ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಮತಗಳ್ಳತನ ಆರೋಪವನ್ನು ಪುನರುಚ್ಚರಿಸಿದ ಬಳಿಕ ಪ್ರತಿಕ್ರಿಯಿಸಿರುವ ಬಿಜೆಪಿ, ಸುಳ್ಳು ಹೇಳುವುದರಲ್ಲಿ ರಾಹುಲ್ ಗಾಂಧಿ ಸೂಪರ್ ಪಿಎಚ್ಡಿ ಪಡೆದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಶನಿವಾರ(ನ. 28) ಸಾಯಂಕಾಲ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ತಮ್ಮ ಮತಳ್ಳತನ ಆರೋಪವನ್ನು ಪುನರುಚ್ಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಅಕ್ರಮ ಪ್ರಧಾನಿ' ಎಂದು ಕರೆದಿದ್ದರು. ಮತ್ತು ಡಿಲಿಮಿಟೇಷನ್ ಅನ್ನು ವಿರೋಧಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಭಾರತದಲ್ಲಿ ಕ್ಷೇತ್ರಗಳನ್ನು ಮರುರಚಿಸಲು ಬಿಜೆಪಿಗೆ ಖಾಲಿ ಚೆಕ್ ನೀಡಿದಂತಾಗುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಸುದ್ದಿಗೋಷ್ಠಿಗೆ ಪ್ರತಿಯಾಗಿ ತಡರಾತ್ರಿ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರ ಆರೋಪಗಳು ಅವರ ಹತಾಶೆಯನ್ನು ಪ್ರತಿಬಿಂಬಿಸುತ್ತವೆ. ನಾನು ಹೇಳಿದ್ದೇ ಸರಿ, ಇಲ್ಲದಿದ್ದರೆ ದಾರಿ ಬಿಡಿ ಎಂಬ ಧೋರಣೆಯನ್ನು ಹೊಂದಿದ್ದಾರೆ. ಅವರು ಸರ್ಕಾರ ನೀಡಿದ ವಿವರಣೆಗಳನ್ನು ಕೇಳಿಸಿಕೊಳ್ಳಲು ಅಥವಾ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿಗಳಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಾ ಬಂದಿವೆ ಎಂದು ಕಿಡಿಕಾರಿದ್ದಾರೆ. ಒಂದು ವೇಳೆ 2024ರ ಲೋಕಸಭಾ ಚುನಾವಣೆ ಅಕ್ರಮದಿಂದ ಕೂಡಿತ್ತು ಎಂದಾದ್ರೆ, ಅವರು ಸಂಸತ್ತಿನ ತಮ್ಮ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರು 14 ಕೋಟಿ ನಕಲಿ ಮತದಾರರಿದ್ದಾರೆ ಎಂದು ಹೇಳಿದ್ದಾರೆ. ಇದರಲ್ಲಿ 2.8 ಕೋಟಿ ಮೃತಪಟ್ಟವರು, 6.3 ಕೋಟಿ ಬೇರೆಡೆಗೆ ಸ್ಥಳಾಂತರಗೊಂಡವರು, ಒಂದು ಕೋಟಿ ನಕಲು ಮತದಾರರು ಮತ್ತು ಮೂರು ಕೋಟಿ ಪತ್ತೆಯಾಗದವರು ಸೇರಿದ್ದಾರೆ. ಇವರೆಲ್ಲರನ್ನೂ 'ನಕಲಿ' ಎಂದು ಹೇಗೆ ಕರೆಯಲು ಸಾಧ್ಯ? ಅವರು ಸ್ಥಳಾಂತರಗೊಂಡ ಹೊಸ ಸ್ಥಳಗಳಲ್ಲಿ ಮತ ಚಲಾಯಿಸಿರಬಹುದು. ಸುಳ್ಳು ಹೇಳುವುದರಲ್ಲಿ ರಾಹುಲ್ ಗಾಂಧಿ 'ಸೂಪರ್-ಡಾಕ್ಟರೇಟ್' ಪದವಿ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಂಸದರ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವುದರಿಂದ ಸರ್ವಾಧಿಕಾರ ಬರುತ್ತದೆ ಎಂಬ ಹೇಳಿಕೆಗೆ ಕಿಡಿಕಾರಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮೂರು ಬಾರಿ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ನಡೆಯಿತು. ಆಗ ಸರ್ವಾಧಿಕಾರ ಬಂತೇ? ಅವರ ಅಜ್ಜಿಯವರು ಅಲಹಾಬಾದ್ ಹೈಕೋರ್ಟ್ ಪ್ರಕರಣದಲ್ಲಿ ಸೋತ ನಂತರ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಸರ್ವಾಧಿಕಾರ ಬಂದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).