ಸಹಿದಾರರು ತಿಳಿಸಿದ್ದಾರೆ. ಚುನಾವಣಾ ಸಂಸ್ಥೆಗಳ ಮೇಲೆ ನಿರಂತರವಾಗಿ ಅನುಮಾನ ವ್ಯಕ್ತಪಡಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆಯೂ ಪತ್ರದಲ್ಲಿ ಎಚ್ಚರಿಸಲಾಗಿದೆ.
ಪ್ರಜಾಪ್ರಭುತ್ವದ ಅತಿ ದೊಡ್ಡ ಆಸ್ತಿ ಎಂದರೆ, ಅದು ಜನಸಾಮಾನ್ಯರ ನಂಬಿಕೆ. ಆದರೆ, ನಿಮ್ಮ ಮತಕ್ಕೆ ಯಾವುದೇ ಬೆಲೆ ಇಲ್ಲ ಎಂದು ಜನರಿಗೆ ಪದೇ ಪದೇ ಸುಳ್ಳು ಹೇಳುತ್ತಾ ಹೋದರೆ, ಅವರಿಗೆ ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆಯೇ ಹೊರಟುಹೋಗುತ್ತದೆ ಎಂದು ಮಾಜಿ ನ್ಯಾಯಾಧೀಶರು ಎಚ್ಚರಿಸಿದ್ದಾರೆ. ಮತದಾನದ ಮೇಲಿನ ನಂಬಿಕೆ ಕಳೆದುಹೋದರೆ ಜನರ ಆಕ್ರೋಶವು ಬೀದಿಗಿಳಿಯುತ್ತದೆ. ಒಂದು ಸುಳ್ಳು ನಿರೂಪಣೆಯಿಂದ ಅಶಾಂತಿ ಶುರುವಾಗುತ್ತದೆ. ಆ ಸಂದರ್ಭದಲ್ಲಿ ಸಮಾಜದ ಅರಾಜಕ ಮತ್ತು ತೀವ್ರವಾದಿ ಶಕ್ತಿಗಳು ಈ ಗೊಂದಲದ ಅವಕಾಶವನ್ನು ಬಳಸಿ ಕಳಂಕ ತರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಚುನಾವಣೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುವ ಬದಲು, ರಾಜಕೀಯ ಪಕ್ಷಗಳು ತಮ್ಮ ಅಹವಾಲುಗಳನ್ನು ಸಾಕ್ಷ್ಯಾಧಾರಗಳ ಸಮೇತ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳ ಮುಂದೆ ಇಡಬೇಕು ಎಂದು ಮಾಜಿ ನ್ಯಾಯಾಧೀಶರು ಒತ್ತಾಯಿಸಿದ್ದಾರೆ. ಚುನಾವಣೆಗಳಲ್ಲಿ ಸ್ಪರ್ಧಿಸಿ, ಅವುಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ಅಲ್ಲದೆ, ಯಾವುದೇ ಅಧಿಕೃತ ಪರಿಶೀಲನೆ ಇಲ್ಲದ ಆರೋಪಗಳನ್ನು ದೊಡ್ಡ ಸುದ್ದಿಯನ್ನಾಗಿ ಬಿಂಬಿಸದಂತೆ ಮಾಧ್ಯಮಗಳಿಗೂ ಮನವಿ ಮಾಡಿರುವ ಅವರು, ಒಂದು ಆಕರ್ಷಕ ಹೆಡ್‌ಲೈನ್ ಎಂದಿಗೂ ಸಾಕ್ಷಿಯಾಗಲಾರದು, ಮತ್ತು ಸುಳ್ಳು ಆರೋಪಗಳನ್ನು ಪದೇ ಪದೇ ಪುನರಾವರ್ತಿಸಿದಾಕ್ಷಣ ಅವು ಸತ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಹಿರಂಗ ಪತ್ರವು ನಾಗರಿಕರು ಮತ್ತು ರಾಜಕೀಯ ಪಕ್ಷಗಳಿಗೆ ಒಂದು ಪ್ರಮುಖ ಸಂದೇಶದೊಂದಿಗೆ ಮುಕ್ತಾಯಗೊಂಡಿದ್ದು, ಯಾವುದೇ ಸಾಂವಿಧಾನಿಕ ಸಂಸ್ಥೆಗಳು ಯಾವುದೇ ನಿರ್ದಿಷ್ಟ ಸರ್ಕಾರಕ್ಕೆ ಸೇರಿದ್ದಲ್ಲ, ಅವು ಈ ದೇಶದ ಸಮಸ್ತ ಜನರಿಗೆ ಸೇರಿವೆ ಎಂದು ಬಲವಾಗಿ ಪ್ರತಿಪಾದಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಪಟ್ಟು ಹಿಡಿದು ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಹಾಗೂ ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ, ಮಾಜಿ ನ್ಯಾಯಾಧೀಶರ ಈ ಮಧ್ಯಪ್ರವೇಶವು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮಹತ್ವವನ್ನು ಜನರ ಮುಂದಿಟ್ಟಿದೆ(ಏಜೆನ್ಸೀಸ್).