ಅಮಿತ್ ಶಾ 
ದೇಶ

ಈಶಾನ್ಯ ಸಂಸ್ಕೃತಿಗೆ ಅಗೌರವ ತೋರಿಸಲು ಬಿಡಲ್ಲ; ರಾಹುಲ್ ಗಾಂಧಿ ಅಸ್ಸಾಂ ಗಮೋಸಾ ಹಾಕದಿದ್ದಕ್ಕೆ ಅಮಿತ್ ಶಾ ಆಕ್ರೋಶ | Amit Shah

ಗುವಾಹಟಿ: ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ಆಯೋಜಿಸಿದ್ದ ಔತಣಕೂಟದಲ್ಲಿ ಸ್ವಾಗತದ ಗೌರವವಾಗಿ ಉಡುಗೊರೆ ನೀಡಿದ್ದಅಸ್ಸಾಂ ಗಮೋಸಾವನ್ನು ಹಾಕದಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ದಿಬ್ರುಗಢದಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ಆಯೋಜಿಸಿದ್ದ 'ಆಟ್ ಹೋಮ್' ಸ್ವಾಗತ ಸಮಾರಂಭದಲ್ಲಿ ಅವರು ಉಡುಗೊರೆಯಾಗಿ ನೀಡಿದ ಗಮೋಸಾ ಧರಿಸಲು ನಿರಾಕರಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಶಾನ್ಯಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಏನು ಬೇಕಾದರೂ ಮಾಡಬಹುದು, ಆದರೆ ಬಿಜೆಪಿ ಅಧಿಕಾರದಲ್ಲಿರುವವರೆಗೂ ಈಶಾನ್ಯ ಭಾರತದ ಸಂಸ್ಕೃತಿಗೆ ಯಾವುದೇ ಅಗೌರವ ತೋರಲು ಬಿಡುವುದಿಲ್ಲ. ಅಸ್ಸಾಂ ಅಭಿವೃದ್ಧಿಗೆ ಕಾಂಗ್ರೆಸ್ ಯಾವುದೇ ಕೊಡುಗೆಯನ್ನು ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್​ ಅಸ್ಸಾಂಗೆ ನೀಡಿದ್ದು ಏನೆಂದರೆ, ಬಂದೂಕುಗಳು, ಗುಂಡುಗಳು, ಸಂಘರ್ಷ ಹಾಗೂ ಯುವಕರ ಸಾವುಗಳನ್ನು ಹೊರತುಪಡಿಸಿ ಇನ್ನೇನು ನೀಡಿದೆ. ಅದು ಒಳನುಸುಳುವಿಕೆಯನ್ನು ತನ್ನ ಮತ ಬ್ಯಾಂಕ್ ರಾಜಕೀಯಕ್ಕಾಗಿ ಅಸ್ತ್ರವಾಗಿ ಬಳಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಸ್ಸಾಂನಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ. ಅಕ್ರಮವಾಗಿ ಭಾರತಕ್ಕೆ ಬಂದವರನ್ನು ಗುರುತಿಸಿ ವಾಪಸ್ ಕಳುಹಿಸಲಾಗುವುದು ಎಂದಿದ್ದಾರೆ (ಏಜೆನ್ಸೀಸ್).