ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್ ಮನೆ ಮೇಲೆ ಗುಂಡಿನ ದಾಳಿ
- ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್ ಮನೆ ಮೇಲೆ ಗುಂಡಿನ ದಾಳಿ
- ಶೂಟೌಟ್ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್
- ದಿಲ್ಜಿತ್ ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ಈ ದಾಳಿ ಎಂದ ಸಿಎಂ ಮಾನ್
ಪಂಜಾಬ್: ಖ್ಯಾತ ಪಂಜಾಬಿ ಗಾಯಕ ಹಾಗೂ ಬಾಲಿವುಡ್ ನಟ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ಮ್ಯಾನೇಜರ್ ಗುರುಪ್ರತಾಪ್ ಸಿಂಗ್ ಕಾಂಗ್ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.
ತಮ್ಮ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ಗುರುಪ್ರತಾಪ್ ಸಿಂಗ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ತನಿಖೆ ನಡೆಸುತ್ತಿದ್ದಾಗಿ ಹರಿಯಾಣಾ ಪೊಲೀಸರು ತಿಳಿಸಿದ್ದಾರೆ.
ದಿಲ್ಜಿತ್ ಬಿಜೆಪಿ ಸೇರದ ಕಾರಣ ದಾಳಿ: ಪಂಜಾಬ್ ಸಿಎಂ
ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್ ಮನೆ ಮೇಲೆ ನಡೆದಿರುವ ದಾಳಿಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದಿಲ್ಜಿತ್ಗೆ ಬಿಜೆಪಿ ಪಕ್ಷಕ್ಕೆ ಸೇರುವಂತೆ ಬಹಳ ಒತ್ತಡ ಹಾಕಲಾಗುತ್ತಿತ್ತು, ಅದಕ್ಕೆ ಆತ ಒಪ್ಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವುದು ನನ್ನ ಅನುಮಾನ ಎಂದಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ನಟ ವಿಜಯ್ ಸಿಎಂ ಆಗಿರುವುದನ್ನು ನೋಡಿರುವ ಬಿಜೆಪಿ ಮುಂಬರುವ ಪಂಜಾಬ್ ಚುನಾವಣೆಯಲ್ಲಿ ದಿಲ್ಜಿತ್ ದೋಸಾಂಜ್ ಅವರನ್ನು ತಮ್ಮ ಪಕ್ಷಕ್ಕೆ ಕರದುಕೊಂಡರೆ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದೆ. ಆದರೆ ಅದಕ್ಕೆ ಅವರು ಒಪ್ಪಿಗೆ ಸೂಚಿಸದೆ, ನಾನು ಸಿನಿಮಾದಲ್ಲಿಯೇ ಮುಂದುವರಿಯುತ್ತೆನೆಂದು ಹೇಳಿರುವ ಕಾರಣ ಈ ಕೃತ್ಯವನ್ನು ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಷ್ಣೋಯ್ಗೆ ಬಿಜೆಪಿಯೇ ಬೆಂಬಲ!
ಈ ದಾಳಿಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಚಿವ ಹರ್ಪಾಲ್ ಸಿಂಗ್ ಚೀಮಾ, ಈ ಲಾರೆನ್ಸ್ ಬಿಷ್ಣೋಯ್ಗೆ ಬಿಜೆಪಿಯೇ ಬೆಂಬಲ ನೀಡುತ್ತಿದೆ. ಅವನು ಗುಜರಾತಿನ ಜೈಲಿನಲ್ಲಿ ಇದ್ದುಕೊಂಡೆ ಈಡೀ ದೇಶದಲ್ಲಿರುವ ಖ್ಯಾತನಾಮರಿಗೆ ಬೆದರಿಕೆ ಹಾಕುತ್ತಿದ್ದರೆ, ಕೇಂದ್ರ ಸರ್ಕಾರ ಹಾಗೂ ಗುಜರಾತ್ ಸರ್ಕಾರ ಏನು ಮಾಡುತ್ತಿದೆ? ಎಂದು ಚೀಮಾ ಪ್ರಶ್ನಿಸಿದ್ದಾರೆ, (ಏಜನ್ಸೀಸ್).