ಅನಂತ್ ಸಿಂಗ್ ಪುತ್ರಿಯ ಮದುವೆಯಲ್ಲಿ ಅವ್ಯವಸ್ಥೆ WEB
ದೇಶ

ಶಾಸಕನ ಮಗಳ ಮದುವೆಯಲ್ಲಿ ಊಟಕ್ಕಾಗಿ ತಳ್ಳಾಟ-ನೂಕಾಟ! ನೆಟ್ಟಿಗರು ಕಿಡಿ| Viral Video

ಅದ್ಧೂರಿ ಮದುವೆ, ಐಷಾರಾಮಿ ಉಡುಗೊರೆ, ಭರ್ಜರಿ ಭೋಜನ... ಹೀಗೆ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದ ಮದುವೆಯೊಂದು ಇದೀಗ ಮತ್ತೊಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮದುವೆಯ ಊಟದ ಕೌಂಟರ್‌ಗಳ ಮುಂದೆ ಜನರು ಮುಗಿಬಿದ್ದು, ಒಬ್ಬರನ್ನೊಬ್ಬರು ತಳ್ಳಿಕೊಂಡು ಆಹಾರ ಪಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ಸಾರ್ವಜನಿಕ ಸ್ಥಳಗಳಲ್ಲಿ ಜನರ ವರ್ತನೆ, ತಾಳ್ಮೆ ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.Viral Video

ಬಿಹಾರ: ಅದ್ಧೂರಿ ಮದುವೆ, ಐಷಾರಾಮಿ ಉಡುಗೊರೆ, ಭರ್ಜರಿ ಭೋಜನ... ಹೀಗೆ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದ ಮದುವೆಯೊಂದು ಇದೀಗ ಮತ್ತೊಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮದುವೆಯ ಊಟದ ಕೌಂಟರ್‌ಗಳ ಮುಂದೆ ಜನರು ಮುಗಿಬಿದ್ದು, ಒಬ್ಬರನ್ನೊಬ್ಬರು ತಳ್ಳಿಕೊಂಡು ಆಹಾರ ಪಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ಸಾರ್ವಜನಿಕ ಸ್ಥಳಗಳಲ್ಲಿ ಜನರ ವರ್ತನೆ, ತಾಳ್ಮೆ ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಐದು ಹೆಲಿಪ್ಯಾಡ್‌ಗಳ ವ್ಯವಸ್ಥೆ, ನಾಲ್ಕು ಲಕ್ಷ ಅತಿಥಿಗಳಿಗೆ ಆಹ್ವಾನ

ಬಿಹಾರದ ರಾಜಕಾರಣಿ ಅನಂತ್ ಸಿಂಗ್ ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ನವೆಂಬರ್ 25ರಂದು ಪಾಟ್ನಾ ಜಿಲ್ಲೆಯ ನದ್ವಾನ್‌ನಲ್ಲಿರುವ ಅವರ ಪೂರ್ವಜರ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಿಷಿಕೇಶ್ ಕುಮಾರ್ ಅಲಿಯಾಸ್ ಅಂಕಿತ್ ಅವರೊಂದಿಗೆ ಶಿವಾಂಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಮದುವೆಗೆ ಸುಮಾರು ನಾಲ್ಕು ಲಕ್ಷ ಅತಿಥಿಗಳು ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ವ್ಯವಸ್ಥೆ ಮಾಡಲಾಗಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅತಿಥಿಗಳ ಅನುಕೂಲಕ್ಕಾಗಿ ಐದು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ. ಮದುವೆಯ ಭೋಜನದಲ್ಲಿ ಬಿಹಾರದ ಪ್ರಸಿದ್ಧ ಲಿಟ್ಟಿ ಚೋಖಾ, ಸಿಲಾವೋ ಖಾಜಾ ಸೇರಿದಂತೆ ದೋಸೆ, ಇಡ್ಲಿ, ಪಿಜ್ಜಾ, ಪಾಸ್ತಾ, ಬರ್ಗರ್, ನೂಡಲ್ಸ್ ಹಾಗೂ ಆಲೂ ಟಿಕ್ಕಿಯಂತಹ 150ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ಕುದುರೆ ಓಟದ ಸ್ಪರ್ಧೆ, ಗೆದ್ದವರಿಗೆ ಮಹೀಂದ್ರಾ ಥಾರ್

ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಕುದುರೆ ಓಟದ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಹೀಂದ್ರಾ ಥಾರ್ ಕಾರನ್ನು ಬಹುಮಾನವಾಗಿ ಘೋಷಿಸಲಾಗಿತ್ತು. ಎರಡನೇ ಮತ್ತು ಮೂರನೇ ಸ್ಥಾನ ಪಡೆದವರಿಗೆ ಬೈಕ್ ಹಾಗೂ ಸ್ಕೂಟರ್ ನೀಡಲು ನಿರ್ಧರಿಸಲಾಗಿತ್ತು ಎಂದು ವರದಿಯಾಗಿದೆ.ಇನ್ನು ಮದುವೆಗೂ ಮುನ್ನ ನಡೆದ ತಿಲಕ ಸಮಾರಂಭದಲ್ಲಿ ವರ ರಿಷಿಕೇಶ್ ಕುಮಾರ್ ಅವರಿಗೆ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಬಿಳಿ ಬಣ್ಣದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗಿದೆ.

ಊಟಕ್ಕಾಗಿ ಮುಗಿಬಿದ್ದ ಜನರ ವಿಡಿಯೋ ವೈರಲ್

ಇಷ್ಟೆಲ್ಲ ಅದ್ಧೂರಿ ವ್ಯವಸ್ಥೆಗಳ ನಡುವೆ ಊಟದ ಕೌಂಟರ್‌ಗಳ ಬಳಿ ಜನರು ಮುಗಿಬಿದ್ದಿರುವ ವಿಡಿಯೋ ಇದೀಗ ಚರ್ಚೆಯ ಕೇಂದ್ರವಾಗಿದೆ. ಆಹಾರ ವಿತರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಜನರು ತಾಳ್ಮೆ ಕಳೆದುಕೊಂಡು ಒಬ್ಬರನ್ನೊಬ್ಬರು ತಳ್ಳಿಕೊಂಡು ಆಹಾರ ಪಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ದೃಶ್ಯಗಳನ್ನು ಹಂಚಿಕೊಂಡಿರುವ ಅನೇಕರು ಜನರ ವರ್ತನೆಯನ್ನು ಟೀಕಿಸಿದ್ದಾರೆ. ಕೆಲವರು ಇಂದಿನ ದಿನಗಳಲ್ಲಿ ಜನರು ಮೂಲಭೂತ ಶಿಷ್ಟಾಚಾರ ಮತ್ತು ನಾಗರಿಕ ಪ್ರಜ್ಞೆಯನ್ನು ಮರೆತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಬೈಲ್‌ನಲ್ಲಿ ಅತಿಯಾದ ಕಿರು ವಿಡಿಯೋಗಳನ್ನು ನೋಡುವ ಅಭ್ಯಾಸದಿಂದ ಜನರ ತಾಳ್ಮೆ ಕಡಿಮೆಯಾಗುತ್ತಿದೆ. ತಮ್ಮ ಸರದಿಗಾಗಿ ಕಾಯುವ ಸಹನೆ ಇಲ್ಲದಂತಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, ಇಂತಹ ವರ್ತನೆ ಕೇವಲ ಉಚಿತವಾಗಿ ಊಟ ಪಡೆಯಲು ಬರುವವರಲ್ಲಿ ಮಾತ್ರ ಕಾಣಿಸುವುದಿಲ್ಲ. ದುಬಾರಿ ಹೋಟೆಲ್‌ಗಳು ಮತ್ತು ಬಫೆ ವ್ಯವಸ್ಥೆಗಳಲ್ಲಿಯೂ ಕೆಲವರು ಇದೇ ರೀತಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ. ಒಂದು ಅದ್ಧೂರಿ ಮದುವೆಯ ಸಂಭ್ರಮದ ನಡುವೆ ವೈರಲ್ ಆದ ಈ ವಿಡಿಯೋ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು, ತಾಳ್ಮೆ ಮತ್ತು ಇತರರ ಬಗ್ಗೆ ಗೌರವ ಹೊಂದಿರುವುದು ಎಷ್ಟು ಮುಖ್ಯ ಎಂಬ ಚರ್ಚೆಗೆ ಕಾರಣವಾಗಿದೆ.