ಧುರಂಧರ್: ದಿ ರಿವೆಂಜ್, ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್
- ಹೋಳಿ ದಿನ ಧುರಂಧರ್ 2 ಟ್ರೇಲರ್ ಬಿಡುಗಡೆ
- ಬರೊಬ್ಬರಿ ನಾಲ್ಕು ಗಂಟೆಗಳ ಸಿನಿಮಾ ಧುರಂಧರ್ 2
- ಮಾರ್ಚ್ 19 ಕ್ಕೆ ತೆರೆ ಕಾಣಲಿರುವ ಧುರಂಧರ್ 2
ಮುಂಬೈ: ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ (Dhurandhar 2) ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು,ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ, ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ ಎಂದರೆ ತಪ್ಪಾಗದು.
ಹೋಳಿ ಹಬ್ಬಕ್ಕೆ ಟ್ರೇಲರ್ ಧಮಾಕಾ!
ವರದಿಗಳ ಪ್ರಕಾರ, ತಯಾರಕರು ಮಾರ್ಚ್ 3ರಂದು ಅಂದರೆ ಹೋಳಿ ಹಬ್ಬದ ಸಂಭ್ರಮಕ್ಕೆ ಒಂದು ದಿನ ಮುಂಚಿತವಾಗಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ವಿಶೇಷವೆಂದರೆ, ಯಾವುದೇ ಆಡಂಬರದ ರೆಡ್ ಕಾರ್ಪೆಟ್ ಈವೆಂಟ್ ಇಲ್ಲದೆ, ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ. 1 ನಿಮಿಷ 48 ಸೆಕೆಂಡುಗಳ ಈ ಟ್ರೇಲರ್ ಚಿತ್ರದ ಆಕ್ಷನ್ ಸನ್ನಿವೇಶಗಳ ಝಲಕ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ ಇತಿಹಾಸದಲ್ಲೇ ಅತಿ ಉದ್ದದ ಸಿನಿಮಾ?
ಧುರಂಧರ್ 2, ಹಿಂದಿ ಚಿತ್ರರಂಗದ ಅತ್ಯಂತ ಉದ್ದದ ಸಿನಿಮಾಗಳ ಪಟ್ಟಿಗೆ ಸೇರಲಿದೆ. ಚಿತ್ರದ ರನ್-ಟೈಮ್ ಬರೋಬ್ಬರಿ 235 ನಿಮಿಷಗಳು (ಅಂದರೆ 3 ಗಂಟೆ 55 ನಿಮಿಷಗಳು) ಇರಲಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ಇಷ್ಟು ದೀರ್ಘಾವಧಿಯ ಕಥೆಯನ್ನು ನಿರ್ದೇಶಕರು ಎಷ್ಟು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಈಗಾಗಲೇ ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ A (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಿದ್ದು, ಚಿತ್ರದಲ್ಲಿನ ತೀವ್ರವಾದ ಹಿಂಸಾಚಾರ ಮತ್ತು ಆಕ್ಷನ್ ಇದಕ್ಕೆ ಕಾರಣ ಎನ್ನಲಾಗಿದೆ.
ಬಲಿಷ್ಠ ತಾರಾಗಣದ
ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರಂತಹ ದಿಗ್ಗಜ ನಟರು ಈ ಚಿತ್ರದಲ್ಲಿದ್ದಾರೆ. ಯಾಮಿ ಗೌತಮ್ ರಹಸ್ಯ ಗುಪ್ತಚರ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್. ಕಥೆಯು ನಿಷ್ಠೆ, ಸೇಡು ಮತ್ತು ಅಧಿಕಾರಕ್ಕಾಗಿ ನಡೆಯುವ ಸಂಘರ್ಷದ ಸುತ್ತ ಸಾಗಲಿದ್ದು, ಹಮ್ಜಾ ಅಲಿ ಮಜಾರಿ ಪಾತ್ರದ ಮೂಲಕ ರಣವೀರ್ ಸಿನಿ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಮಹಾಸಂಗ್ರಾಮ: ಯಶ್ ವರ್ಸಸ್ ರಣವೀರ್!
ಮಾರ್ಚ್ 19, 2026ರಂದು ಸಿನಿಮಾ ತೆರೆಗೆ ಬರಲಿದೆ. ಆದರೆ ಅಂದು ಕೇವಲ ರಣವೀರ್ ಅಬ್ಬರ ಮಾತ್ರ ಇರುವುದಿಲ್ಲ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಕೂಡ ಅಂದೇ ಬಿಡುಗಡೆಯಾಗುತ್ತಿದೆ. ಜೊತೆಗೆ ಆದಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ಅವರ ಡಕೋಯಿಟ್ ಕೂಡ ರೇಸ್‌ನಲ್ಲಿದೆ. ಈ ಸಿನಿಮಾಗಳ ರಣರಂಗದಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,(ಏಜನ್ಸೀಸ್).