ಧರಣಿಗೆ ಅನುಮತಿ ನೀಡದ ದೆಹಲಿ ಪೊಲೀಸ್​ 
ದೇಶ

ದೆಹಲಿಯಲ್ಲಿ ಜಿರಳೆಗಳ ಧರಣಿ: ನಮ್ಮ ಅನುಮತಿ ಪಡೆದಿಲ್ಲ; ಪಮಿರ್ಷನ್​ ಇಲ್ಲದ ಪ್ರತಿಭಟನೆಯನ್ನು ನಿಗ್ರಹಿಸುತ್ತೇವೆ, ದೆಹಲಿ ಪೊಲೀಸ್​ ವಾರ್ನಿಂಗ್​! Delhi Police Warning to Cockroach Janta Party

ಪ್ರಮುಖ ಮುಖ್ಯಾಂಶಗಳು

  • ನಾಳೆ (ಜೂ.6) ದೆಹಲಿಯಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ಧರಣಿ
  • ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ, ಶಿಕ್ಷಣ ಸಚಿವರ ರಾಜೀನಾಮೆ ಕೇಳಿರುವ ಜಿರಳೆ ಪಕ್ಷ
  • ಧರಣಿಗೆ ಆಗಮಿಸುತ್ತಿರುವ ಪಕ್ಷದ ಸ್ಥಾಪಕ ಅಭಿಜಿಟ್​ ದಿಫ್ಕೆ
  • ಆದರೆ ಧರಣಿಗೆ ಅನುಮತಿ ನೀಡದ ದೆಹಲಿ ಪೊಲೀಸ್​
ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಂಬನಾತ್ಮಕ ರಾಜಕೀಯ ಸಂಘಟನೆ ಕಾಕ್ರೋಚ್ ಜನತಾ ಪಕ್ಷ (CJP) ಈಗ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಪ್ಲಾನ್ ಮಾಡಿದೆ. ಆದರೆ, ಈ ಜಿರಳೆ ಪಕ್ಷದ ಪ್ರತಿಭಟನೆಗೆ ದೆಹಲಿ ಪೊಲೀಸರು ಇನ್ನೂ ಅಧಿಕೃತವಾಗಿ ಯಾವುದೇ ಅನುಮತಿ ನೀಡಿಲ್ಲ (Delhi Police Warning to Cockroach Janta Party) ಎಂದು ಶುಕ್ರವಾರ (ಜೂ.5)ಸ್ಪಷ್ಟಪಡಿಸಿದ್ದಾರೆ.

ಏನಿದು ಕಾಕ್ರೋಚ್ ಪಕ್ಷದ ಧರಣಿ?

ದೇಶದಲ್ಲಿ ನೀಟ್ (NEET), ಸಿಬಿಎಸ್‌ಇ (CBSE) ಮತ್ತು ಸಿಟಿಯುಇ (CUET) ನಂತಹ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಣಿ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳು ಭುಗಿಲೆದ್ದ ಬೆನ್ನಲ್ಲೇ ಈ ಡಿಜಿಟಲ್ ಸಂಘಟನೆ ಧರಣಿ ನಡೆಸುವುದಾಗಿ ಹೇಳಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೋಷಿಯಲ್ ಮೀಡಿಯಾದಲ್ಲಿ ಈ ಪಕ್ಷ ಭಾರೀ ಸದ್ದು ಮಾಡುತ್ತಿದೆ. ಇದರ ಸಂಸ್ಥಾಪಕ ಅಭಿಜಿತ್ ದಿಪ್ಕೆ ಎಂಬ ಯುವಕ ಸದ್ಯ ಅಮೆರಿಕದ ಬೋಸ್ಟನ್‌ನಲ್ಲಿದ್ದು, ನಾಳೆ (ಜೂ.6) ನಡೆಯಲಿರುವ ಧರಣಿಗೆ ಹಾಜರಾಗುವುದಾಗಿ ಹೇಳಿದ್ದಾನೆ.

ಸಂವಿಧಾನದ ಕೈಗೆ ನನ್ನ ಹಣೆಬರಹ ಬಿಟ್ಟಿದ್ದೇನೆ

ಪ್ರತಿಭಟನೆಯನ್ನು ಕೇವಲ ಆನ್‌ಲೈನ್‌ಗೆ ಸೀಮಿತಗೊಳಿಸದ ಅಭಿಜಿತ್ ದಿಪ್ಕೆ, ಈಗ ನೇರವಾಗಿ ಕಣಕ್ಕಿಳಿಯಲು ಅಮೆರಿಕದಿಂದ ಭಾರತಕ್ಕೆ ವಿಮಾನ ಹತ್ತಿದ್ದಾನೆ. ಶುಕ್ರವಾರ (ಜೂ.5) ಬೆಳಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿರುವ ಆತ, ಭಾರತಕ್ಕೆ ಮರಳುತ್ತಿದ್ದೇನೆ, ನನ್ನ ಹಣೆಬರಹವನ್ನು ದೇಶದ ಸಂವಿಧಾನದ ಕೈಯಲ್ಲಿ ಇಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸಿಸ್ಟಮ್ ಆಟವಾಡುತ್ತಿದೆ, ಇದಕ್ಕೆ ಯಾರಾದರೂ ಒಬ್ಬರು ಹೊಣೆ ಹೊರಲೇಬೇಕು ಎಂಬುದು ದಿಪ್ಕೆ ವಾದ. ಜೈಲಿಗೆ ಹೋಗಲು ರೆಡಿಯಾಗಿಯೇ ಆತ ಭಾರತಕ್ಕೆ ಬರುತ್ತಿರುವುದು ಯುವ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಏರ್‌ಪೋರ್ಟ್‌ಗೆ ಬರಬೇಡಿ: ಬೆಂಬಲಿಗರಿಗೆ ದಿಪ್ಕೆ ಮನವಿ

ಮೊದಲಿನ ಪ್ಲಾನ್ ಪ್ರಕಾರ ದೆಹಲಿ ಏರ್‌ಪೋರ್ಟ್‌ಗೆ ಬಂದು ತನ್ನನ್ನು ಸ್ವಾಗತಿಸುವಂತೆ ದಿಪ್ಕೆ ಬೆಂಬಲಿಗರಲ್ಲಿ ಕೇಳಿಕೊಂಡಿದ್ದ. ಆದರೆ, ನಿರೀಕ್ಷೆಗೂ ಮೀರಿದ ಜನಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ನಿರ್ಧಾರ ಬದಲಿಸಿದ್ದಾನೆ. ಏರ್‌ಪೋರ್ಟ್‌ನಲ್ಲಿ ಜನಸಂದಣಿಯಾದರೆ ಸಾರ್ವಜನಿಕರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ತೊಂದರೆಯಾಗುತ್ತದೆ. ಹಾಗಾಗಿ ಯಾರೂ ಏರ್‌ಪೋರ್ಟ್‌ಗೆ ಬರಬೇಡಿ.
ನಾನು ನೇರವಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಷನ್‌ಗೆ ಹೋಗಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ಕೇಳುತ್ತೇನೆ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾನೆ. ಈ ಮೂಲಕ ತಾವೊಬ್ಬ ಕಾನೂನು ಗೌರವಿಸುವ ನಾಗರಿಕ ಎಂಬುದನ್ನು ಆತ ಸಾಬೀತುಪಡಿಸಲು ಹೊರಟಿದ್ದಾನೆ. ಈ ಹೋರಾಟಕ್ಕೆ ಪ್ರಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಕೂಡ ಬೆಂಬಲ ಘೋಷಿಸಿದ್ದಾರೆ.

ಅಲರ್ಟ್ ಆದ ದೆಹಲಿ ಪೊಲೀಸ್!

ಇತ್ತ ಕಾಕ್ರೋಚ್ ಪಾರ್ಟಿಯ ಪ್ಲಾನ್ ತಿಳಿಯುತ್ತಿದ್ದಂತೆ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪ್ರತಿಭಟನೆಗೆ ನಮಗೆ ಯಾವುದೇ ಅಧಿಕೃತ ಅರ್ಜಿ ಬಂದಿಲ್ಲ. ಅರ್ಜಿ ಬಂದ ತಕ್ಷಣ ಅದನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸುತ್ತೇವೆ.
ಆದರೆ ನಾವು ಎಲ್ಲಾ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದಿದ್ದಾರೆ. ಒಂದು ವೇಳೆ ಅನುಮತಿ ಇಲ್ಲದೇ ಇದ್ದರೂ ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಜಮಾಯಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕೋ ಅದನ್ನು ಮಾಡುವುದಾಗಿ ತಿಳಿಸಿದ್ದಾರೆ, (ಏಜನ್ಸೀಸ್​).