ಪಾಕಿಸ್ತಾನದ ISI ಪರ ಬೇಹುಗಾರಿಕೆ ನಡೆಸುತ್ತಿದ್ದ ದಂಪತಿಗಳ ಬಂಧನ
- ಪಾಕಿಸ್ತಾನದ ISI ಪರ ಬೇಹುಗಾರಿಕೆ ನಡೆಸುತ್ತಿದ್ದ ದಂಪತಿಗಳ ಬಂಧನ
- ಭಾರತದ ಮೊಬೈಲ್ ಸಿಮ್ಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಸಾಹಿಲ್, ಸಮೀರಾ
- ದೆಹಲಿ ಪೊಲೀಸ್ ವಿಶೇಷ ತಂಡದಿಂದ ಯಶಸ್ವಿ ಕಾರ್ಯಾಚರಣೆ
ನವದೆಹಲಿ: ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಗುಪ್ತಚರ ಇಲಾಖೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಗೆ ಕೆಲಸ ಮಾಡುತ್ತಿದ್ದ ದಂಪತಿ
(ISI Spy Couple Arrested) ಗಳನ್ನು ದೆಹಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಇವರು 2024 ರಿಂದ ಭಾರತದ ಮಾಹಿತಿಗಳನ್ನು ಶತ್ರು ದೇಶಕ್ಕೆ ರವಾನಿಸುತ್ತಿದ್ದ ಹಿನ್ನಲೆ ಸಾಹಿಲ್ ಮತ್ತು ಸಮೀರಾ ಎಂಬ ದಂಪತಿಗಳನ್ನು ವಶಕ್ಕೆ ಪಡೆದಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನಕ್ಕೆ ಸಿಮ್ ಕಳುಹಿಸುವುದೇ ಇವರ ಕೆಲಸ!
ದೆಹಲಿ ಪೊಲೀಸರು ಕಳೆದ ಕೆಲ ತಿಂಗಳುಗಳಿಂದ ಈ ದಂಪತಿಗಳ ಮೇಲೆ ಕಣ್ಣಿರಿಸಿದ್ದು, ಇವರಿಗೆ ಇಸ್ಲಾಮಾಬಾದ್, ಕಾರಚಿ, ರಾವಲ್ಪಿಂಡಿ, ಲಾಹೋರ್ನಿಂದ ಹಣ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ. ನಂತರ ಇವರಿಬ್ಬರು ಭಾರತದಲ್ಲಿ ಮೊಬೈಲ್ ಸಿಮ್ಗಳನ್ನು ಖರೀದಿಸಿ ಅದನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
2024-25 ರಲ್ಲಿ ಈ ದಂಪತಿಗಳು ಭಾರತದ ಎಂಟು ಸಿಮ್ಗಳನ್ನು ದುಬೈ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿದ್ದು, 30 ಸಾವಿರ ಹಣವನ್ನು ಪಡೆದಿದ್ದಾಗಿ ಪತ್ತೆಯಾಗಿದೆ. ಭಾರತದ ಈ ಸಿಮ್ಗಳನ್ನು ಪಾಕಿಸ್ತಾನದಲ್ಲಿ ವಾಟ್ಸ್ಆಪ್ ಇನ್ಸ್ಟಾಲ್ ಮಾಡಿಕೊಂಡು, ಅದರ ಮೂಲಕ ಭಾರತದ ಯುವಕರನ್ನು ಉಗ್ರಕೃತ್ಯಗಳತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರೆಂದು ಹೇಳಲಾಗುತ್ತಿದೆ.
ಬಂಧಿತರ ಹಿನ್ನಲೆ ಏನು?
ಈಗ ಪಾಕಿಸ್ತಾನಕ್ಕೆ ಭಾರತದ ಸಿಮ್ಗಳನ್ನು ರವಾನಿಸಿದ್ದ ಸಾಹಿಲ್ ಮತ್ತು ಸಮೀರಾ ಇಬ್ಬರೂ ವಿದ್ಯಾವಂತರಾಗಿದ್ದು, ಸಾಹಿಲ್ ಬಿಎ ಪದವಿ ಪಡೆದಿದ್ದು, ಕೆಲ ಕಾಲ ವಕೀಲರೊಬ್ಬರ ಜೊತೆ ಕೆಲಸ ಮಾಡುತ್ತಿದ್ದು, ತಾನೂ ಕಾನೂನು ಪದವಿ ಪಡೆಯ ಬಯಸಿದ್ದಾಗಿ ತಿಳಿದು ಬಂದಿದೆ.
ಇನ್ನು ಸಮೀರಾ ಕೂಡ ಬಿಎ ಪದವಿ ಪಡೆದಿದ್ದು, ನೋಯ್ಡಾದಲ್ಲಿ ಕಾಲ್ ಸೆಂಟರ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗಿ ತಿಳಿದಿದೆ. ಮಾಹಿತಿ ಪ್ರಕಾರ, ಈ ಇಬ್ಬರು ಅಪರಾಧ ಹಿನ್ನಲೆಯಿಂದ ಬರಲಿಲ್ಲವಾದರೂ, ಸೋಷಿಯಲ್ ಮೀಡಿಯಾ ಮೂಲಕ ಪಾಕಿಸ್ತಾನದವರ ಸಂಪರ್ಕಕ್ಕೆ ಬಂದಿದ್ದು, ಹಣದಾಸೆಗೆ ಈ ಕೆಸಲ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಆದರೆ, ಇವರನ್ನು ಯಾರು? ಹೇಗೆ? ಸಂಪರ್ಕಿಸಿದರು. ಇವರು ಯಾವ ಹೆಸರಿನಲ್ಲಿ ಸಿಮ್ ಖರಿದಿಸಿದರು? ಹಣದ ವರ್ಗಾವಣೆ ಯಾವ ಮೂಲಕ ನಡೆದಿತ್ತು? ಈ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಏನು ಮಾಡಲಾಗುತ್ತಿತ್ತು? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಪೊಲೀಸರ ತನಿಖೆ ನಂತರ ಹೊರ ಬೀಳಲಿರುವ ವರದಿಯೇ ನೀಡಬೇಕಿದೆ, (ಏಜನ್ಸೀಸ್).