Rajesh Gupta Join BJP | ಬಿಜೆಪಿ ಸೇರ್ಪಡೆಯಾದ ಆಮ್ ಆದ್ಮಿ ಮಾಜಿ ಶಾಸಕ ರಾಜೇಶ್ ಗುಪ್ತಾ 
ದೇಶ

Rajesh Gupta Join BJP | ಅದು ಬಳಸಿ ಬಿಸಾಡುವ ಪಕ್ಷ.. ಬಿಜೆಪಿ ಸೇರ್ಪಡೆ ವೇಳೆ ಕಣ್ಣೀರಿಟ್ಟ ಆಪ್​ ಮಾಜಿ ಶಾಸಕ; ಗುಪ್ತಾ ಭಾವುಕರಾಗಿದ್ದೇಕೆ..?

ದೆಹಲಿ: ದೆಹಲಿ ಮಹಾನಗರ ಪಾಲಿಕೆ ಉಪಚುನಾವಣೆಯ ಮತದಾನಕ್ಕೆ ಒಂದೇ ದಿನ ಬಾಕಿ ಉಳಿದಿದ್ದು, ನಡೆದ ಹಠಾತ್​ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ರಾಜೇಶ್ ಗುಪ್ತಾ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ಆಪ್​ ರಾಷ್ಟ್ರೀಯ ವಕ್ತಾರ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿಯೂ ಆಗಿದ್ದ ಗುಪ್ತಾ, ಶನಿವಾರ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ.
ಪಕ್ಷ ಸೇರ್ಪಡೆಯ ಬಳಿಕ ಮಾತನಾಡಿದ ಗುಪ್ತಾ, ಅಣ್ಣಾ ಹಜಾರೆ ಆಂದೋಲನದ ಸಮಯದಲ್ಲಿ, ತಮ್ಮ ಉದ್ಯೋಗಗಳನ್ನು ತೊರೆದ ಅನೇಕ ಜನರ ಬಗ್ಗೆ ಆಮ್​ ಆದ್ಮಿಗೆ ಕಾಳಜಿ ಇಲ್ಲ, ಅನೇಕ ಜನರು ಪಕ್ಷ ಬಿಡಲು ತುದಿಗಾಲ ಮೇಲೆ ನಿಂತಿದ್ದಾರೆ, ಅವರು ಆ ನಿರ್ಧಾರದಿಂದ ಹಿಂದೆ ಸರಿಯಬಾರದು. ಯಾವುದೇ ವ್ಯಕ್ತಿಯಾಗಲಿ ಗೌರವ ಸಿಗುವ ಕಡೆ ಇರುವುದು ಉತ್ತಮ ಎಂದರು. ಆಮ್​ ಆದ್ಮಿ ಪಕ್ಷದ ಸೋಲಿಗೆ ಬಳಸಿ ಬಿಸಾಡುವ ನೀತಿಯೇ ಕಾರಣ ಎಂದ ಗುಪ್ತಾ, ನಾನು ಅನೇಕ ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇನೆ, ಅರವಿಂದ್​ ಕೇಜ್ರಿವಾಲ್​ ನನ್ನೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ, ಭೇಟಿಗೂ ಅವಕಾಶ ನೀಡಿಲ್ಲ. ನಾನು ಅವರಿಗಾಗಿ ಹೋರಾಡಿದೆ, ವಕ್ತಾರನಾಗಿ ಪಕ್ಷ ಮತ್ತು ಅದರ ನಾಯಕರನ್ನು ಸಮರ್ಥಿಸಿಕೊಂಡಿದ್ದೇನೆ ಎಂದು ಹೇಳಿದರು.
ಆಮ್​ ಆದ್ಮಿ ಪಕ್ಷದಲ್ಲಿ ತಾವು ಎದುರಿಸಿದ ಅವಮಾನ ನೆನಪಿಸಿಕೊಂಡು ಭಾವುಕರಾದ ಗುಪ್ತಾ, ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕುತ್ತಾ ಮಾತನಾಡಿದರು. ಆಪ್​ ಸ್ಥಾಪನೆಯಾದಾಗ ಅನೇಕ ಗಣ್ಯ ವ್ಯಕ್ತಿಗಳು ಕೇಜ್ರಿವಾಲ್​ರೊಂದಿಗೆ ಕೈಜೋಡಿಸಿದರು ಆದರೆ ಇವರು ಎಲ್ಲರಿಗೂ ದ್ರೋಹ ಮಾಡಿದರು. ಈ ಕಾರದಿಂದಲೇ ಅನೇಕರು ಪಕ್ಷದಿಂದ ದೂರ ಸರಿಯಬೇಕಾಯಿತು, ಇಂದು ದುರದೃಷ್ಟವಶಾತ್ ನಾನು ಕೂಡ ಆ ಪಟ್ಟಿಗೆ ಸೇರಿದ್ದೇನೆ ಎಂದು ಹೇಳಿದರು(ಏಜೆನ್ಸೀಸ್​).