ತೆರಿ ಸಿನಿಮಾದ ಸೀನ್​ವೊಂದರಂತೆ ಶಾಸಕನ ಪ್ರತಿಕೃತಿ ಸೇತುವೆಗೆ ನೇತು ಹಾಕಿರುವ ದೃಶ್ಯ 
ದೇಶ

ಸಿಎಂ ವಿಜಯ್ ನಟನೆಯ 'ತೆರಿ' ಸಿನಿಮಾ ದೃಶ್ಯ ಮರುಸೃಷ್ಟಿ: TVK ಶಾಸಕ ಅರುಳ್ ವಿಘ್ನೇಶ್ ಬಂಧನಕ್ಕೆ ಆಗ್ರಹಿಸಿ ಸೇತುವೆ ಮೇಲೆ ಪ್ರತಿಕೃತಿ ನೇತುಹಾಕಿದ ಡಿಎಂಕೆ

  • ಮಹಿಳಾ ಜಿಲ್ಲಾಧಿಕಾರಿಗೆ, ಶಾಸಕ ಸಿ. ಅರುಳ್​ ವಿಘ್ನೇಶ್​ ಲೈಂಗಿಕ ಕಿರುಕುಳ ನೀಡಿದ ಆರೋಪ

  • ಕಳ್ಳಕುರಿಚಿ ಟಿವಿಕೆ ಶಾಸಕ ಸಿ. ಅರುಳ್ ವಿಘ್ನೇಶ್ ಬಂಧನಕ್ಕೆ ಒತ್ತಾಯಿಸಿ ವಿದ್ಯಾರ್ಥಿ ಘಟಕ ಒತ್ತಾಯ

  • ಸಿಎಂ ವಿಜಯ್ ಅವರ 'ತೆರಿ' ಚಿತ್ರದ ದೃಶ್ಯವನ್ನು ಮರುಸೃಷ್ಟಿಸಿ, ಶಾಸಕನ ಪ್ರತಿಕೃತಿಯನ್ನು ನೇತು ಹಾಕಿ ಪ್ರತಿಭಟನೆ

  • ನವೆಂಬರ್ 24 ರಂದು ಶಾಸಕ ವಿಘ್ನೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಶಾಸಕರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್​ ವಿಘ್ನೇಶ್​ ಮೇಲೆ ಮಹಿಳಾ ಜಿಲ್ಲಾಧಿಕಾರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪವಿದ್ದು, ಅವರನ್ನು ಬಂಧಿಸುವಂತೆ ಡಿಎಂಕೆ ಒತ್ತಾಯಿಸುತ್ತಿದೆ. ಅಲ್ಲದೆ ಸಿಎಂ ವಿಜಯ್​ ಅವರ ತೆರಿ ಸಿನಿಮಾದ ದೃಶ್ಯವೊಂದನ್ನು ಮರು ಸೃಷ್ಟಿಸಿ..ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಸಿಎಂ ವಿಜಯ್​​ ನಟನೆಯ 'ತೆರಿ' ಸಿನಿಮಾದಲ್ಲಿ ರಾಜಕಾರಿಣಿಯ ಮಗ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆಸುವುದರ ವಿರುದ್ಧ ಅಧಿಕೃತವಾಗಿ ಕ್ರಮ ಕೈಗೊಳ್ಳಲು ಆಗದ ಕಾರಣ, ಪೊಲೀಸರೇ ಸ್ವತಃ ಬ್ರಿಡ್ಜ್​​​​​ಗೆ ನೇತುಹಾಕಿ ಕ್ರಮ ಕೈಗೊಳ್ಳುವ ದೃಶ್ಯವೊಂದಿದೆ. ಇದೇ ದೃಶ್ಯವನ್ನು ಡಿಎಂಕೆ ವಿದ್ಯಾರ್ಥಿ ಘಟಕದ ಸದಸ್ಯರು ಮರು ಸೃಷ್ಟಿಸಿದ್ದಾರೆ. ತಿರುವಣ್ಣಾಮಲೈ ಜಿಲ್ಲೆಯ ವಂದವಾಸಿಯ ಸೇತುವೆಯೊಂದರಿಂದ ಶಾಸಕನ ಪ್ರತಿಕೃತಿಯನ್ನು ನೇತುಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಆರೋಪವೇನು?

ಜಿಲ್ಲಾಧಿಕಾರಿಗೆ ಅನುಚಿತ ಸಂದೇಶಗಳನ್ನು ಕಳುಹಿಸಿದ ಆರೋಪ ಹೊತ್ತಿರುವ ಕಳ್ಳಕುರಿಚಿ ಶಾಸಕ ಸಿ. ಅರುಳ್​ ವಿಘ್ನೇಶ್​ ತಕ್ಷಣವೇ ಬಂಧಿಸುವಂತೆ ಅವರು ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೇತುವೆಯಿಂದ ಪ್ರತಿಕೃತಿಯನ್ನು ತೆರವುಗೊಳಿಸಿದರು.

ನ.24ರಂದು ಪ್ರಕರಣ ದಾಖಲು

ಶಾಸಕ ಸಿ. ಅರುಳ್​ ವಿಘ್ನೇಶ್​ ವಿರುದ್ಧ ಮಹಿಳಾ ಜಿಲ್ಲಾಧಿಕಾರಿ ಕಳ್ಳಕುರಿಚಿ ಪೊಲೀಸ್ ವರಿಷ್ಠಾಧಿಕಾರಿ ಐ. ಶಹನಾಜ್ ಅವರಿಗೆ ನೀಡಿದ ದೂರಿನ ಮೇರೆಗೆ ಅವರ ವಿರುದ್ಧ ನ.24ರಂದು ಪ್ರಕರಣ ದಾಖಲಾಗಿತ್ತು. ಲೈಂಗಿಕ ಅರ್ಥ ಬರುವಂತಹ ಮಾತುಗಳನ್ನಾಡಿದ್ದಾರೆ. ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಶಾಸಕರು ಈ ಆರೋಪವನ್ನು ನಿರಾಕರಿಸಿದ್ದು, ಇದು ರಾಜಕೀಯ ದುರುದ್ಧೇಶದಿಂದ ಮಾಡಿದ ಆರೋಪ ಎಂದರು,

ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4 ಮತ್ತು ಭಾರತೀಯ ನ್ಯಾಯ ಸಂಹಿತೆಯಲೈಂಗಿಕ ಕಿರುಕುಳ, ಹಿಂಬಾಲಿಸುವುದು ಹಾಗೂ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯಾವುದೇ ಕ್ರಮವಿಲ್ಲ

ಜು.31ರಂದೇ ಮಹಿಳಾ ಜಿಲ್ಲಾಧಿಕಾರಿ ಶಾಸಕನ ವಿರುದ್ಧ ಮುಖ್ಯ ಕಾರ್ಯದರ್ಶಿ ಎಂ ಸಾಯಿ ಕುಮಾರ್​ ಅವರಿಗೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ನ.23ರಂದು ಪೊಲೀಸರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ನ.15ರಂದು ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪಕ್ರರಣ ಕೈಗೆತ್ತಿಕೊಂಡು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ತಮಿಳುನಾಡು ಡಿಜಿಪಿಗೆ ಸೂಚನೆ ನೀಡಿತ್ತು. ಇದಕ್ಕೂ ಮುನ್ನ ಮದ್ರಾಸ್​ ಹೈಕೋರ್ಟ್​​, ಸಂಬಂಧಪಟ್ಟ ವ್ಯಕ್ತಿಯಿಂದ ದೂರು ಬರದೆ ಕೇವಲ ಮಾಧ್ಯಮ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಸಿಬಿಐ ತನಿಖೆಗೆ ಉದಯನಿಧಿ ಸ್ಟಾಲಿನ್ ಆಗ್ರಹ

ಬುಧವಾರ ಡಿಎಂಕೆ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಡಿಜಿಪಿ ಮಹೇಶ್ ಕುಮಾರ್ ಅಗರ್ವಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಶಾಸಕ ವಿಘ್ನೇಶ್ ಅವರನ್ನು ಬಂಧಿಸುವಂತೆ ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಪೊಲೀಸರು ಹಿರಿಯ ಅಧಿಕಾರಿಗಳನ್ನು ನೇಮಿಸಿದ್ದಾರೆ. ಶಾಸಕ ವಿಘ್ನೇಶ್ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ ಮತ್ತು ತನಿಖೆ ಪ್ರಗತಿಯಲ್ಲಿದೆ.