ಹಿಟ್ಟಿನ ಗಿರಣಿ ಮತ್ತು ಎಲೆಕ್ಟ್ರಾನಿಕ್​ ಯಂತ್ರ 
ದೇಶ

ಬಾಂಬ್​ಗೆ ಬೇಕಾದ ಕೆಮಿಕಲ್ಸ್​ ತಯಾರಿಸಲು ಹಿಟ್ಟಿನ ಗಿರಣಿ ಬಳಕೆ: ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು! Delhi Blast

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ಪ್ರಕರಣ ತನಿಖೆ ಚುರುಕು
  • ಎನ್​ಐಎ ನಡೆಸುತ್ತಿರುವ ತನಿಖೆಯಲ್ಲಿ ಬೆಳಕಿಗೆ ಬರುತ್ತಿವೆ ಸಾಕಷ್ಟು ಆಘಾತಕಾರಿ ಮಾಹಿತಿಗಳು
  • ಸ್ಫೋಟಕಗಳಿಗೆ ಕೆಮಿಕಲ್ಸ್ ತಯಾರಿಸಲು ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದ ವೈದ್ಯ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ( Delhi Blast ) ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಾಕಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದ ಸಹ-ಆರೋಪಿಯಾಗಿರುವ ಡಾ. ಮುಜಾಮಿಲ್​ ಶಕೀಲ್​ ಗನೈ, ಸ್ಫೋಟಕಗಳಿಗೆ ಕೆಮಿಕಲ್ಸ್ ತಯಾರಿಸಲು ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದ ಎಂಬ ಶಾಕಿಂಗ್​ ಸಂಗತಿ ಬಹಿರಂಗವಾಗಿದೆ.
ಹರಿಯಾಣದ ಫರೀದಬಾದ್​ ಮೂಲದ ಕಾರು ಚಾಲಕನ ಮನೆಯಲ್ಲಿ ವಶಕ್ಕೆ ಪಡೆಯಲಾದ ಎಲೆಕ್ಟ್ರಾನಿಕ್​ ಯಂತ್ರ ಮತ್ತು ಹಿಟ್ಟಿನ ಗಿರಣಿಯ ಫೋಟೋ ತಮಗೆ ಲಭ್ಯವಾಗಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಅದೇ ಹಿಟ್ಟಿನ ಗಿರಣಿಯ ಸಹಾಯದಿಂದ ಆರೋಪಿ ಗನೈ ಕೆಮಿಕಲ್ಸ್​ ತಯಾರಿಸುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಆರೋಪಿ ಗನೈ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ನಿವಾಸಿ. ನವೆಂಬರ್​ 10 ರಂದು ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಈತ ಫರೀದಾಬಾದ್ ಮೂಲದ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅಲ್ಲದೆ, ಫರೀದಾಬಾದ್​ನಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆ ಮನೆಯಲ್ಲಿ ಆತ ರಾಯನಿಕಗಳನ್ನು ತಯಾರಿಸಲು ಹಿಟ್ಟಿನ ಗಿರಣಿ ಬಳಸುತ್ತಿದ್ದ. ಅದೇ ಮನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸರು ಬರೋಬ್ಬರಿ 360 ಕೆಜಿ ತೂಕದ ಅಮೋನಿಯಂ ನೈಟ್ರೇಟ್​ ಮತ್ತು ಇನ್ನಿತರ ಸ್ಫೋಟಕಗಳನ್ನು ನವೆಂಬರ್​ 9 ರಂದು ವಶಕ್ಕೆ ಪಡೆದರು.
ಆರೋಪಿ ಗನೈ, ಯೂರಿಯಾವನ್ನು ಹಿಟ್ಟಿನ ಗಿರಣಿಯಲ್ಲಿ ಪುಡಿಮಾಡಿ ಅದನ್ನು ನುಣ್ಣಗೆ ಮಾಡುತ್ತಿದ್ದ. ಇದಾದ ನಂತರ ಅದನ್ನು ವಿದ್ಯುತ್ ಯಂತ್ರದಿಂದ ಸಂಸ್ಕರಿಸಿ ರಾಸಾಯನಿಕಗಳನ್ನು ತಯಾರಿಸುತ್ತಿದ್ದ. ಸದ್ಯ ಬಂಧನದಲ್ಲಿರುವ ಗನೈ, ತನಿಖಾಧಿಕಾರಿಗಳ ಬಳಿ ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ. ಅದೇನೆಂದರೆ, ಆತ ಯೂರಿಯಾದಿಂದ ಅಮೋನಿಯಂ ನೈಟ್ರೇಟ್ ಅನ್ನು ಬೇರ್ಪಡಿಸಲು ಮತ್ತು ಸ್ಫೋಟಕಗಳನ್ನು ಸಂಸ್ಕರಿಸಲು ದೀರ್ಘಕಾಲದವರೆಗೆ ಹಿಟ್ಟಿನ ಗಿರಣಿಯನ್ನು ಬಳಸಿರುವುದಾಗಿ ತಿಳಿಸಿದ್ದಾನೆ.
ದೆಹಲಿ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಟ್ಯಾಕ್ಸಿ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಅಲ್-ಫಲಾಹ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ತನ್ನ ಮಗನನ್ನು ಕರೆದುಕೊಂಡು ಹೋದಾಗ ಆರೋಪಿ ಗನೈನನ್ನು ಭೇಟಿಯಾಗಿದ್ದಾಗಿ ಚಾಲಕ ಎನ್‌ಐಎಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಸ್ಫೋಟ ಪ್ರಕರಣದಲ್ಲಿ ಗನೈ ಮತ್ತು ಅಲ್-ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ಸಹೋದ್ಯೋಗಿಗಳಾದ ಉತ್ತರ ಪ್ರದೇಶದ ಲಖನೌ ಮೂಲದ ಶಾಹೀನ್ ಸಯೀದ್ ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನ ಅದೀಲ್ ಅಹ್ಮದ್ ರಾಥರ್ ಎಂಬುವವರನ್ನೂ ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೆಂಪು ಕೋಟೆ ಬಳಿ ಐ20 ಕಾರು ಸ್ಫೋಟಿಸಿದ ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ ಕೂಡ ವೈದ್ಯ. ಈತ ಕೂಡ ಕಾಶ್ಮೀರ ಮೂಲದವನು. ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು.
ನವೆಂಬರ್​ 10ರಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಮತ್ತು ಅಲ್-ಖೈದಾಗೆ ಸಂಬಂಧಿಸಿದ ಭಯೋತ್ಪಾದಕ ಸಂಘಟನೆ ಅನ್ಸರ್ ಘಜ್ವತ್-ಉಲ್-ಹಿಂದ್‌ಗೆ ಸಂಬಂಧಿಸಿದ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ "ವೈಟ್-ಕಾಲರ್" ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿರುವುದಾಗಿ ಘೋಷಿಸಿದರು. ಅಲ್ಲದೆ, ಸುಮಾರು 2900 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದು, ಶಂಕಿತ ವೈದ್ಯರನ್ನು ವಶಕ್ಕೆ ಪಡೆದರು. ಅದೇ ದಿನ ಸಂಜೆ ಉಮರ್​ ನಬಿ ಕೆಂಪು ಕೋಟೆ ಬಳಿ ಕಾರು ಸ್ಫೋಟಿಸಿದನು. ಸದ್ಯ ತನಿಖೆ ಮುಂದುವರಿದಿದ್ದು, ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಲೇ ಇವೆ, (ಏಜೆನ್ಸೀಸ್​).