

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಶಾಸಕ ಸಿ ಅರುಳ್ ವಿಘ್ನೇಶ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮಂಗಳವಾರ(ನ. 24) ವರದಿಯಾಗಿದೆ.
ಸೋಮವಾರ ಜಿಲ್ಲಾಧಿಕಾರಿ ನೀಡಿದ ದೂರಿನ ಮೇರೆಗೆ ಐದು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಲುಂದೂರ್‌ಪೇಟೆ ಅಪರಾಧ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ತಂಡವೊಂದು ಈ ಪ್ರಕರಣದ ತನಿಖೆ ನಡೆಸುತ್ತಿದೆ. ಶಾಸಕರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದಾಗ್ಯೂ, ಟಿವಿಕೆ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ವಿಲ್ಲುಪುರಂ ವಲಯ ಮತ್ತು ಕಲ್ಲಕುರಿಚಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಇನ್ನೂ ಅಧಿಕೃತ ಸ್ಪಷ್ಟೀಕರಣವನ್ನು ನೀಡಿಲ್ಲ. ಬಾಧಿತ ಅಧಿಕಾರಿಯಿಂದ ಕ್ರಿಮಿನಲ್ ದೂರು ಅಥವಾ ಆಡಳಿತಾತ್ಮಕ ದೂರು ಬಂದಿಲ್ಲ ಎಂದು ಸೋಮವಾರ ಹೇಳಿತ್ತು.
ಅದಾಗ್ಯೂ, ರಾಜ್ಯ ಸರ್ಕಾರವು ಮಂಗಳವಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಎಫ್‌ಐಆರ್ ದಾಖಲಾಗಿರುವುದನ್ನು ಬಹಿರಂಗಪಡಿಸಿದೆ. ಶಾಸಕ ಸಿ ಅರುಳ್ ವಿಘ್ನೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಆರ್ ತ್ರಿಶೂಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಾಗ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ಜಾನ್ ಸತ್ಯನ್ ಪೀಠದ ಮುಂದೆ ಈ ಮಾಹಿತಿ ತಿಳಿಸಿದ್ದಾರೆ.
ಈ ವೇಳೆ ನ್ಯಾಯಮೂರ್ತಿ ಲಕ್ಷ್ಮಿನಾರಾಯಣನ್ ಅವರು ಮುಖ್ಯ ಕಾರ್ಯದರ್ಶಿಯಾಗಿರಲಿ, ಕಸ ಗುಡಿಸುವವರಾಗಿರಲಿ ಅಥವಾ ಕೆಳ ಹಂತದ ಕೆಲಸಗಾರರಾಗಿರಲಿ, ಅವರು ಲೈಂಗಿಕ ಕಿರುಕುಳದಿಂದ ರಕ್ಷಣೆ ಪಡೆಯಲು ಅರ್ಹರು ಎಂದು ತಿಳಿಸಿದರು. ಮತ್ತು ಯಾರನ್ನೂ ರಕ್ಷಿಸಬೇಡಿ ಎಂದು ಹೇಳಿದ ಅವರು ನ. 27ಕ್ಕೆ ವಿಚಾರಣೆ ಮುಂದೂಡಿದ್ದಾರೆ (ಏಜೆನ್ಸೀಸ್).