ಸೋನಮ್ ವಾಂಗ್ಚುಕ್ ಮತ್ತು ಪತ್ನಿ ಗೀತಾಂಜಲಿ ಅಂಗ್ಮೋ
ನವದೆಹಲಿ: ಹೋರಾಟಗಾರ ಸೋನಮ್ ವಾಂಗ್ಚುಕ್ರನ್ನು(Sonam Wangchuk) ಸಫ್ದರ್‌ಜಂಗ್ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ಭಾನುವಾರ(ಜು. 19) ನಿರಾಕರಿಸಿದ್ದು, ಈ ಹಂತದಲ್ಲಿ ಅಂತಹ ನಿರ್ದೇಶನ ಅಗತ್ಯವಿಲ್ಲ ಎಂದು ಹೇಳಿದೆ. ಮತ್ತು ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.
ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕೋರಿ ವಾಂಗ್ಚುಕ್ ಪತ್ನಿ ಗೀತಾಂಜಲಿ ಅಂಗ್ಮೋ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ಪೀಠವು, ಘಟನೆಯ ವಿಶಾಲ ಚಿತ್ರಣವನ್ನು ಪರಿಗಣಿಸಬೇಕು. ಅದಾಗ್ಯೂ ಅವರ ಆರೋಗ್ಯದ ಬಗ್ಗೆ ಮೂರು ದಿನಗಳಲ್ಲಿ ಹೊಸ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಜೊತೆಗೆ ಪ್ರತಿಯೊಂದು ಜೀವವೂ ಅಮೂಲ್ಯ ಎಂದು ಪೀಠವು ಹೇಳಿದ್ದು, ವಾಂಗ್ಚುಕ್ ಬಂಧನದಲ್ಲಿಲ್ಲ. ಮತ್ತು ಅವರ ಪತ್ನಿ, ಸಹೋದರ ಹಾಗೂ ಮೈದುನನಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಕುಟುಂಬಕ್ಕೆ ಪ್ರತ್ಯೇಕ ಕೊಠಡಿ ಒದಗಿಸಲಾಗಿದ್ದು, ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿದೆ ಎಂಬುದನ್ನು ಕೋರ್ಟ್ ಗಮನಿಸಿತು. ಹಾಗಾಗಿ ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸುವ ಅಗತ್ಯವಿಲ್ಲ ಹೇಳಿದೆ.
ಪತ್ನಿ ಗೀತಾಂಜಲಿ ಆಂಗ್ಮೋ ಆರೋಪ
ಜಂತರ್ ಮಂತರ್‌ನಲ್ಲಿ ಸತತ 21 ದಿನಗಳಿಂದ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್ಚುಕ್ರನ್ನು ಚಿಕಿತ್ಸೆಯ ನೆಪದಲ್ಲಿ ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಅವರ ಪತ್ನಿ ಗೀತಾಂಜಲಿ ಆರೋಪಿಸಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅವರನ್ನು ಮುಂದುವರಿಸಿರುವ ಕ್ರಮವು ಅಸಂವಿಧಾನಿಕವಾಗಿದ್ದು, ಸಂವಿಧಾನದ 19 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ.
ಕಳೆದ 20 ದಿನಗಳಿಂದ ವಾಂಗ್ಚುಕ್ರನ್ನು ಪರೀಕ್ಷಿಸುತ್ತಿದ್ದ ವೈದ್ಯರು ಅಥವಾ ಅವರ ಕಾನೂನು ಸಲಹೆಗಾರರನ್ನು ಭೇಟಿಯಾಗಲು ಬಿಡದೆ, ಅವರನ್ನು ಸಂಪೂರ್ಣವಾಗಿ ಐಸೊಲೇಷನ್‌ನಲ್ಲಿ ಇಡಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು (ಏಜೆನ್ಸೀಸ್).