TMC List | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Vs ವಿಪಕ್ಷ ನಾಯಕ ಸುವೇಂದು ಅಧಿಕಾರಿ
TMC List: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೆ ಖೇಲಾ ಹೋಬೆ (ಆಟ ಶುರು) ಘೋಷಣೆ ಮೊಳಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯಾದ ಭಬಾನಿಪುರದಿಂದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಟಿಕೆಟ್ ಘೋಷಣೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಸಿಎಂ ದೀದಿ, ಎರಡು ಹಂತಗಳಲ್ಲಿ (ಏಪ್ರಿಲ್ 23 ಮತ್ತು 29) ಚುನಾವಣೆ ನಡೆಯಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಆಯೋಗವು ಪಕ್ಷದ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ. ಅಧಿಕಾರಿಗಳ ವರ್ಗಾವಣೆ ಮೂಲಕ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ಇದು ದೆಹಲಿ ಲಾಡು ಮತ್ತು ಬಂಗಾಳದ ಅಸ್ತಿತ್ವದ ನಡುವಿನ ಹೋರಾಟ ಎಂದು ಗುಡುಗಿದ್ದಾರೆ.
ಭಬಾನಿಪುರದಲ್ಲಿ ಜಿದ್ದಾಜಿದ್ದಿನ ಕದನ
ಒಂದು ಕಾಲದಲ್ಲಿ ಮಮತಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ, 2021ರಲ್ಲಿ ನಂದಿಗ್ರಾಮದಲ್ಲಿ ಬಿಜೆಪಿಯಿಂದ ಅವರ ವಿರುದ್ಧವೇ ಸ್ಪರ್ಧಿಸಿ ದೀದಿಗೆ ಸೋಲಿಸಿ ರುಚಿ ತೋರಿಸಿದ್ದರು. ಈಗ ಕೇಸರಿ ಪಾಳಯ ಸುವೇಂದುರನ್ನು ಮಮತಾರ ತವರು ಕ್ಷೇತ್ರವಾದ ಭಬಾನಿಪುರಕ್ಕೇ ಕರೆತಂದಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿರುವುದು ಬಿಜೆಪಿಗೆ ಆನೆ ಬಲ ತಂದಿದೆ.
ಟಿಎಂಸಿ ಪಟ್ಟಿಯಲ್ಲಿ ಬರೀ ಹೊಸ ಮುಖಗಳು
ಮಮತಾ ಬ್ಯಾನರ್ಜಿ 294 ಸ್ಥಾನಗಳ ಪೈಕಿ 291 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಬರೋಬ್ಬರಿ 74 ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಪಕ್ಷವು ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದು, 53 ಮಹಿಳೆಯರು, 95 ಎಸ್‌ಸಿ/ಎಸ್‌ಟಿ ಸದಸ್ಯರು ಹಾಗೂ 48 ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದೆ.
ಸಂದೇಶಖಾಲಿ: ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪದಿಂದ ಸುದ್ದಿಯಾಗಿದ್ದ ಸಂದೇಶಖಾಲಿಯಲ್ಲಿ ಜರ್ನಾ ಸರ್ದಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ತಾರಾ ನಟರ ದಂಡು: ನಿರ್ದೇಶಕ ರಾಜ್ ಚಕ್ರವರ್ತಿ (ಬ್ಯಾರಕ್‌ಪುರ), ನಟ ಸೋಹಮ್ ಚಕ್ರವರ್ತಿ (ಕರಿಂಪುರ), ನಟಿ ಸಯಂತಿಕಾ ಬ್ಯಾನರ್ಜಿ (ಬಾರಾನಗರ) ಮತ್ತು ಗಾಯಕಿ ಅದಿತಿ ಮುನ್ಶಿ ಅವರಿಗೆ ಟಿಕೆಟ್ ನೀಡುವ ಮೂಲಕ ಗ್ಲಾಮರ್ ಟಚ್ ನೀಡಲಾಗಿದೆ.
ಬಿಜೆಪಿಗೆ ಟಾಂಗ್
ಸುವೇಂದು ಕ್ಷೇತ್ರವಾದ ನಂದಿಗ್ರಾಮದಲ್ಲಿ ಟಿಎಂಸಿ ಮಾಜಿ ಪಂಚಾಯತ್ ಮುಖ್ಯಸ್ಥ ಪಬಿತ್ರ ಕರ್ರನ್ನು ಕಣಕ್ಕಿಳಿಸಿದ್ದು, ಕುತೂಹಲಕಾರಿ ವಿಷಯವೆಂದರೆ, ಅಭ್ಯರ್ಥಿ ಘೋಷಣೆಯಾದ ಕೆಲವೇ ನಿಮಿಷಗಳ ಮೊದಲು ಕರ್ ಬಿಜೆಪಿಯಿಂದ ಟಿಎಂಸಿಗೆ ಮರಳಿ ಸೇರ್ಪಡೆಯಾಗಿದ್ದರು(ಏಜೆನ್ಸೀಸ್).