ಸಾಂದರ್ಭಿಕ ಚಿತ್ರ 
ದೇಶ

ಇಂದು ಸ್ವಿಗ್ಗಿ, ಜೊಮ್ಯಾಟೋ, ಜೆಪ್ಟೋ, ಬ್ಲಿಂಕಿಟ್ ಸೇವೆಯಲ್ಲಿ ವ್ಯತ್ಯಯ!; ದೇಶಾದ್ಯಂತ ಗಿಗ್​ ಕಾರ್ಮಿಕರಿಂದ ಮುಷ್ಕರಕ್ಕೆ ಕರೆ | Gig workers

ನವದೆಹಲಿ: ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಅಮೆಜಾನ್, ಜೊಮಾಟೊ, ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಆಹಾರ ವಿತರಣಾ ಮತ್ತು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ವಿತರಣಾ ಕಾರ್ಮಿಕರು(Gig workers) ಇಂದು(ಡಿ. 31) ದೇಶಾದ್ಯಂತ ಮುಷ್ಕರವನ್ನು ಘೋಷಿಸಿದ್ದು, ಆನ್​ಲೈನ್ ಆರ್ಡರ್​​ಗಳ ವಿತರಣಾ ಸೇವೆಯಲ್ಲಿ ವ್ಯತ್ಯಯವಾಗಬಹುದು.
ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಮತ್ತು ಇಂಡಿಯನ್ ಫೆಡರೇಶನ್ ಆಫ್ ಆಪ್-ಆಧಾರಿತ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಇಂದು ಮುಷ್ಕರವನ್ನು ಘೋಷಿಸಿವೆ. ದೇಶದ ಮೆಟ್ರೋ ನಗರಗಳು ಮತ್ತು ಪ್ರಮುಖ ಎರಡನೇ ಶ್ರೇಣಿಯ ನಗರಗಳ ಗಿಗ್ ಕಾರ್ಮಿಕರು ಇದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಗುರುವಾರ ಕ್ರಿಸ್​ಮಸ್ ಹಬ್ಬದ ದಿನದಂದು ಗಿಗ್ ಕಾರ್ಮಿಕರು ಔಪಚಾರಿಕವಾಗಿ ಮುಷ್ಕರ ನಡೆಸಿದ್ದರು. ದೆಹಲಿ, ಗುರುಗ್ರಾಮ್, ಮುಂಬೈ, ತಿರುವನಂತಪುರಂ, ಪಣಜಿ ಮತ್ತು ಇತರ ನಗರಗಳಲ್ಲಿ ಎಫೆಕ್ಟ್​ ಬಿದ್ದಿತ್ತು. ಪ್ರಮುಖವಾಗಿ 10 ನಿಮಿಷಗಳ ವಿತರಣಾ ಆಯ್ಕೆಗಳನ್ನು ತೆಗೆದುಹಾಕಬೇಕು ಮತ್ತು ಹಿಂದಿನ ಪಾವತಿ ರಚನೆಗಳನ್ನು ಪುನಃಸ್ಥಾಪಿಸಲು ಒತ್ತಾಯಿಸಿ ಗಿಗ್ ಕಾರ್ಮಿಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದು ದೇಶಾದ್ಯಂತ ಮುಷ್ಕರ ನಡೆಯಲಿದೆ ಎನ್ನಲಾಗಿದೆ.
ಈ ಕುರಿತು ಎಎನ್​ಐ ಜೊತೆ ಮಾತನಾಡಿರುವ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಶೇಕ್ ಸಲಾವುದ್ದೀನ್, 10 ನಿಮಿಷಗಳ ವೇಗದ ವಿತರಣಾ ಮಾದರಿಯು ಕಾರ್ಮಿಕರ ಮೇಲೆ ಅಸುರಕ್ಷಿತ ಒತ್ತಡವನ್ನು ಹೇರುತ್ತಿದೆ. ಜೊತೆಗೆ ಅದು ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಕಾರ್ಮಿಕರಿಗೆ ಕಡಿಮೆ ಆದಾಯ ನೀಡುತ್ತಿದೆ. ದೇಶಾದ್ಯಂತ ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಪೀಕ್ ಸಮಯದಲ್ಲಿ ವಿತರಣಾ ಸೇವೆಗಳಿಗೆ ಅಡ್ಡಿಯಾಗಬಹುದು ಎಂದು ತಿಳಿಸಿದ್ದಾರೆ.
ಎಲ್ಲಾ ಡೆಲಿವರಿಗೆ ಆ್ಯಪ್ ಕಂಪನಿಗಳು ನಮಗೆ ಈ ಹಿಂದೆ ನೀಡುತ್ತಿದ್ದ ಪಾವತಿ ವ್ಯವಸ್ಥೆ ಜೊತೆ 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆದು ಹಾಕಬೇಕು. ಈ ಕುರಿತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).