ಬಂಗಾಳ ಸೋಲಿನ ಬೆನ್ನಲ್ಲೇ ದೀದಿ ಇವಿಎಂ ಹ್ಯಾಕಿಂಗ್ ರಾಗ! 60 ಲಕ್ಷ ವೋಟರ್ಸ್ ಹೆಸರು ಡಿಲೀಟ್, ನನ್ನನ್ನೇ ಕೌಂಟಿಂಗ್ ಸೆಂಟರ್‌ನಿಂದ ತಳ್ಳಿದ್ರು! ಮಮತಾ ಕಣ್ಣೀರು!  
ದೇಶ

ಬಂಗಾಳ ಸೋಲಿನ ಬೆನ್ನಲ್ಲೇ ದೀದಿ ಇವಿಎಂ ಹ್ಯಾಕಿಂಗ್ ರಾಗ! 60 ಲಕ್ಷ ವೋಟರ್ಸ್ ಹೆಸರು ಡಿಲೀಟ್, ನನ್ನನ್ನೇ ಕೌಂಟಿಂಗ್ ಸೆಂಟರ್‌ನಿಂದ ತಳ್ಳಿದ್ರು! ಮಮತಾ ಕಣ್ಣೀರು! Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಐತಿಹಾಸಿಕ ಸೋಲಿನ ಆಘಾತದಿಂದ ತೃಣಮೂಲ ಕಾಂಗ್ರೆಸ್ ಇನ್ನೂ ಹೊರಬಂದಂತಿಲ್ಲ. ಬಂಗಾಳದಲ್ಲಿ ಇವಿಎಂ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ, ಸಾರ್ವಜನಿಕರ ಮತಗಳನ್ನು ಲೂಟಿ ಮಾಡಿ ಬಿಜೆಪಿಯನ್ನು ಗೆಲ್ಲಿಸಲಾಗಿದೆ ಎಂದು ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದಾರೆ.
ಈ ಬಗ್ಗೆ ಭಾನುವಾರ (ಮೇ, 24) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ 32 ನಿಮಿಷಗಳ ಸುದೀರ್ಘ ವಿಡಿಯೋ ಪ್ರಕಟಿಸಿರುವ ಮಾಜಿ ಮುಖ್ಯಮಂತ್ರಿ ಮಮತಾ, ಭಾರತೀಯ ಜನತಾ ಪಾರ್ಟಿ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ. ಅಲ್ಲದೆ, ಇದೇ ವೇಳೆ, ಕೋಲ್ಕತ್ತಾದ ಪ್ರಸಿದ್ಧ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿದ್ದ ಫುಟ್‌ಬಾಲ್ ಆಧಾರಿತ ಐತಿಹಾಸಿಕ ಕಲಾಕೃತಿಯನ್ನು ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರ ಧ್ವಂಸಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

60 ಲಕ್ಷ ಹೆಸರುಗಳ ಡಿಲೀಟ್, ಕೌಂಟಿಂಗ್ ಸೆಂಟರ್‌ನಲ್ಲಿ ಅಕ್ರಮ! ಮಮತಾ ಗಂಭೀರ ಆರೋಪ

ತಮ್ಮ ವಿಡಿಯೋ ಭಾಷಣದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ನೇರ ದಾಳಿ ನಡೆಸಿರುವ ದೀದಿ, ಬಿಜೆಪಿಗೆ ಅನುಕೂಲ ಮಾಡಿಕೊಡಲು ಎಸ್‌ಐಆರ್ ನೆಪದಲ್ಲಿ ಬಂಗಾಳದ ಬರೋಬ್ಬರಿ 60 ಲಕ್ಷ ಸಿಂಧು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಮೇ 4 ರಂದು ನಡೆದ ಮತ ಎಣಿಕೆಯ ದಿನದಂದು ಕೌಂಟಿಂಗ್ ಏಜೆಂಟರ ಸೋಗಿನಲ್ಲಿ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ವೇಷದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮತ ಎಣಿಕೆ ಕೇಂದ್ರಗಳ ಒಳಗೆ ನುಗ್ಗಿದ್ದರು. ಭವಾನಿಪುರ ಕ್ಷೇತ್ರದಲ್ಲಿ ನಾನು ಮುನ್ನಡೆಯಲ್ಲಿದ್ದೆ. ಆದರೆ ಅಲ್ಲಿಯೂ ಮತಗಳನ್ನು ಲೂಟಿ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಯಿತು. ಮತ ಎಣಿಕೆ ಕೇಂದ್ರದಲ್ಲಿ ಅಕ್ರಮವನ್ನು ಪ್ರಶ್ನಿಸಿದ ನನ್ನನ್ನೇ ಅಲ್ಲಿಂದ ಬಲವಂತವಾಗಿ ಹೊರದೂಡಲಾಯಿತು ಎಂದು ದೀದಿ ಆರೋಪಿಸಿದ್ದಾರೆ.
ಪೊಲೀಸರು ಶೋಷಕರಾಗಿದ್ದಾರೆ, ಟಿಎಂಸಿ ಕಚೇರಿಗಳ ಮೇಲೆ ದಾಳಿ"
ಬಂಗಾಳದ ಸದ್ಯದ ಕಾನೂನು ಸುವ್ಯವಸ್ಥೆಯ ಕುರಿತು ಆತಂಕ ವ್ಯಕ್ತಪಡಿಸಿದ ಮಮತಾ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಂಗಾಳದ ಜನ ನೆಮ್ಮದಿಯಿಂದ ಇಲ್ಲ. ನಮ್ಮ ತೃಣಮೂಲ ಕಾಂಗ್ರೆಸ್ ಕಚೇರಿಗಳನ್ನು ಲೂಟಿ ಮಾಡಲಾಗುತ್ತಿದೆ. ಅಲ್ಲದೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಸಾರ್ವಜನಿಕರನ್ನು ರಕ್ಷಿಸಬೇಕಾದ ಪೊಲೀಸರು, ಈಗ ಬಿಜೆಪಿ ಹೈಕಮಾಂಡ್‌ನ ಆದೇಶದ ಮೇರೆಗೆ ಶೋಷಕರಂತೆ ವರ್ತಿಸುತ್ತಿದ್ದಾರೆ. ಪ್ರತಿದಿನ ನಮ್ಮ ಟಿಎಂಸಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ. ನಮಗೆ ಕನಿಷ್ಠ ಪಕ್ಷ ಸಭೆ-ಸಮಾರಂಭಗಳನ್ನು ನಡೆಸಲು ಆಸ್ಪದ ನೀಡುತ್ತಿಲ್ಲ. ಇನ್ನು ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿ ಆರಂಭವಾಗಿದ್ದು, ಬಡ ಜನರನ್ನು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವಂತೆ ಮಾಡಲಾಗಿದೆ ಎಂದು ಸಿಎಂ ಸುವೇಂದು ಅವರ ಹೆಸರೆತ್ತದೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಫಿಫಾ ಪ್ರಶಂಸಿಸಿದ್ದ ಸಾಲ್ಟ್ ಲೇಕ್ ಕ್ರೀಡಾಂಗಣದ ಕಲಾಕೃತಿ ಧ್ವಂಸಕ್ಕೆ ಆಕ್ರೋಶ!

ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿದ್ದ, ಸ್ವತಃ ಮಮತಾ ಬ್ಯಾನರ್ಜಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದ ಫುಟ್‌ಬಾಲ್ ಥೀಮ್‌ನ ಬೃಹತ್ ಕಲಾಕೃತಿಯನ್ನು ಇತ್ತೀಚೆಗೆ ಕೆಡವಿರುವುದಕ್ಕೆ ದೀದಿ ತೀವ್ರ ಕಣ್ಣೀರು ಹಾಕಿದ್ದಾರೆ. ಆ ಕಲಾಕೃತಿಯು ಕ್ರೀಡಾ ಪ್ರೇಮಿಗಳ ನೆಚ್ಚಿನ ತಾಣವಾಗಿತ್ತು, ಅಲ್ಲಿಗೆ ಬಂದು ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಸ್ವತಃ ಜಾಗತಿಕ ಫುಟ್‌ಬಾಲ್ ಸಂಸ್ಥೆ 'ಫಿಫಾ' ಕೂಡ ಆ ರಚನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿತ್ತು. ಆದರೆ ಬಿಜೆಪಿ ನಾಯಕರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಹಪಾಹಪಿಗೆ ಬಿದ್ದು ಆ ಸುಂದರ ಕಲಾಕೃತಿಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ದೀದಿ, ನಮ್ಮ ಆಡಳಿತಾವಧಿಯಲ್ಲಿ ನಾವು ಎಂದಿಗೂ ಸ್ಟಾಲಿನ್, ಶ್ಯಾಮಪ್ರಸಾದ್ ಮುಖರ್ಜಿ ಅಥವಾ ಚರ್ಚಿಲ್ ಅವರಂತಹ ನಾಯಕರ ಸದ್ಧಾಂತಗಳನ್ನು ಒಪ್ಪದಿದ್ದರೂ, ಅವರ ಯಾವುದೇ ಮೂರ್ತಿಗಳನ್ನಾಗಲಿ, ಸ್ಮಾರಕಗಳನ್ನಾಗಲಿ ಧ್ವಂಸಗೊಳಿಸುವ ಕೀಳು ರಾಜಕೀಯ ಮಾಡಿರಲಿಲ್ಲ. ಆದರೆ ಇವರಿಗೆ ಕಾನೂನಿನ ಮೇಲೂ ಗೌರವವಿಲ್ಲ, ಜನರ ಮೇಲೂ ಮರ್ಯಾದೆಯಿಲ್ಲ. ಇವರಿಗೆ ಕೇವಲ ವಿನಾಶ ಮಾಡುವುದಷ್ಟೇ ಗೊತ್ತು ಎಂದರು. ಅಲ್ಲದೆ, ಸರ್ಕಾರಿ ನೌಕರರಿಗೆ ಡಿಎ ನೀಡುವುದಾಗಿ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಮೇಲೂ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾದ ನಂತರವೂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ಸರ್ಕಾರದ ನಡುವಿನ ಈ ರಾಜಕೀಯ ಸಂಘರ್ಷ ಮತ್ತು ಆರೋಪ-ಪ್ರತ್ಯಾರೋಪಗಳು ಬಂಗಾಳದ ಅಖಾಡದಲ್ಲಿ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ,(ಏಜೆನ್ಸೀಸ್).