ದೆಹಲಿಯ ಶಹದಾರಾ ರೈಲು ನಿಲ್ದಾಣದಲ್ಲಿ ಯುವಕನ ಕೊಲೆ 
ದೇಶ

ರೈಲು ಹತ್ತೋ ಗಡಿಬಿಡಿಯಲ್ಲಿ ಹೆಣವಾಯ್ತು ಜೀವ! ಪ್ಲಾಟ್‌ಫಾರ್ಮ್​ನಲ್ಲಿ ಯುವಕನನ್ನು ಹೊಡೆದು ಕೊಂದ ಸಹ ಪ್ರಯಾಣಿಕರು! Delhi Railway Station Murder

ನವದೆಹಲಿ: ರೈಲು ಹತ್ತಬೇಕು ಎನ್ನುವ ಧಾವಂತ, ಸೀಟು ಹಿಡಿಯಬೇಕು ಎನ್ನುವ ಹಪಾಹಪಿಗೆ ಶುರುವಾದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಒಬ್ಬನ ಜೀವವನ್ನೇ ಬಲಿಪಡೆದ ಘಟನೆ  ದೆಹಲಿಯ ಶಹದಾರಾ ರೈಲು ನಿಲ್ದಾಣದಲ್ಲಿ (Delhi Railway Station Murder)  ನಡೆದಿದೆ.
ಶನಿವಾರ (ಜೂ.20) ಪೂರ್ವ ದೆಹಲಿಯ ಶಹದಾರಾ ರೈಲು ನಿಲ್ದಾಣದಲ್ಲಿ ಯೋಗ ಎಕ್ಸ್‌ಪ್ರೆಸ್ ರೈಲು ಹತ್ತಲು ಹೋಗುತ್ತಿದ್ದ 32 ವರ್ಷದ ಯುವಕನನ್ನು ಸಹ ಪ್ರಯಾಣಿಕರೇ ಮನಬಂದಂತೆ ಥಳಿಸಿ ಕೊಂದಿರುವ ಭೀಕರ ಘಟನೆ ವರದಿಯಾಗಿದೆ.

ಪ್ಲಾಟ್‌ಫಾರ್ಮ್ ನಂ. 3 ರಲ್ಲಿ ನಡೆದಿದ್ದೇನು?

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಭೀಕರ ಘಟನೆ  ಶಹದಾರಾ ರೈಲ್ವೆ ನಿಲ್ದಾಣದ 3ನೇ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದೆ. ಹರಿದ್ವಾರ ಮತ್ತು ಅಹಮದಾಬಾದ್ ನಡುವೆ ಸಂಚರಿಸುವ ಯೋಗ ಎಕ್ಸ್‌ಪ್ರೆಸ್ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ, ರೈಲು ಹತ್ತಲು ಪ್ರಯಾಣಿಕರ ನಡುವೆ ತಳ್ಳಾಟ ಶುರುವಾಗಿದೆ. 
ಈ ಗಡಿಬಿಡಿಯಲ್ಲೇ ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿ ಪಂಕಜ್ ಧಾಮಾ (32) ಹಾಗೂ ಇತರ ಕೆಲವು ಸಹ ಪ್ರಯಾಣಿಕರ ನಡುವೆ ಮಾತಿಗೆ ಮಾತು ಬೆಳೆದಿದೆ. ರೈಲು ಹತ್ತುವ ಸಣ್ಣ ವಿಚಾರಕ್ಕೆ ಶುರುವಾದ ಜಗಳ ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ. ಕೋಪೋದ್ರಿಕ್ತರಾದ ಸಹ ಪ್ರಯಾಣಿಕರ ಗುಂಪೊಂದು ಪಂಕಜ್ ಧಾಮಾ ಅವರ ಮೇಲೆ ಮುಗಿಬಿದ್ದಿದೆ.

ಗುದ್ದಿ, ಒದ್ದು ಪ್ರಾಣ ತೆಗೆದ ಉದ್ರಿಕ್ತರು!

ಪ್ರತ್ಯಕ್ಷದರ್ಶಿಗಳ ಪ್ರಕಾರ, ಜಗಳ ತಾರಕಕ್ಕೇರುತ್ತಿದ್ದಂತೆ ನಾಲ್ಕೈದು ಜನರ ಗುಂಪು ಪಂಕಜ್‌ನನ್ನು ಸುತ್ತುವರೆದು ಮನಬಂದಂತೆ ಥಳಿಸಲು ಶುರು ಮಾಡಿದೆ. ಅಷ್ಟಕ್ಕೇ ನಿಲ್ಲದ ಉದ್ರಿಕ್ತರು ಪಂಕಜ್ ಧಾಮಾ ಮೇಲೆ  ಬೂಟುಗಾಲಿನಿಂದ ಹೊಟ್ಟೆ ಹಾಗೂ ಎದೆಗೆ ಮನಬಂದಂತೆ ಒದ್ದಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲೇ ಪಂಕಜ್ ಪ್ರಜ್ಞೆ ತಪ್ಪಿ ಬಿದ್ದರೂ ಬಿಡದ ಪಾಪಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆ ಬಗ್ಗೆ ಹಳೆ ದೆಹಲಿ ರೈಲು ನಿಲ್ದಾಣದ ಪೊಲೀಸ್ ಠಾಣೆಗೆ ಮಾಹಿತಿ ಸಿಗುತ್ತಿದ್ದಂತೆ ತನಿಖಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಂಕಜ್‌ನನ್ನು ಪೊಲೀಸರು ತಕ್ಷಣವೇ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ತಡವಾಗಿತ್ತು. ಪಂಕಜ್‌ನನ್ನು ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ರೈಲು ಹತ್ತಿ ಆರಾಮಾಗಿ ಮನೆಗೆ ಹೋಗಬೇಕಿದ್ದ ಯುವಕ ಹೆಣವಾಗಿ ಮರಳಿದ್ದನ್ನು ನೋಡಿ ಆತನ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಹಂತಕರ ಪತ್ತೆಗೆ ಸಿಸಿಟಿವಿ ಜಾಲಾಡುತ್ತಿರುವ ಪೊಲೀಸರು!

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿರುವ ಕಿರಾತಕರನ್ನು ಪತ್ತೆಹಚ್ಚಲು ಪೊಲೀಸರು ಶಹದಾರಾ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಪೂರ್ಣವಾಗಿ ಜಾಲಾಡುತ್ತಿದ್ದಾರೆ. ಜೊತೆಗೆ ಘಟನೆಯ ಸಮಯದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮತ್ತು ರೈಲ್ವೆ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್​).