8 ಸಾವಿರ ರೂ. ಸಿಗುತ್ತೆ ಅಂತ ಪ್ರಧಾನಿ ಮೋದಿ ಹೆಸರಲ್ಲಿ ಮೆಸೇಜ್ ಬಂದಿದೆಯೇ? ಎಚ್ಚರ ಲಿಂಕ್ ಕ್ಲಿಕ್ ಮಾಡಿದ್ರೆ ಅಕೌಂಟ್ ಖಾಲಿ! 
ದೇಶ

8 ಸಾವಿರ ರೂ. ಸಿಗುತ್ತೆ ಅಂತ ಪ್ರಧಾನಿ ಮೋದಿ ಹೆಸರಲ್ಲಿ ಮೆಸೇಜ್ ಬಂದಿದೆಯೇ? ಎಚ್ಚರ ಲಿಂಕ್ ಕ್ಲಿಕ್ ಮಾಡಿದ್ರೆ ಅಕೌಂಟ್ ಖಾಲಿ! Diwali Bonus

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿದ್ದಂತೆ ಹೊಸ ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಹಾಗೂ ಹಬ್ಬದ ಸಂಭ್ರಮದಲ್ಲಿರುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಸೈಬರ್ ಕಳ್ಳರು ವಂಚನೆಯ ಜಾಲ ( Diwali Bonus ) ಬೀಸಿದ್ದಾರೆ. ಈ ವಂಚನೆಗೆ ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಳಸಿಕೊಂಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ಪ್ರಧಾನಮಂತ್ರಿಗಳ ಹೆಸರಿನಲ್ಲಿ ಪ್ರತಿಯೊಬ್ಬರಿಗೂ 8,000 ರೂ. ಉಚಿತ ದೀಪಾವಳಿ ಬೋನಸ್ ನೀಡಲಾಗುತ್ತಿದೆ ಎಂಬ ಸಂದೇಶವೊಂದು ವಾಟ್ಸ್​ಆ್ಯಪ್​ ಗ್ರೂಪ್‌ಗಳಲ್ಲಿ ಹರಿಬಿಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಕರ್ಷಕ ಆಫರ್‌ನಂತೆ ಕಾಣುವ ಈ ಸಂದೇಶದ ಹಿಂದಿರುವುದು ಸೈಬರ್ ಕ್ರಿಮಿನಲ್‌ಗಳ ಬೃಹತ್ ಸಂಚು. ಒಂದು ವೇಳೆ ನಿಮಗೂ ಇಂತಹ ಮೆಸೇಜ್ ಬಂದಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ, ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಕಷ್ಟಪಟ್ಟು ಸಂಪಾದಿಸಿದ ಹಣವೆಲ್ಲ ಕ್ಷಣಾರ್ಧದಲ್ಲಿ ಖಾಲಿಯಾಗುವುದು ಖಚಿತ.

ವೈರಲ್ ಆಗುತ್ತಿರುವ ಈ ವಾಟ್ಸ್​ಆ್ಯಪ್​ ಮೆಸೇಜ್‌ನಲ್ಲಿ ಕೇಂದ್ರ ಸರ್ಕಾರ ಅಥವಾ ಪ್ರಧಾನಮಂತ್ರಿಯವರು ದೇಶದ ಪ್ರಜೆಗಳಿಗೆ ದೀಪಾವಳಿ ಕೊಡುಗೆಯಾಗಿ ಎಂಟು ಸಾವಿರ ರೂಪಾಯಿಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಹರಿಬಿಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿವರಗಳನ್ನು ಭರ್ತಿ ಮಾಡಿದರೆ ಸಾಕು, ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ಜನರನ್ನು ನಂಬಿಸಲಾಗುತ್ತಿದೆ. ಆದರೆ, ಇದರ ನಿಜವಾದ ಸತ್ಯವೇ ಬೇರೆಯಾಗಿದೆ.

ಭಾರತ ಸರ್ಕಾರದ ಅಧಿಕೃತ ಸತ್ಯ ಶೋಧನಾ ಸಂಸ್ಥೆಯಾದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಈ ಸುದ್ದಿಯನ್ನು ಸಂಪೂರ್ಣವಾಗಿ ನಕಲಿ ಮತ್ತು ವಂಚನೆ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದಿಂದ ಇಂತಹ ಯಾವುದೇ ದೀಪಾವಳಿ ಬೋನಸ್ ಯೋಜನೆ ಘೋಷಣೆಯಾಗಿಲ್ಲವಾದ್ದರಿಂದ ಯಾರೂ ಈ ಸುಳ್ಳು ಸಂದೇಶಗಳನ್ನು ನಂಬಿ ಮೋಸ ಹೋಗಬಾರದು ಎಂದು ಜಾಗೃತಿ ಮೂಡಿಸಿದೆ.

ಸೈಬರ್ ವಂಚಕರು ಜನರಿಗೆ ಮೋಸ ಮಾಡಲು ಅತ್ಯಂತ ಕಪಟ ತಂತ್ರಗಳನ್ನು ಬಳಸುತ್ತಿದ್ದಾರೆ. ಮೊದಲಿಗೆ ಹಣದಾಸೆ ತೋರಿಸಿ ವಾಟ್ಸ್​ಆ್ಯಪ್​ಗಳಲ್ಲಿ ನಕಲಿ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಸಾರ್ವಜನಿಕರು ಆ ಲಿಂಕ್ ತೆರೆದ ತಕ್ಷಣ, ಅವರ ಹೆಸರು, ಫೋನ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸೂಕ್ಷ್ಮ ವಿವರಗಳನ್ನು ನಮೂದಿಸಲು ಕೋರಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ವಂಚಕರು ಒಟಿಪಿ (OTP) ಅಥವಾ ಯುಪಿಐ ಪಿನ್ (UPI PIN) ಹಾಕುವಂತೆ ಪ್ರಚೋದಿಸುತ್ತಾರೆ. ಒಮ್ಮೆ ನೀವು ಈ ರಹಸ್ಯ ವಿವರಗಳನ್ನು ಹಂಚಿಕೊಂಡರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ವಂಚಕರು ಸೆಕೆಂಡುಗಳ ಅಂತರದಲ್ಲಿ ದೋಚಿ ಪರಾರಿಯಾಗುತ್ತಾರೆ. ಆದ್ದರಿಂದ, ಎಂಟು ಸಾವಿರ ರೂಪಾಯಿ ಆಸೆಗೆ ಬಿದ್ದು ನಿಮ್ಮ ಜೀವನದ ದುಡಿಮೆಯನ್ನು ಅಪಾಯಕ್ಕೆ ಸಿಲುಕಿಸಬೇಡಿ.

ಇಂತಹ ಆನ್‌ಲೈನ್ ಸೈಬರ್ ವಂಚನೆಗಳಿಂದ ಬಲಿಪಶುವಾಗುವುದನ್ನು ತಡೆಯಲು ಪ್ರತಿಯೊಬ್ಬರೂ ಕೆಲವೊಂದು ಪ್ರಮುಖ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ವಾಟ್ಸ್​ಆ್ಯಪ್​ ಅಥವಾ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ನಕಲಿ ಬೋನಸ್ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಹಾಗೂ ಇವುಗಳನ್ನು ಇತರರಿಗೆ ಫಾರ್ವರ್ಡ್ ಮಾಡಬಾರದು. ನಿಮ್ಮ ಬ್ಯಾಂಕ್ ವಿವರಗಳು, ಒಟಿಪಿ ಅಥವಾ ಯುಪಿಐ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಸರ್ಕಾರಿ ಯೋಜನೆಗಳ ಕುರಿತು ಅಧಿಕೃತ ಮಾಹಿತಿ ಬೇಕಿದ್ದರೆ ಕೇವಲ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಿ. ಒಂದು ವೇಳೆ ನೀವು ಆಕಸ್ಮಿಕವಾಗಿ ಇಂತಹ ಸೈಬರ್ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ರಾಷ್ಟ್ರೀಯ ಸೈಬರ್ ಹೆಲ್ಪ್‌ಲೈನ್ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ನೀಡಬಹುದು ಅಥವಾ cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು. ದೀಪಾವಳಿಯ ಹಬ್ಬದ ಅವಧಿಯಲ್ಲಿ ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿದ್ದರೆ ಇಂತಹ ಬೃಹತ್ ಆರ್ಥಿಕ ನಷ್ಟದಿಂದ ಸುಲಭವಾಗಿ ಪಾರಾಗಬಹುದು, (ಏಜೆನ್ಸೀಸ್​).